ದೇಹವೊಂದು ವೈರಾಣು ಸ್ಥಾವರ!

ಇಡೀ ದೇಶಕ್ಕೆ ದೇಶವೇ ಹಂದಿಜ್ವರಕ್ಕೆ ಬೆದರಿದೆ. ಈ ವೈರಾಣುಗಳು ದೇಹದ ಬಹುಭಾಗವನ್ನು ಶೀಘ್ರವೇ ಆಕ್ರಮಿಸಿಕೊಂಡು ಆತಂಕ ಹುಟ್ಟಿಸುವ ಸ್ಥಿತಿಗೆ ತಲುಪಿಸುತ್ತವೆ. ಹಾಗಾದರೆ, ಇದಕ್ಕೆ ಪರಿಹಾರವೇನು?...
ಎಚ್1ಎನ್ 1 ಹಂದಿ ಜ್ವರ (ಸಂಗ್ರಹ ಚಿತ್ರ)
ಎಚ್1ಎನ್ 1 ಹಂದಿ ಜ್ವರ (ಸಂಗ್ರಹ ಚಿತ್ರ)
Updated on

ಇಡೀ ದೇಶಕ್ಕೆ ದೇಶವೇ ಬೆವರಿದೆ. ಅದೂ ಹಂದಿಜ್ವರಕ್ಕೆ. ಇದರ ವೈರಾಣುಗಳು ದೇಹದ ಬಹುಭಾಗವನ್ನು ಶೀಘ್ರವೇ ಆಕ್ರಮಿಸಿಕೊಂಡು ನಮ್ಮನ್ನು ಆತಂಕ ಹುಟ್ಟಿಸುವ ಸ್ಥಿತಿಗೆ ತಲುಪಿಸುತ್ತವೆ. ಹಾಗಾದರೆ, ಇದಕ್ಕೆ ಪರಿಹಾರವೇನು?

ದೇಶದೆಲ್ಲೆಡೆ ಹಂದಿಜ್ವರ ಜೋರಾಗಿ ಆವರಿಸಿಕೊಂಡಿದೆ. ಈ ಜ್ವರ ಇನ್‍ಪ್ಲೂಯಂಜಾ-ಎ ಎಂಬ ವೈರಾಣುವಿನಿಂದ ಹರಡುತ್ತದೆ. ಸಾಂಕ್ರಾಮಿಕ ರೋಗವಾಗಿರುವ ಈ ಹಂದಿಜ್ವರ, ಸ್ವಲ್ಪ ನಿರ್ಲಕ್ಷ ತಾಳಿದರೂ ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡಿ, ರೋಗ ಉಲ್ಬಣಿಸಿ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಹೀಗಾಗಿ ಜ್ವರ ಬಂದಿದೆ ಪರವಾಗಿಲ್ಲ, ಎರಡು ದಿನಗಳಲ್ಲಿ ಕಡಿಮೆಯಾದೀತು ಎಂಬ ಅಲಕ್ಷ ಒಳ್ಳೇದಲ್ಲ. ಹಂದಿಜ್ವರದ ಲಕ್ಷಣಗಳು ಅತಿಯಾದ ಜ್ವರ, ಮೈ ಕೈ ನೋವು, ನಿರಂತರ ಕೆಮ್ಮು ಮತ್ತು ಗಂಟಲಿನಲ್ಲಿ ಕಫ, ಸತತ ವಾಂತಿ, ಬೇಧಿ ಮತ್ತು ವಿಪರೀತ ಸುಸ್ತು, ನಿರಂತರ ತಲೆನೋವು, ಉಸಿರಾಟದ ತೊಂದರೆ, ನಿರಾಸಕ್ತಿ, ವಿಪರೀತ ಹೊಟ್ಟೆನೋವು ಮತ್ತು ಸ್ನಾಯು ಸೆಳೆತ.

ಹೇಗೆ ಹರಡುತ್ತದೆ?
ಗಾಳಿಯ ಮೂಲಕ ವೈರಾಣು ಹರಡುತ್ತದೆ. ಈ ಕಾರಣದಿಂದಲೇ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯ ಅತಿ ಹತ್ತಿರದಲ್ಲಿ ಉಸಿರಾಡುವುದರಿಂದ, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಜೊಲ್ಲುರಸ ಮತ್ತು ಕೆಮ್ಮು/ ಸೀನಿನ ಮೂಲಕ ಸಿಡಿದ ದ್ರವದ ಸಂಪರ್ಕದಿಂದಲೂ ರೋಗ ಹರಡಬಹುದು. ರೋಗಾಣು ಬೆರೆತ ನೀರನ್ನು ಸೇವಿಸುವುದರಿಂದಲೂ ರೋಗ ಹರಡುತ್ತದೆ. ಅದೇ ರೀತಿ ರೋಗಾಣು ಸೋಂಕಿತ ಆಹಾರ ಮತ್ತು ವಸ್ತುಗಳ ಸ್ಪರ್ಶದಿಂದಲೂ ಹರಡುತ್ತದೆ.

ತಡೆಗಟ್ಟುವುದು ಹೇಗೆ?
ಆಗಾಗ ಕೈ ತೊಳೆಯುವುದು, ಕೈ ತೊಳೆಯದೇ ಆಹಾರ ಸೇವನೆ ಮಾಡಬಾರದು. ಮೂಗು, ಬಾಯಿ, ಕಣ್ಣುಗಳನ್ನು ಸಹ ಸ್ಪರ್ಶಿಸಿಕೊಳ್ಳಬಾರದು. ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ಮನೆಯಲ್ಲಿ ಸೋಂಕಿತರು ಇದ್ದಲ್ಲಿ ಸದಾಕಾಲ  ಮಾಸ್ಕ್ ಧರಿಸಬೇಕು. ರೋಗದಿಂದ ಪೂರ್ಣ ಗುಣಮುಖವಾಗುವವರೆಗೆ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ, ತಟ್ಟೆ ಲೋಟ ಪಾತ್ರೆಗಳನ್ನು ಪ್ರತ್ಯೇಕವಾಗಿರಿಸಬೇಕು. ಇದಲ್ಲದೆ ಅವುಗಳನ್ನು ಬಿಸಿಯಾದ ಉಪ್ಪು ನೀರು ಮತ್ತು ಕ್ರಿಮಿನಾಶಕದಿಂದ ಸರಿಯಾಗಿ ತೊಳೆಯಬೇಕು. ಸೋಂಕಿತರ ಸಾಂಗತ್ಯದಿಂದ ದೂರವಿರಲೇಬೇಕು. ಜ್ವರ ಕಾಣಿಸಕೊಂಡ ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕು. ಈ ವೇಳೆ ಮಾಸ್ಕ್ ಧರಿಸುವುದು ಉತ್ತಮ.

ಪತ್ತೆ ಹಚ್ಚುವುದು ಹೇಗೆ?
ಸಾಮಾನ್ಯ ವೈರಸ್ ಜ್ವರ ಮತ್ತು ಹಂದಿ ಜ್ವರದ ಲಕ್ಷಣಗಳು ಹೆಚ್ಚಾಗಿ ಒಂದೇ ರೀತಿ ಇರುವುದರಿಂದ ಕೆಲವೊಮ್ಮೆ ವೈದ್ಯರಿಗೂ ರೋಗ ನಿರ್ಣಯ ಕಷ್ಟವಾಗಬಹುದು. ಆದರೆ ಸಾಮಾನ್ಯವಾಗಿ ಹಂದಿ ಜ್ವರದಲ್ಲಿ ಹೆಚ್ಚು ವಾಂತಿಯ ಲಕ್ಷಣಗಳು ಮತ್ತು ವಿಪರೀತ ಸುಸ್ತು ಇರುತ್ತದೆ. ವೈದ್ಯರು ಮೂಗಿನ ಅಥವಾ ಗಂಟಲಿನ ದ್ರಾವಣದ ಸ್ಯಾಂಪಲ್ ಪರೀಕ್ಷಿಸಿ ವೈರಸ್ ಪತ್ತೆ ಹಚ್ಚುತ್ತಾರೆ. ರಾಜ್ಯದಲ್ಲಿ ಎಚ್1ಎನ್1 ಪತ್ತೆಗೆ 5 ಪ್ರಯೋಗಾಲಯಗಳಲ್ಲಿ ಕಫ ಪರೀಕ್ಷೆ ಮಾಡಲಾಗುತ್ತದೆ. ಬೆಂಗಳೂರಿನ ನಿಮ್ಹಾನ್ಸ್, ಮಣಿಪಾಲ ಆಸ್ಪತ್ರೆ, ನಾರಾಯಣ ಹೃದಯಾಲಯ, ಕಮಾಂಡ್ ಅಸ್ಪತ್ರೆ ಮತ್ತು ಉಡುಪಿಯ ಮಣಿಪಾಲ ಅಸ್ಪತ್ರೆಗಳಲ್ಲಿ ಈ ಪರೀಕ್ಷೆ ಮಾಡುತ್ತಾರೆ.?

ಚಿಕಿತ್ಸೆ ಹೇಗೆ?
ಸಾಮಾನ್ಯ ವೈರಸ್ ಜ್ವರವನ್ನು ಗುಣಪಡಿಸಲು ಉಪಯೋಗಿಸುವ ಆಂಟಿ ವೈರಸ್ ಮಾತ್ರೆಯನ್ನು ಎಚ್1ಎನ್1 ರೋಗಕ್ಕೆ ನೀಡಲಾಗುತ್ತದೆ. ಸಾಮಾನ್ಯವಾಗಿ ಟುಪ್ಲು ಮತ್ತು ರೆಲೆಂಜಾ ಎಂಬ ಆ್ಯಂಟಿ ವೈರಸ್ ಮಾತ್ರೆಗಳನ್ನು ಬಳಸಲಾಗುತ್ತದೆ. ರೋಗ ಕಾಣಿಸಿಕೊಂಡ 48 ಗಂಟೆಗಳ ಒಳಗೆ ಈ ಔಷಧಿ ತೆಗೆದುಕೊಂಡಲ್ಲಿ ಪರಿಣಾಮಕಾರಿಯಾಗಬಹುದು. ಇದು ವೈರಸ್ ಜ್ವರವಾದ ಕಾರಣ ಆ್ಯಂಟಿಬಂಯೋಟಿಕ್ ಅವಶ್ಯ ಇರುವುದಿಲ್ಲ. ಮೈ ಕೈ ನೋವು ಮತ್ತು ತಲೆ ನೋವಿಗೆ ನೋವು ನಿವಾರಣಾ ಔಷಧಿ ತೆಗೆದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಆಸ್ಪರಿನ್ ಮಾತ್ರೆ ತೆಗೆದುಕೊಳ್ಳ ಬಾರದು. 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ರೇಬೀಸ್ ಸಿಂಡ್ರೋಮ್ ಎಂಬ ಮಾರಣಾಂತಿಕ ಕಾಯಿಲೆ ಆಸ್ಪಿರಿನ್‍ನಿಂದ ಬರಬಹುದು.

- ಡಾ. ಮುರಳೀ ಮೋಹನ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com