ಬೆಂಗಳೂರು: ನಮ್ಮ ಸಂಪ್ರದಾಯದಲ್ಲಿ ಆರೋಗ್ಯ ಸಮಸ್ಯೆಗಳಿಗೆ ಒಂದಲ್ಲಾ ಒಂದು ರೀತಿಯ ಮನೆಮದ್ದು ಇದೆ. ಆದರೆ, ಅವೆಲ್ಲವುಗಳು ಪ್ರತಿಯೊಂದಕ್ಕೂ ಸರಿಹೋಗುವುದಿಲ್ಲ. ಹೀಗಾಗಿ ಮುಂದಿನ ಬಾರಿ ನೀವು ಸಂಪ್ರದಾಯದ ಹೆಸರಿನಲ್ಲಿ ನವಜಾತ ಶಿಶುವಿನ ಹೊಕ್ಕುಳ ಬಳ್ಳಿಗೆ ಎಣ್ಣೆ ಅಥವಾ ಅರಿಶಿನವನ್ನು ಹಚ್ಚುವ ಮುನ್ನ ಎರಡು ಬಾರಿ ಯೋಚಿಸಿ.
ಅಪರೂಪದ ಜೀವಕ್ಕೆ ಅಪಾಯಕಾರಿಯಾದ ನವಜಾತ ಶಿಶುವಿನ ಪಿತ್ತಜನಕಾಂಗದಲ್ಲಿ ಕೀವು (liver abscess) ತುಂಬಿಕೊಂಡ ರೋಗದಿಂದ ಬಳಲುತ್ತಿದ್ದ 8 ದಿನದ ಶಿಶುವಿಗೆ ನಗರ ಮೂಲದ ಖಾಸಗಿ ಆಸ್ಪತ್ರೆಯ ವೈದ್ಯರು ಹೊಸ ಜೀವವನ್ನು ನೀಡಿದ್ದಾರೆ. ಕುಟುಂಬದ ಸಂಪ್ರದಾಯದ ಭಾಗವಾಗಿ ಐದು ಮತ್ತು ಆರನೇ ದಿನ ಹೊಕ್ಕುಳ ಬಳ್ಳಿಯ ಪ್ರದೇಶಕ್ಕೆ ಅರಿಶಿನ ಮತ್ತು ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಈ ಸಮಸ್ಯೆ ಉಂಟಾಗಿದೆ.
ಈ ಸೋಂಕು ಹೊಕ್ಕುಳ ಬಳ್ಳಿ ಮತ್ತು ಪೋರ್ಟಲ್ ನರಗಳ ಮೂಲಕ ಒಳ ಇಳಿದು ಪಿತ್ತರಸದ ನಾಳಗಳ ಮೂಲಕ ಹರಡುತ್ತದೆ.
ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿವೆ ಎಂಬ ಸಮಸ್ಯೆಗಳೊಂದಿಗೆ ಶಿಶುವನ್ನು ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ವೈದ್ಯರ ಫೋಟೊಥೆರಪಿ ಶಿಫಾರಸಿನಂತೆ ಜಾಂಡೀಸ್ ಚಿಕಿತ್ಸೆಗಾಗಿ NICU ಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲು ಮಾಡಿಕೊಂಡ ಎರಡು ಗಂಟೆಗಳ ನಂತರ, ಮಗುವಿಗೆ ಉಸಿರಾಟದ ತೊಂದರೆ ಎದುರಾಯಿತು ಮತ್ತು ಆಮ್ಲಜನಕದ ಬೆಂಬಲ ನೀಡಬೇಕಾಯಿತು. ಮಗುವಿನ ಎದೆಯ ಎಕ್ಸ್-ರೇ ಎರಡೂ ಕಡೆಯಲ್ಲಿನ ನ್ಯುಮೋನಿಟಿಸ್ ಅನ್ನು ಬಹಿರಂಗಪಡಿಸಿದೆ. ಇದಕ್ಕಾಗಿ ವೈದ್ಯರು ಮಗುವಿಗೆ ಆ್ಯಂಟಿಬಯೋಟಿಕ್‌ಗಳ ಮೂಲಕ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾರೆ.
ಮಗುವಿನ ಹೊಕ್ಕುಳ ಬಳ್ಳಿಯಿಂದ ಕೀವು ನಿರಂತರವಾಗಿ ಹೊರಸೂಸುವುದನ್ನು ವೈದ್ಯರು ಗಮನಿಸಿದ್ದಾರೆ. ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್‌ನಲ್ಲಿ liver abscess ಉಂಟಾಗಿರುವುದನ್ನು ಬಹಿರಂಗಪಡಿಸಿದೆ.
'ನವಜಾತ ಶಿಶುವಿನ liver abscess ಅಪರೂಪವಾಗಿ ಕಂಡುಬರುತ್ತದೆ. ನವಜಾತ ಶಿಶುಗಳಲ್ಲಿ ಹೊಕ್ಕುಳ ಬಳ್ಳಿಯನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಜನನದ ನಂತರ, ಬಳ್ಳಿಯನ್ನು ಹೊಕ್ಕುಳ ಬಳ್ಳಿಯ ಬಳಿಯೇ ಬಿಡಲಾಗಿರುತ್ತದೆ ಮತ್ತು ಸಾಮಾನ್ಯವಾಗಿ ಸುಮಾರು 10 ದಿನಗಳ ನಂತರ ಅದು ಬೀಳುತ್ತದೆ. ಪಾಲಕರು ಆಸ್ಪತ್ರೆಯಲ್ಲಿ ಸ್ನಾನದ ವಿಭಾಗದ ತಜ್ಞರು ನೀಡುವ ಸೂಚನೆಗಳನ್ನು ಅನುಸರಿಸಬೇಕು ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಎಣ್ಣೆ, ಅರಿಶಿನ, ಗೋಮೂತ್ರ ಅಥವಾ ಕಲ್ಲಿದ್ದಲನ್ನು ಹಚ್ಚುವುದನ್ನು ತಪ್ಪಿಸಬೇಕು. ಪಾಲಕರು ಹೊಕ್ಕುಳ ಬಳ್ಳಿಯನ್ನು ಸಾಮಾನ್ಯ ಸ್ನಾನದಿಂದಲೇ ಸ್ವಚ್ಛಗೊಳಿಸಬೇಕು ಮತ್ತು ಹತ್ತಿ ಬಟ್ಟೆಯಿಂದ ಒರೆಸಿ ಒಣಗಿಸಬೇಕು. ಹೊಕ್ಕುಳ ಬಳ್ಳಿಯ ಸ್ಥಳವನ್ನು ಯಾವಾಗಲೂ ಒಣಗಿಸಬೇಕು' ಎಂದು ಕಿಂಡರ್ ಮಹಿಳಾ ಆಸ್ಪತ್ರೆ ಮತ್ತು ಫಲವತ್ತತೆ ಕೇಂದ್ರದ ಮಕ್ಕಳ ಮತ್ತು ನಿಯೋನಾಟಾಲಜಿ ಸಲಹೆಗಾರರಾದ ಡಾ. ಲಿನಾಥ ರೆಡ್ಡಿ ಎನ್ ಮತ್ತು ಡಾ. ಎಸ್ ಇಂದು ನಾಯರ್ ತಿಳಿಸಿದ್ದಾರೆ.
Advertisement