ಓಟದಿಂದ ಮೊಣಕಾಲು ಸಾಮರ್ಥ್ಯ ವೃದ್ಧಿ: ಅಧ್ಯಯನ

ನಿತ್ಯ ಓಡುವುದರಿಂದ ಮೊಣಕಾಲಿನ ಸಾಮರ್ಥ್ಯ ವೃದ್ದಿಯಾಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನ್ಯೂಯಾರ್ಕ್: ನಿತ್ಯ ಓಡುವುದರಿಂದ ಮೊಣಕಾಲಿನ ಸಾಮರ್ಥ್ಯ ವೃದ್ದಿಯಾಗುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.

ಯೂರೋಪಿಯನ್ ಶರೀರಶಾಸ್ತ್ರದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದು, ನಿತ್ಯ ಓಡುವುದರಿಂದ ಮೊಣಕಾಲಿನ ಸಾಮರ್ಥ್ಯ ವೃದ್ದಿಯಾಗುತ್ತದೆಯೇ ಹೊರತು ಕುಂಠಿತವಾಗುವುದ್ದಿಲ್ಲ ಎಂದು ಹೇಳಿದ್ದಾರೆ. ಓಟದಿಂದ ಮೊಣಕಾಲಿನಲ್ಲಿರುವ ದ್ರವ್ಯದಲ್ಲಿ ಏರುಪೇರಾಗತ್ತದೆ. ಇದರಿಂದ ಮಂಡಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ಆತಂಕ ಕೆಲವರಲ್ಲಿದೆ. ಆದರೆ ಓಟದಿಂದ ಇಂತಹ ಯಾವುದೇ ದುಷ್ಪರಿಣಾಮಗಳಾಗುವುದಿಲ್ಲ. ಬದಲಿಗೆ ಮಂಡಿಯಲ್ಲಿರುವ ದ್ರವ್ಯ ಚಲನೆ ಪಡೆದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಮಂಡಿಯ ಸಾಮರ್ಥ್ಯವೃದ್ದಿಯಾಗುತ್ತದೆ ಎಂದು ಅಧ್ಯಯನ ಹೇಳಿದೆ.

ಕೇವಲ ಕಡಿಮೆ ಅಂತರದ ಓಟಗಾರರಷ್ಟೇ ಅಲ್ಲ. ದೂರ-ದೂರ ಓಡುವ ಓಟಗಾರರಿಗೂ ಕೂಡ ಇದು ಅನ್ವಯವಾಗಲಿದ್ದು, ದೂರದ ಓಟದಿಂದಲೂ ಮಂಡಿಯ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಾಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಸಾಮಾನ್ಯವಾಗಿ ಮಂಡಿಯಲ್ಲಿ ಸೈನೋವಿಯಲ್ ಎಂಬ ದ್ರವ ಉತ್ಪತ್ತಿಯಾಗುತ್ತದೆ. ಇದರಲ್ಲಿ ಜಿಎಂ ಸಿಎಸ್ ಎಫ್ ಹಾಗೂ ಐಎಲ್-15 ಅಂಶಗಳಿದ್ದು, ಇದು ಮಂಡಿಯ ಆರೋಗ್ಯ ಸಂಬಂಧ ಕಾರ್ಯನಿರ್ವಹಿಸುತ್ತವೆ.

ಓಟದಿಂದ ಈ ದ್ರವ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ ಎಂದು ಅಧ್ಯಯನ ನಡೆಸಲಾಗಿದ್ದು, ಅಧ್ಯಯನದಿಂದ ವೈದ್ಯರಿಗೆ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಸಾಮಾನ್ಯವಾಗಿ ಓಡದೇ ಇರುವ ವ್ಯಕ್ತಿಯ ಮಂಡಿಯಲ್ಲಿರುವ ದ್ರವ ಹಾಗೂ 30 ನಿಮಿಷಗಳ ಸತತವಾಗಿ ಓಡಿದ ವ್ಯಕ್ತಿಯಲ್ಲಿನ ಮಂಡಿಯಲ್ಲಿನ ಸೈನೋವಿಯಲ್ ದ್ರವದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಹೀಗಾಗಿ ಓಟದಿಂದ ಮಂಡಿಯ ಆರೋಗ್ಯ ಕ್ಷೀಣಿಸುತ್ತದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು  ಸಂಶೋಧಕರು ಹೇಳಿದ್ದಾರೆ.

ಓಟ ಒಂದೇ ಯಾವುದೇ ದೈಹಿಕ ವ್ಯಾಯಾಮ ಆರೋಗ್ಯವನ್ನು ಕಾಪಾಡುತ್ತದೆಯೇ ಹೊರತು ದೇಹಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ. ಆದರೆ ವ್ಯಾಯಾಮ ಮಾಡುವಾಗ ತಜ್ಞರ ಸಲಹೆ ಅತ್ಯಗತ್ಯ, ಓಟದಿಂದ  ಮಂಡಿಯ ಉರಿಯೂತ ಕಡಿಮೆಯಾಗುತ್ತದೆ. ಆದರೆ ಕೆಲವರು ಓಟದಿಂದ ಮಂಡಿಯ ಆರೋಗ್ಯ ಹಾಳಾಗುತ್ತದೆ ಎಂಬ ಮೂಢನಂಬಿಕೆಯಲ್ಲಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು ಎಂದು ಬ್ರಿಗ್ಯಾಮ್ ಯಂಗ್ ಯೂನಿವರ್ಸಿಟಿಯ ತಜ್ಞ  ರಾಬರ್ಟ್ ಹಿಲ್ಡಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com