ಚಿಗುರಿದ ಕನಸು

ಐಎಂ ಕೃತಕ ಗರ್ಭಧಾರಣೆಯ ಒಂದು ಅಂಗ. ಈ ಪ್ರಕ್ರಿಯೆಯಲ್ಲಿ...
ಚಿಗುರಿದ ಕನಸು

ಐಎಂ ಕೃತಕ ಗರ್ಭಧಾರಣೆಯ ಒಂದು ಅಂಗ. ಈ ಪ್ರಕ್ರಿಯೆಯಲ್ಲಿ ಅಂಡಾಣುಗಳನು ದೇಹದ ಹೊರಭಾಗದಲ್ಲಿ ಪಕ್ವಗೊಳಿಸಲಾಗುತ್ತದೆ. ಆದ್ದರಿಂದಲೇ ಇದನ್ನು ಇನ್ ಟ್ರೊಮೆಚುರೇಷನ್ ಎನ್ನುತ್ತಾರೆ. ಅಂಡಾಣುಗಳು ಪಕ್ವಗೊಳ್ಳುವ ಮುನ್ನವೇ ಪಡೆದು ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ.

'ಇನ್ ಟ್ರೊ ಫರ್ಟಿಲೈಜೇಷನ್ (ಐಎಫ್)' ಹಾಗೂ 'ಇನ್ ಟ್ರೊ ಮೆಚುರೈಸೇಷನ್ (ಐಎಂ)' ವ್ಯಾಪಕವಾಗಿ ಕೇಳಿ ಬರುವ ವೈದ್ಯಕೀಯ ಪಾರಿಭಾಷಿಕ ಪದಗಳು. ಅತ್ಯಂತ ಸರಳವಾಗಿ ಹೇಳುವುದಾದರೆ ಕೃತಕ ಗರ್ಭಧಾರಣೆ. ವೈದ್ಯಕೀಯವಾಗಿ ಯಾವುದೇ ಸಮಸ್ಯೆಯೂ ಇಲ್ಲದೇ ಅಂಡಾಣು ಮತ್ತು ವೀರ್ಯಾಣುಗಳನ್ನು ಸೇರಿಸುವ ಪ್ರಕ್ರಿಯೆ.

ಇದರಿಂದಾಗುವ ಗರ್ಭಧಾರಣೆಯೇ ಐಟಿ ಅಥವಾ ಐ.ಎ. ಸಂಪೂರ್ಣ ಗೌಪ್ಯತೆ ಕಾಪಾಡುವ ಈ ವಿಧಾನದಿಂದ ಬೇರೆ ಮಗುವನ್ನು ದತ್ತು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರುವುದಿಲ್ಲ. ಈ ನವೀನ ತಂತ್ರಜ್ಞಾನದ ಫಲವಾಗಿ ಎಲ್ಲರಂತೆಯೇ ಸಂತಾನ ಪಡೆಯುವ ಭಾಗ್ಯ ಹೆಣ್ಣಿಗೊಲಿಯುತ್ತೆ. ದಾನಿಗಳು ಯಾರೆಂಬುದನ್ನೂ ಅನಿವಾರ್ಯ ಆಗದ ಹೊರತು ಬಹಿರಂಗ ಪಡಿಸುವುದಿಲ್ಲ.

1960 ರಲ್ಲಿ ಮೊಟ್ಟ ಮೊದಲ ಬಾರಿಗೆ ವೈದ್ಯಕೀಯ ಪ್ರಯೋಗಾಲಯದಲ್ಲಿ ಅಂಡಾಣುಗಳನ್ನು ಪರೀಕ್ಷೆಗೊಳಪಡಿಸಲಾಯಿತು. ಇವು ಪಕ್ವಗೊಳ್ಳುತ್ತವೆಯೇ ಎಂದು ಗಮನಿಸಲಾಯಿತು. ದುರದೃಷ್ಟವಶಾತ್ ಈ ಪ್ರಯೋಗ ವಿಫಲವಾಯಿತು. ಹಾಗೆಂದು ವೈದ್ಯ ವಿಜ್ಞಾನಿಗಳು ಕೈಕಟ್ಟಿ ಕೂರಲಿಲ್ಲ. ಪ್ರಯೋಗ ಮುಂದುವರಿಸಿದರು. ಗರ್ಭಧಾರಣೆಗೆ ಅಗತ್ಯವಾದ ಅಂಡಾಣುಗಳನ್ನು ಗರ್ಭಕೋಶ ಮಾದರಿಯೊಳಗೆ ಸೇರಿಸಲಾಯಿತು.

ಅಚ್ಚರಿಯೆಂದರೆ ಈ ಪ್ರಯೋಗ ಫಲ ನೀಡುವಲ್ಲಿ ಯಶಸ್ವಿಯಾಯಿತು. ಅದೂ ಅಲ್ಲದೇ ಅಂಡಾಣುಗಳನ್ನು ಸೇರಿಸುವಾಗ ಯಾವುದೇ ಔಷಧಿಗಳನ್ನು ಬಳಸಿರಲಿಲ್ಲ. ಆಗ ಒಂದೇ ಒಂದು ಅಂಡಾಣು ಸಹಜವಾಗಿಯೇ ಫಲ ನೀಡಿತು.

ನಂತರ ಹೊಸ ಔಷಧಿ, ಇಂಜೆಕ್ಷನ್ ಹಾಗೂ ವೈದ್ಯಕೀಯ ಸಾಧನಗಳ ಮೂಲಕ ಉತ್ತೇಜಕಗಳನ್ನು ಬಳಸಿ ಅಂಡಾಣುಗಳ ಉತ್ಪಾದನೆಯನ್ನು ಹೆಚ್ಚಿಸಲಾಯಿತು. ಈ ಫಲವಾಗಿ 1990ರ ಆರಂಭದಲ್ಲಿ ಕೋರಿಯಾದಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡುವಾಗ ಪಡೆಯಬಲ್ಲ ಅಂಡಾಣುಗಳನ್ನು ಪ್ರಯೋಗಾಲಯದಲ್ಲಿ ಪಕ್ವಗೊಳಿಸಬಹುದು ಎಂಬುದು ಪತ್ತೆಯಾಯಿತು. ಈ ಸಂಶೋಧನೆ ಕಳೆದ ಎರಡು ದಶಕಗಳಲ್ಲಿ ಬಂಜೆತನ ನಿವಾರಿಸುವಲ್ಲಿ ಯಶಸ್ವಿ ಪ್ರಯೋಗಗಳು ನಡೆಯುವಂತೆ ಮಾಡಿವೆ.

ಐಎಂ ಸಹ ಕೃತಕ ಗರ್ಭಧಾರಣೆಯ ಒಂದು ಅಂಗ. ಈ ಪ್ರಕ್ರಿಯೆಯಲ್ಲಿ ಅಂಡಾಣುಗಳನ್ನು ದೇಹದ ಹೊರಭಾಗದಲ್ಲಿ ಪಕ್ವಗೊಳಿಸಲಾಗುತ್ತದೆ. ಆದ್ದರಿಂದಲೇ ಇದನ್ನು ಇನ್ ಟ್ರೊ ಮೆಚುರೇಷನ್ ಎನ್ನುತ್ತಾರೆ. ಅಂಡಾಣುಗಳು ಪಕ್ವಗೊಳ್ಳುವ ಮುನ್ನವೇ ಪಡೆದು ಮುಂದಿನ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಆದರೆ ಐಎಫ್ನಲ್ಲಿ ಇದಕ್ಕೆ ತದ್ವಿರುದ್ಧವಾಗಿ ಸಾಂಪ್ರದಾಯಿಕ ವಿಧಾನದಿಂದ ಅಂಡಾಣುಗಳನ್ನು ಪಡೆದು ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಐಎಂ ಪ್ರಕ್ರಿಯೆಯಲ್ಲಿ ಅಪಕ್ವ ಅಂಡಾಣುಗಳನ್ನು 24 ರಿಂದ 48 ಗಂಟೆಗಳು ಹಾರ್ಮೋನ್ ಗಳ ಸಹಾಯದಿಂದ ಪಕ್ವಗೊಳಿಸಲಾಗುತ್ತದೆ. ಜತೆಗೆ ವೀರ್ಯಾಣು ಹೊಂದಿರುವ ಇಂಜೆಕ್ಷನ್ ನೀಡುವ ಮೂಲಕ ಅಂಡಾಣುಗಳನ್ನು ಪಕ್ವಗೊಳಿಸಲಾಗುತ್ತದೆ.

ಯಾರಿಗೆ ಐಎಂ ಸೂಕ್ತ?

ಗರ್ಭಧಾರಣೆಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಾಗೂ ಈ ಔಷಧಿಗಳ ಮಟ್ಟಿಗೆ ಸೂಕ್ಷ್ಮ ದೈಹಿಕ ಮತ್ತು ಮಾನಸಿಕ ಮಟ್ಟವನ್ನು ಹೊಂದಿರುವ ಮಹಿಳೆಯರಿಗೆ ಐಎಂ ಮೂಲಕ ಗರ್ಭಧಾರಣೆ ಸೂಕ್ತ. ಕಿರಿ ವಯಸ್ಸಿನ ನಾರಿಯರಿಗೆ ಋತುಸ್ರಾವದಲ್ಲಿ ಏರುಪೇರಿಲ್ಲದೇ ಹೋದರೂ ಕಡಿಮೆ ವೆಚ್ಚದ ಈ ಚಿಕಿತ್ಸೆ ಸೂಕ್ತ.

ಅಲ್ಲದೇ ಸುರಕ್ಷಿತವೂ ಹೌದು. ಹಾಗೆಯೇ ಕ್ಯಾನ್ಸರ್ನಂಥ ರೋಗಗಳಿಂದ ಬಳಲುತ್ತಿರುವವರು ಮಗು ಬೇಕೆಂದು ಬಯಸಿದಲ್ಲಿ ಅವರಿಗೂ ಐಎಂ ಪದ್ಧತಿಯೇ ಸೂಕ್ತ. ಇದರಲ್ಲಿ ಕ್ಯಾನ್ಸರ್ಗೆ ನೀಡುವ ಕೆಮೋಥೆರಪಿ ಹಾಗೂ ರೇಡಿಯೋ ಥೆರಪಿ ಚಿಕಿತ್ಸೆ ಅಡ್ಡಿಯಾಗುವುದಿಲ್ಲ.

ಅಪಕ್ವ ಅಂಡಾಣುಗಳನ್ನು ಪಡೆದು, ಪ್ರಯೋಗಾಲಯದಲ್ಲಿ ಪಕ್ವಗೊಳಿಸಿದ ನಂತರ ಐಎಫ್ ಪ್ರಕ್ರಿಯೆಗೆ ಒಳಗಾಗುವ ಮಹಿಳೆಗೆ ಬಳಸಲಾಗುತ್ತದೆ. ಸಾಮಾನ್ಯವಾಗಿ 30ರಿಂದ 35ನೇ ವಯೋವಾನದ ಮಹಿಳೆಯರಲ್ಲಿ ಅಂಡಾಣು ಉತ್ಪಾದನಾ ಪ್ರಮಾಣ ಹೆಚ್ಚಿರುತ್ತದೆ. ಅಂಥವರು ಸುರಕ್ಷಿತವೆಂದು ಐಎಂ ತಂತ್ರಜ್ಞಾನಕ್ಕೆ ಮೊರೆ ಹೋದರೆ, ಗರ್ಭಪಾತವಾಗುವ ಸಾಧ್ಯತೆಯೇ ಹೆಚ್ಚು ಎಂಬುದನ್ನು  ಐಎಂಗೆ ಮೊರೆ ಹೋಗುವ ದಂಪತಿಗಳು ಗಮನದಲ್ಲಿಟ್ಟುಕೊಳ್ಳಬೇಕು.

ಐಎಂ ತಂತ್ರಜ್ಞಾನ ಗರ್ಭಕೋಶವನ್ನು ದುರ್ಬಲಗೊಳಿಸುವುದಿಲ್ಲ. ಆದ್ದರಿಂದ ಗರ್ಭಧಾರಣೆಗೆ ಒಳಗಾಗ ಬಯಸುವ, ಮಕ್ಕಳಾಗದ ದಂಪತಿಗಳು, ಒಮ್ಮೆ ಐಎಫ್ ತಜ್ಞರನ್ನು ಸಂಪರ್ಕಿಸಿ ಅವರ ವೈದ್ಯರು ಸೂಚಿಸುವ ಮಾರ್ಗವನ್ನು ಅನುಸರಿಸುವುದು ಸೂಕ್ತ. ಐಎಂ ಮೇಲ್ನೋಟಕ್ಕೆ ಆಕರ್ಷಕ ಹಾಗೂ ಮನಸ್ಸಿಗೆ ಹೆಚ್ಚು ಕಿರಿಕಿರಿಯಾಗದಂಥ ಪ್ರಯೋಗಾಲಯದಿಂದ ಪಡೆದ ನೈಸರ್ಗಿಕ ಅಂಡಾಣು ಗಳ ಸಮ್ಮಿಶ್ರಣ ಎನ್ನುವುದೇ ಬಹುತೇಕ ಮಹಿಳೆಯರನ್ನು ಆಕರ್ಷಿಸುವ ವಿಚಾರವಾಗಿದೆ.

(ಸಂತಾನಫಲ ಚಿಕಿತ್ಸೆ ತಜ್ಞರಾದ ಲೇಖಕರನ್ನು 080-41312600 ಅಥವಾ 080-26673585ರಲ್ಲಿ ಸಂಪರ್ಕಿಸಬಹುದು)

-ಡಾ.ದೇವಿಕಾ ಗುಣಶೀಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com