ಒಂದೇ ಜಾತಿಯಲ್ಲಿ ಮದುವೆಯಾದರೆ ಆನುವಂಶಿಕ ಖಾಯಿಲೆ ಉಂಟಾಗಬಹುದು: ಅಧ್ಯಯನ

ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ ಖಾಯಿಲೆಗಳು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ ಖಾಯಿಲೆಗಳು ಬರುತ್ತವೆ ಎನ್ನುತ್ತಾರೆ. ಆದರೆ ಒಂದೇ ಜಾತಿಯೊಳಗೆ ಮದುವೆಯಾಗುವುದರಿಂದ ದಂಪತಿಗೆ ಜನಿಸುವ ಸಂತತಿಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಹೈದರಾಬಾದಿನ ಸೆಲ್ಯುಲರ್ ಅಂಡ್ ಮೊಲೆಕ್ಯುಲರ್ ಬಯಾಲಜಿ ಕೇಂದ್ರದ ಅಧ್ಯಯನ ತಿಳಿಸಿದೆ.
ಗಂಡು ಹೆಣ್ಣಿಬ್ಬರು ಒಬ್ಬರಿಗೊಬ್ಬರು ಸಂಬಂಧಿಕರಾಗಿರದಿದ್ದರೂ ಕೂಡ ಒಂದೇ ಸಮುದಾಯ, ಜಾತಿ ಅಥವಾ ಬುಡಕಟ್ಟಿಗೆ ಸೇರಿದವರಾಗಿದ್ದರೆ ಮದುವೆಯಾದರೆ ತಮ್ಮ ಡಿಎನ್ಎಯಲ್ಲಿರುವ ಆನುವಂಶಿಕ ತೊಂದರೆಗಳನ್ನು  ವರ್ಗಾಯಿಸುವ ಸಾಧ್ಯತೆಯಿದೆ. ವಯಸ್ಸಾದ ಬಳಿಕ ಖಾಯಿಲೆಗಳು ಬರುವುದಕ್ಕೆ ಕೂಡ ಇದು ಕಾರಣವಾಗಿರುತ್ತದೆ.
ಪ್ರಚಲಿತದಲ್ಲಿರುವ ಖಾಯಿಲೆಗಳು ಒಂದೇ ಜಾತಿ, ಸಮುದಾಯದಲ್ಲಿ ಮದುವೆಯಾಗುವುದರಿಂದ ಬರುತ್ತದೆಯೇ ಎಂಬ ಬಗ್ಗೆ ಸಂದೇಹವನ್ನು ಹುಟ್ಟುಹಾಕುತ್ತದೆ.
ವಿವಿಧ ಶಿಕ್ಷಣ ಸಂಸ್ಥೆಗಳ ಡಾ.ಕೆ.ತಂಗರಾಜ್ ಅವರ ನೇತೃತ್ವದ 17 ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದೆ.
ಪೋಷಕರಲ್ಲಿನ ಆನುವಂಶಿಕ ತೊಂದರೆಗಳಿಂದ ಮಕ್ಕಳಲ್ಲಿ ಖಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚು. ಹಿಂಸಾತ್ಮಕ ರೋಗಗಳು ಭಾರತೀಯ ಸಮುದಾಯಗಳಲ್ಲಿ ಅತಿ ಹೆಚ್ಚಾಗಿವೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ದಕ್ಷಿಣ ಏಷ್ಯಾದ ಅದರಲ್ಲೂ ಶೇಕಡಾ 80ರಷ್ಟು ಭಾರತೀಯರನ್ನು  ಸುಮಾರು 260 ಸಮುದಾಯಗಳಿಗೆ ಸೇರಿದ 2,800 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಯಿತು. 
ಅಧ್ಯಯನದ ಭಾಗವಾಗಿ ಮೂಲದ ಗುರುತು (IBD) ಸ್ಕೋರ್ ನ್ನು ಎಲ್ಲಾ 260 ಸಮುದಾಯಗಳಿಗೆ ಲೆಕ್ಕಾಚಾರ ಮಾಡಲಾಯಿತು. ಇದರಲ್ಲಿ ಭಾರತೀಯರ ಐಬಿಡಿ ಸ್ಕೋರ್ ಅಧಿಕವಾಗಿತ್ತು. ಒಂದೇ ಸಮುದಾಯ ಮತ್ತು ಜಾತಿಯೊಳಗೆ ಮದುವೆಯಾದವರಲ್ಲಿ ಆನುವಂಶಿಕ ರೋಗಗಳು ಮತ್ತು ಆನುವಂಶಿಕ ದೋಷಗಳು ಹೆಚ್ಚಾಗಿರುತ್ತದೆ. ಇದು ಮುಂದಿನ ಸಂತತಿಗೆ ವರ್ಗಾವಣೆಯಾಗುತ್ತದೆ. ಹತ್ತಿರದ ಸಂಬಂಧಿಕರಲ್ಲಿ ಮದುವೆಯಾಗುವ ಅಶ್ಕೆನಾಜಿ ಯಹೂದಿಗಳಿಗಿಂತಲೂ ಒಂದೇ ಜಾತಿಯಲ್ಲಿ ಮದುವೆಯಾದ ಭಾರತೀಯರಲ್ಲಿ ಆನುವಂಶಿಕ ಖಾಯಿಲೆಗಳು ಹೆಚ್ಚಾಗಿರುತ್ತವೆ ಎನ್ನಲಾಗಿದೆ.
ಗುಜ್ಜರ್ ಸಮುದಾಯದ ಐಬಿಡಿ ಸ್ಕೋರ್ ಅಶ್ಕೆನಾಜಿ ಯಹೂದಿ ಸಮುದಾಯಕ್ಕಿಂತ 11.6 ಪಟ್ಟು ಹೆಚ್ಚಾಗಿದೆ. ರೆಡ್ಡಿ ಮತ್ತು ವೈಶ್ಯ ಜಾತಿಯ ಐಬಿಡಿ ಸ್ಕೋರ್ ಅಸ್ಕೆನಾಜಿಗಿಂತ 9.5 ಪಟ್ಟು ಜಾಸ್ತಿಯಾಗಿದೆ ಎನ್ನುತ್ತದೆ ಅಧ್ಯಯನ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com