'ಬಿಪಿ' ನಿರ್ಲಕ್ಷ್ಯದಿಂದ ದೇಹದಲ್ಲಿ ರೋಗದ ಹೊರೆ ಹೆಚ್ಚಾಗಲಿದೆ: ಹೈಪರ್'ಟೆನ್ಶನ್ ಕುರಿತು ಅಧ್ಯಯನ
ಕೆಲವು ಕಾಯಿಲೆಗಳು ಬ್ಯಾಕ್ಟೀರಿಯಾ, ಶಿಲೀಂಧ್ರಗಳಿಂದ ಬರುವಂತಹದ್ದಾಗಿದ್ದರೆ, ಇನ್ನು ಕೆಲ ರೋಗಗಳನ್ನು ನಾವಾಗಿಯೇ ಆಹ್ವಾನಿಸುತ್ತೇವೆ. ನಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮಗಳೇ ಈ ಅನಾರೋಗ್ಯಕ್ಕೆ ಕಾರಣವಾಗುತ್ತವೆ.
Published: 15th September 2021 01:55 PM | Last Updated: 15th September 2021 02:15 PM | A+A A-

ಸಾಂದರ್ಭಿಕ ಚಿತ್ರ
ತಿರುವನಂತಪುರ: ಕೆಲವು ಕಾಯಿಲೆಗಳು ಬ್ಯಾಕ್ಟೀರಿಯಾ, ಶಿಲೀಂಧ್ರಗಳಿಂದ ಬರುವಂತಹದ್ದಾಗಿದ್ದರೆ, ಇನ್ನು ಕೆಲ ರೋಗಗಳನ್ನು ನಾವಾಗಿಯೇ ಆಹ್ವಾನಿಸುತ್ತೇವೆ. ನಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮಗಳೇ ಈ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇತಂಹ ರೋಗಳನ್ನು ಸರಿಯಾದ ರೀತಿಯಲ್ಲಿ ತಡೆಯಬಹುದು. ಆದರೆ, ಅವುಗಳ ಬಗ್ಗೆ ಸಾಕಷ್ಟು ನಿರ್ಲಕ್ಷ್ಯ ತೋರುತ್ತೇವೆ.
ಇಂದಿನ ವ್ಯಸ್ತ ಜೀವನಶೈಲಿಯಿಂದಾಗಿ ಹೆಚ್ಚಿನವರಲ್ಲಿ ಅಧಿಕ ರಕ್ತದೊತ್ತಡ (ಹೈಪರ್'ಟೆನ್ಶನ್) ಸಮಸ್ಯೆಯು ಕಂಡುಬರುತ್ತಿದೆ. ಕೋವಿಡ್ ಕಾರಣದಿಂದಾಗಿ ಎಷ್ಟೋ ಜನರು ಇದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬೆಳವಣಿಗೆಗಳೂ ಕಂಡು ಬರುತ್ತಿದೆ.
ಇದನ್ನೂ ಓದಿ: ಕಳೆದ 30 ವರ್ಷಗಳಲ್ಲಿ ಹೈಪರ್ ಟೆನ್ಷನ್ ಪ್ರಮಾಣ ದುಪ್ಪಟ್ಟು
ಇದಕ್ಕೆ ಪ್ರಮುಖ ಕಾರಣ ವೈದ್ಯರು ಹಾಗೂ ಔಷಧಿಗಳು ನಿಯಂತ್ರಿತ ಅವಧಿ ಹಾಗೂ ಪ್ರಮಾಣದಲ್ಲಿ ದೊರೆಯುತ್ತಿರುವುದೂ ಆಗಿದೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೂ ಮುನ್ನ ಜನರು ತಮ್ಮ ಬಿಪಿ ಮೇಲೆ ನಿಯಂತ್ರಣವಿಟ್ಟುಕೊಂಡಿದ್ದರು. ಆದರೆ, ಇದೀಗ ನಿರ್ಲಕ್ಷ್ಯ ತೋರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಬಿಪಿ (ಅಧಿಕ ರಕ್ತದೊತ್ತಡ) ಒಂದು ರೀತಿಯ ಸೈಲೆಂಟ್ ಕಿಲ್ಲರ್ ಇದ್ದಂತೆ. ಇದು ವ್ಯಕ್ತಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಸೃಷ್ಟಿಸುತ್ತದೆ. ಅಲ್ಲದೆ, ಪಾರ್ಶ್ವವಾಯುವಿಗೆ ತುತ್ತಾಗುವಂತೆಯೂ ಮಾಡುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ವರ್ಲ್ಡ್ ಹಾರ್ಟ್ ಫೆಡರೇಷನ್ ರೋಗ್ ಮ್ಯಾಪ್ ಅಧ್ಯಯನ ಪ್ರಕಟಿಸಿದ್ದು, ಶ್ರೀ ಚಿತ್ರ ತಿರುನಾಲ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರು (ಸಾಂಕ್ರಾಮಿಕ ರೋಗಶಾಸ್ತ್ರ) ಡಾ. ಜೀಮನ್ ಪನ್ನಿಯಮ್ಮಕಲ್ ಅವರು ಅಧ್ಯಯನದ ಪ್ರಮುಖ ಮಾರ್ಗದರ್ಶಿಯಾಗಿದ್ದಾರೆ.
ದಿನನಿತ್ಯ ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಇಟ್ಟುಕೊಳ್ಳುತ್ತಿದ್ದವರ ಮೇಲೂ ಕೋವಿಡ್ ಸಾಕಷ್ಟು ಪರಿಣಾಮ ಬೀರಿದೆ. ಪ್ರಮುಖವಾಗಿ ಕುಗ್ರಾಮಗಳಲ್ಲಿರುವ ಜನರ ಮೇಲೆ ಗಂಭೀರ ಪರಿಣಾಮ ಬೀರಿದೆ. ಕುಗ್ರಾಮಗಳಲ್ಲಿರುವ ಜನರಿಗೆ ವೈದ್ಯರನ್ನು ಸಂಪರ್ಕಿಸುವುದು ಕಠಿಣವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಜೀಮನ್ ಅವರು ಹೇಳಿದ್ದಾರೆ.
ಅಧಿಕ ರಕ್ತದೊತ್ತಡವನ್ನು ಸಮುದಾಯ ಮಟ್ಟದಲ್ಲಿ ಹೆಚ್ಚಾಗಿ ಕಡೆಗಣಿಸಲಾಗಿದೆ ಏಕೆಂದರೆ ಅಧಿಕ ರಕ್ತದೊತ್ತಡ ಹೊಂದಿರುವ ಜನರ ಆಹಾರ ಮತ್ತು ಚಟುವಟಿಕೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುವ ಸಮುದಾಯ ಆರೋಗ್ಯ ಕಾರ್ಯಕರ್ತರು ಕೂಡ ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಡುಹರೆಯದಲ್ಲಿ ಹೃದಯಾಘಾತ: ಸದೃಢರೂ ಹೊರತಲ್ಲ ಏಕೆ? (ಕುಶಲವೇ ಕ್ಷೇಮವೇ)
"ಹೃದಯಾಘಾತ ಅಥವಾ ಪಾರ್ಶ್ವವಾಯು ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ಶೇ.50 ರಷ್ಟು ರೋಗಿಗಳು ಒಂದೂ ಬಾರಿ ಕೂಡ ತಮ್ಮ ರಕ್ತದೊತ್ತಡವನ್ನು ಪರೀಕ್ಷೆ ಮಾಡಿಕೊಂಡಿರದೆ ಇರುವುದು ಕಂಡು ಬಂದಿದೆ. ರಕ್ತದೊತ್ತಡ ನಿಯಂತ್ರಣದಲ್ಲಿದಿದ್ದರೆ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ.
ಪರಿಸ್ಥಿತಿ ಹೀಗಿರುವ ಹಿನ್ನೆಲೆಯಲ್ಲಿ ಜನರು ಆಸ್ಪತ್ರೆಗೆ ಬಂದಂತಹ ಸಂದರ್ಭದಲ್ಲಿ ತಮ್ಮ ರಕ್ತದೊತ್ತಡವನ್ನು ಪರಿಶೀಲಿಸುವಂತೆ ಆಸ್ಪತ್ರೆಯ ಸಿಬ್ಬಂದಿಗಳನ್ನು ಒತ್ತಾಯಿಸಬೇಕು. ಈ ಬಗ್ಗೆ ಅರಿವು ಮೂಡಿಸುವ ಆಗತ್ಯವಿದೆ ಎಂದು ಜೀಮನ್ ಅವರು ಹೇಳಿದ್ದಾರೆ.
ಅಧಿಕ ರಕ್ತದೊತ್ತಡವು ಹೃದಯರಕ್ತನಾಳದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದ್ದು, ಇದು ಶೇ.30ರಷ್ಟು ಸಾವಿಗೆ ಕಾರಣವಾಗುತ್ತದೆ ಮತ್ತು ದೇಶವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದನ್ನು ತಡೆಯುತ್ತದೆ ಎಂದು ಅಧ್ಯಯನ ಹೇಳಿದೆ.
ಆಸ್ಪತ್ರೆಗಳು, ಔಷಧಾಲಯಗಳು ಮತ್ತು ಪ್ರಯೋಗಾಲಯಗಳು ರಕ್ತದೊತ್ತಡ ತಪಾಸಣೆ ಜನಪ್ರಿಯಗೊಳಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಅಧ್ಯಯನ ಸಲಹೆ ನೀಡಿದೆ.