ಎಚ್1ಎನ್1 ಬಗ್ಗೆ ಗೊಂದಲ ಬೇಡ, ಎಚ್ಚರಿಕೆ ಇರಲಿ

ಎಚ್1 ಎನ್1 ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು. ಹಾಗೆಯೇ ಎಚ್ಚರಿಕೆ ಇರಲಿ ಎಂದು...
ಆರೋಗ್ಯ ಸಚಿವ ಯು.ಟಿ.ಖಾದರ್
ಆರೋಗ್ಯ ಸಚಿವ ಯು.ಟಿ.ಖಾದರ್

ವಿಧಾನಸಭೆ/ವಿಧಾನಪರಿಷತ್: ಎಚ್1 ಎನ್1 ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು. ಹಾಗೆಯೇಎಚ್ಚರಿಕೆ ಇರಲಿ ಎಂದು ನಾಡಿನ ಜನತೆಗೆ ಸರ್ಕಾರ ಸಂದೇಶ ನೀಡಿದೆ.

ಎರಡೂ ಸದನಗಳಲ್ಲಿ ಹೇಳಿಕೆ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಎಚ್ 1ಎನ್1 ನಿಯಂತ್ರಿಸಲು ಆರೋಗ್ಯ ಇಲಾಖೆ ಎಲ್ಲಾ ಅಗತ್ಯ ಕ್ರಮಕೈಗೊಂಡಿದೆ. ಈವರೆಗೆ
ರಾಜ್ಯದಲ್ಲಿ ಎಚ್1ಎನ್1 ಸೋಂಕಿಗೆ 7 ಜನ ಮೃತಪಟ್ಟಿದ್ದು, 106 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನ ಸಾಮಾನ್ಯರು ಈ ವಿಚಾರದಲ್ಲಿ ಮುಂಜಾಗ್ರತೆ ವಹಿಸಬೇಕು ಎಂದರು.

ಈ ರೋಗ ನಿಯಂತ್ರಿಸಲು ಆರೋಗ್ಯ ಇಲಾಖೆಯು ಸೂಕ್ತ ಮಾರ್ಗ ಸೂಚಿಯನ್ನು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿದೆ. ಎಲ್ಲಾ ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳ ಲಾಗಿದೆ. ಪ್ರತ್ಯೇಕ ವಾರ್ಡ್ ಗುರುತಿಸಿಡಲು ಸೂಚಿಸಲಾಗಿದೆಯಲ್ಲದೇ, ಅಗತ್ಯ ಔಷ„ ಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದೆ ಎಂದು ವಿವರಿಸಿದರು. ಯಾರೇ ಆದರೂ ಸಹ ಮೂರು ದಿನ ಸತತವಾಗಿ ಜ್ವರ ಬಂದರೆ ಸ್ವಂತ ಚಿಕಿತ್ಸೆ ಮಾಡಿಕೊಳ್ಳದೇ ಸಮೀಪದ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಬೇಕಲ್ಲದೇ, ಎಚ್1ಎನ್1 ಕುರಿತಾಗಿ ಸ್ಯಾಂಪಲ್ ನೀಡಬೇಕು ಎಂದ ಅವರು, 10 ದಿನಗಳ ವರೆಗೆ ಸ್ವಂತ ಚಿಕಿತ್ಸೆ ಮಾಡಿಕೊಂಡು ನಂತರ ಆಸ್ಪತ್ರೆಗೆ ಬಂದರೆ ರೋಗಿಯು ವಿಷಮಸ್ಥಿತಿಗೆ ತಲುಪಿರುತ್ತಾನೆ, ಜೊತೆಗೆ ಹೃದಯ, ಅಸ್ತಮ ಮತ್ತಿತರ ರೋಗಗಳಿದ್ದರೆ ಮೃತಪಡುವ ಸಂದರ್ಭ ಹೆಚ್ಚಿರುತ್ತದೆ. ಹೀಗಾಗಿ ಜ್ವರದ ಮುನ್ಸೂಚನೆ ಕಂಡುಬಂದ ಕೂಡಲೇ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳುವುದು ಒಳಿತು ಎಂದು ಹೇಳಿದರು.

ಮಣಿಪಾಲ, ಶಿ ವಮೊಗ್ಗ, ಬೆಂಗಳೂರಿನ ನಿಮಾನ್ಸ್, ನಾರಾಯಣ ಹೃದಯಾಲಯ, ಮಣಿಪಾಲ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ರೋಗಿಗಳ ಸ್ಯಾಂಪಲ್‍ಗಳನ್ನು ಪರಿಕ್ಷಿಸಿ
ಎಚ್1ಎನ್1 ಇರುವ ಬಗ್ಗೆ ವರದಿ ನೀಡಲಾಗುತ್ತದೆ. ಅದರ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಈ ಸೋಂಕಿನ ಬಗ್ಗೆ ಪರಿಕ್ಷೆ ನಡೆಸಲು ಸೂಕ್ತ ಪ್ರಯೋಗಾಲಯವಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ಐದು ಕಡೆಗಳಲ್ಲಿ ಇದಕ್ಕಾಗಿಯೇ ಸೂಕ್ತ ಪ್ರಯೋಗಾಲಯ ಆರಂಭಿಸಲಾಗುತ್ತದೆ. ಸದ್ಯಕ್ಕೆ ಎಲ್ಲಿ ಸೋಂಕು ಕಾಣಿಸಿಕೊಳ್ಳುತ್ತದೋ ಅಲ್ಲಿಂದಲೇ ರೋಗಿಯ ಸ್ಯಾಂಪಲ್ ನ್ನು ತಕ್ಷಣವೇ ಪ್ರಯೋಗಾಲಯಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಪರಿಸ್ಥಿತಿಯ ಅವಲೋಕನಕ್ಕಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು. ಯಾವುದೇ ಕಾರಣಕ್ಕೂ ಈ ವಿಚಾರವನ್ನು ಯಾರೂ ಸಹ ಮುಚ್ಚಿಡಬಾರದು. ನೆರೆ ರಾಜ್ಯಗಳಲ್ಲಿ ಈ ಸಂಗತಿ ಮುಚ್ಚಿಟ್ಟೇ ಈಗ ಬೃಹತ್ತಾಗಿ ಬೆಳೆದಿದೆ. ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಹರಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ಮೇಲ್ಮನೆಯಲ್ಲಿ ಈ ವಿಚಾರವಾಗಿ ಸರ್ಕಾರಕ್ಕೆ ಸಲಹೆ ನೀಡಿದ ಗಣೇಶ್ ಕಾರ್ಣಿಕ್, ಮೊಬೈಲ್ ಪ್ರಯೋಗಾಲಯಗಳನ್ನು ಆರಂಭಿಸುವ ಜೊತೆಗೆ ಪ್ರತ್ಯೇಕ ಹೆಲ್ತ್ ಲೈನ್ ಆರಂಭಿಸುವಂತೆ ಮತ್ತು ಎಚ್1ಎನ್1 ಚಿಕಿತ್ಸೆಗೆ ಸಜ್ಜುಗೊಳ್ಳದ ಜಿಲ್ಲಾ ಆಸ್ಪತ್ರೆ ಬಗ್ಗೆ ಗಮನಹರಿಸುವಂತೆ ಒತ್ತಾಯಿಸಿದರು. ಸಲಹೆ ಸ್ವೀಕರಿಸಿದ ಸಚಿವ ಖಾದರ್, 104ಕ್ಕೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಮೊಬೈಲ್ ಪ್ರಯೋಗಾಲಯ ಆರಂಭಿಸುವ ಬಗ್ಗೆ ಅಧಿಕಾರಿಗಳೊಂದಿಗೆ ತಕ್ಷಣವೇ ಚರ್ಚಿಸುವುದಾಗಿ ಹೇಳಿದರಲ್ಲದೇ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com