ಆರೋಗ್ಯ ವೃದ್ಧಿಗೆ 'ಸಂತೋಷ'ದ ಮದ್ದು!

ಕಸ್ತೂರಿಮೃಗ ತನ್ನ ಹೊಕ್ಕಳೊಳಗೆ ಸುವಾಸನೆಯನ್ನು ಇಟ್ಟುಕೊಂಡು, ಜಗದಲೆಲ್ಲಾ ಅದನ್ನು ಹುಡುಕಾಡುವಂತೆ ಮನುಷ್ಯ ಕೂಡ ತನ್ನಲ್ಲೇ ಅಡಗಿರುವ ಸಂತೋಷವನ್ನು ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಲೇ ಇದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಸ್ತೂರಿಮೃಗ ತನ್ನ ಹೊಕ್ಕಳೊಳಗೆ ಸುವಾಸನೆಯನ್ನು ಇಟ್ಟುಕೊಂಡು, ಜಗದಲೆಲ್ಲಾ ಅದನ್ನು ಹುಡುಕಾಡುವಂತೆ ಮನುಷ್ಯ ಕೂಡ ತನ್ನಲ್ಲೇ ಅಡಗಿರುವ ಸಂತೋಷವನ್ನು ಬಾಹ್ಯ ಜಗತ್ತಿನಲ್ಲಿ ಹುಡುಕುತ್ತಲೇ ಇದ್ದಾನೆ.

ಈ ಹುಡುಕಾಟದಲ್ಲಿ ನಿರಾಶೆ, ಅತೃಪ್ತಿ, ಅಶಾಂತಿ, ಖಿನ್ನತೆಗೊಳಗಾಗಿ ಅನಾವಶ್ಯಕ ಔಷಧಗಳು ಮತ್ತು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದಾನೆ.

ಆರೋಗ್ಯವೆಂದರೆ ಕೇವಲ ಕಾಯಿಲೆ ಅಥವಾ ವಿಕಲತೆಗಳಿಲ್ಲದ ಸ್ಥಿತಿಯಷ್ಟೆ ಅಲ್ಲ; ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದೆ.

ಸುಸ್ಥಿತಿ ಎಂದರೆ ಸಂತೋಷ, ಶಾಂತಿ ಮತ್ತು ಸಮಾಧಾನಸ್ಥಿತಿ ಎಂದರ್ಥ. ಆರೋಗ್ಯವೆಂದರೆ ಸಂತೋಷ, ಅಸಂತೋಷವೆಂದರೆ ಅನಾರೋಗ್ಯ. ಈ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಆರೋಗ್ಯ ಎಂಬ 4 ಪ್ರಕಾರಗಳನ್ನು ಗುರುತಿಸಲಾಗಿದೆ. ಇವೆಲ್ಲವುಗಳ ಸುಸ್ಥಿತಿಯಿಂದ ಮಾತ್ರ ಆರೋಗ್ಯ ಉಂಟಾಗುತ್ತದೆ.

ಆರೋಗ್ಯದ ಪ್ರತಿಯೊಂದು ಪ್ರಕಾರವನ್ನು ನಿಯಂತ್ರಿಸುವ ಅಂಶಗಳು ಹಲವಾರಿದ್ದು, ಅವೆಲ್ಲವುಗಳ ನಿಯಂತ್ರಣದಿಂದ ಮಾತ್ರ ಆರೋಗ್ಯ ಸಾಧ್ಯ. ದೇಹದ ರಚನೆ ಮತ್ತು ಕಾರ್ಯಗಳನ್ನು ನಿಯಂತ್ರಿಸುವ ವಂಶವಾಹಿಗಳು, ಆಹಾರ, ವ್ಯಾಯಾಮ, ಅಭ್ಯಾಸಗಳು ಇತ್ಯಾದಿಗಳು ದೈಹಿಕ ಆರೋಗ್ಯವನ್ನು ನಿಯಂತ್ರಿಸುತ್ತವೆ. ನಮ್ಮ ದೈನಂದಿನ ಅಭ್ಯಾಸಗಳು ನಮ್ಮ ಜೀವನದಲ್ಲಿ ಸಂತೋಷವನ್ನು ಉತ್ತೇಜಿಸುವಲ್ಲಿ ಮತ್ತು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅವುಗಳ ಕುರಿತ ಮಾಹಿತಿ ಇಂತಿದೆ...

ಧ್ಯಾನ
ಧ್ಯಾನ ಮಾಡುವುದು ಕಷ್ಟ, ಧ್ಯಾನ ಮಾಡಲು ಸಮಯವಿಲ್ಲ, ಧ್ಯಾನ ನಿವೃತ್ತಿ ಹೊಂದಿ ಬಿಡುವಾಗಿರುವವರಿಗೆ ಎಂದು ಹೇಳುವವರೇ ಹೆಚ್ಚು. ಹೀಗೆ ಅನೇಕ ಕಾರಣಗಳನ್ನು ನೀಡುತ್ತಾ ಧ್ಯಾನವನ್ನು ಮುಂದೂಡುವವರಿದ್ದಾರೆ. ಆದರೆ, ಧ್ಯಾನದಿಂದ ಒತ್ತಡ ಹಾಗೂ ಸಂತೋಷವನ್ನು ಕಂಡುಕೊಳ್ಳಬಹುದು ಎಂಬು ಸಾಕಷ್ಟು ಜನರಿಗೆ ತಿಳಿದಿಲ್ಲ. ದಿನಕ್ಕೆ ಕನಿಷ್ಠ 30 ನಿಮಿಷಗಳ ಧ್ಯಾನ ಮಾಡಿದರೂ ಸಾಕು. ಆರೋಗ್ಯ ವೃದ್ಧಿಯಾಗಲಿದೆ. ಧ್ಯಾನದಲ್ಲಿ ಹಲವಾರು ವಿಧಾನಗಳಿದ್ದು, ಪ್ರಾರಂಭದಲ್ಲಿ ಸದ್ದಿಲ್ಲದೆ ಹತ್ತು ನಿಮಿಷ ನಮ್ಮ ಸ್ವಂತ ಆಲೋಚನೆಗಳ ಜತೆ ಕುಳಿತು, ಅವುಗಳನ್ನು ಗಮನಿಸುವಂತಹ ಸರಳ ವಿಧಾನವನ್ನು ಆರಿಸಿಕೊಳ್ಳಿರಿ. ದೀರ್ಘವಾದ ಉಸಿರಾಟ ಕೂಡ ಧ್ಯಾನದ ಒಂದು ರೂಪ.

ವ್ಯಾಯಾಮ
ನಿಮ್ಮ ವಯಸ್ಸಿಗನುಗುಣವಾಗಿ, ಸಾಮರ್ಥ್ಯಕ್ಕೆ ತಕ್ಕಷ್ಟು, ನಿಮಗೆ ಇಷ್ಟವಾಗುವ ಹಾಗೂ ಸೂಕ್ತವಾದ ವ್ಯಾಯಾಮಗಳನ್ನು ದಿನನಿತ್ಯ ಮಾಡಿ. ಮುಂಜಾನೆಯ ವ್ಯಾಯಾಮ ಬಹು ಪ್ರಯೋಜನಕಾರಿ. ಗುಂಪಿನಲ್ಲಿ ಸಂತಸದಿಂದ ಮಾಡುವ ವ್ಯಾಯಾಮ ಮತ್ತು ಕ್ರೀಡೆಗಳು ನೋವುನಿವಾರಕ ಎಂಡಾರ್ಫಿನ್‌ಗಳ ಬಿಡುಗಡೆಗೆ ಕಾರಣವಾಗುತ್ತವೆ.

ವಾರದಲ್ಲಿ ಒಮ್ಮೆಯಾದರೂ ಕನಿಷ್ಠ 30 ನಿಮಿಷ ಪ್ರಕೃತಿಯ ಹಸಿರು ವಾತಾವರಣದಲ್ಲಿ ವಿಹರಿಸಬೇಕು. ಬೆಳಗಿನ ಬಿಸಿಲಿನ ಕಿರಣಗಳು ವಿಟಮಿನ್ ಡಿಯನ್ನು ಉತ್ಪಾದನೆ ಮಾಡುವ ಮತ್ತು ಖಿನ್ನತೆಯನ್ನು ದೂರಮಾಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ವಿಸುವ ಸೆರೆಟೋನಿನ್/ಡೋಪಮಿನ್ ಬಿಡುಗಡೆ ಮಾಡುವಂತಹ ಒಂದು ಪ್ರಾಕೃತಿಕ ಔಷಧ. ಹೀಗಾಗಿ ಸಾಧ್ಯವಾದಷ್ಟು ಎಳೆಬಿಸಿಲಿನಲ್ಲಿ ವ್ಯಾಯಾಮವನ್ನು ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಿರಿ.

ನಿದ್ರೆ
6–8ಗಂಟೆಗಳ ಸುಖನಿದ್ರೆಯಿಂದ ಮನುಷ್ಯನ ದಣಿದ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುವುದು; ರೋಗನಿರೋಧಕ ಶಕ್ತಿ ಹೆಚ್ಚುವುದು; ನೆನಪಿನ ಶಕ್ತಿಯೂ ವೃದ್ಧಿಸುವುದು. ನಿದ್ರೆಯು ಡೋಪಮಿನ್ ಬಿಡುಗಡೆ ಮಾಡುವಂತೆ ಮೆದುಳಿಗೆ ಸಂಕೇತಗಳನ್ನು ಕಳುಹಿಸುವುದರಿಂದ ನಿದ್ರೆಯ ಆರೋಗ್ಯವನ್ನು ಕಾಪಾಡಲು ಮನಸ್ಸನ್ನೂ, ಮಲಗುವ ಕೋಣೆಯ ವಾತಾವರಣವನ್ನೂ ಪ್ರಶಾಂತವಾಗಿಟ್ಟುಕೊಳ್ಳಬೇಕು.

ಸ್ವ-ಆರೈಕೆ
ನಾಗಾಲೋಟದ ಈ ಬದುಕಿನಲ್ಲಿ ಎಲ್ಲರೂ ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಾಗಿಡಲೇಬೇಕು. ಹಿತವಾದ ಬಿಸಿನೀರಿನ ಸ್ನಾನ, ದೇಹದ ಮಸಾಜ್, ಪ್ರಯಾಣ, ಭೋಜನ, ಸತ್ಸಂಗ, ಸಂಗೀತ, ಸಿನಿಮಾ ವೀಕ್ಷಣೆ – ಹೀಗೆ ನಿಮಗೆ ಇಷ್ಟವಾದ ಪ್ರವೃತ್ತಿಗಳನ್ನು ವೃತ್ತಿಯೊಟ್ಟಿಗೆ ರೂಢಿಸಿಕೊಳ್ಳಬೇಕು; ಇಂಥ ಸರಳ ಜೀವನಶೈಲಿಯ ವಿಧಾನಗಳಿಂದ ಸ್ವಯಂ ಆರೈಕೆ ಮಾಡಿಕೊಳ್ಳಬೇಕು. ಇದು ಸೆರೆಟೋನಿನ್ ಮತ್ತು ಆಕ್ಸಿಟೋಸಿನ್‌ಗಳ ಬಿಡುಗಡೆಗೆ ಕಾರಣವಾಗಿ ಸದಾ ಲವಲವಿಕೆಯಿಂದ ಇರಲು ಸಹಾಯಕವಾಗುತ್ತದೆ.

ಆಹಾರ ಕ್ರಮ
ನಾವು ಸೇವಿಸುವ ಆಹಾರ ನಮ್ಮ ಶರೀರ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತದೆ. ಹಿತ–ಮಿತವಾದ ಸಾತ್ವಿಕ ಆಹಾರಸೇವನೆ ನಮ್ಮದಾಗಬೇಕು. ಕಾರ್ಬೊಹೈಡ್ರೇಟ್ಸ್‌ ಮತ್ತು ಕೊಬ್ಬು ಅಧಿಕವಾಗಿರುವ ಜಂಕ್ ಫುಡ್‌ಗಳನ್ನು ಹೆಚ್ಚು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು, ಆಳವಾಗಿ ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆ ಬೇಡ.

ನಮ್ಮ ದೇಹದಲ್ಲಿ ಉತ್ಪಾದನೆ ಆಗದ ‘ಟ್ರಿಪ್ಟೊಫಾನ್’ ಎಂಬ ಪೌಷ್ಟಿಕಾಂಶ ಅಧಿಕವಾಗಿರುವ ಆಹಾರಗಳಾದ ಹಾಲು, ಬಾಳೆಹಣ್ಣು, ತತ್ತಿಗಳನ್ನು ಸೇವಿಸಿರಿ. ಒಮೆಗಾ–3 ಅಧಿಕವಾಗಿರುವ ಆಹಾರಗಳಾದ ತುಪ್ಪ, ಬಾದಾಮಿ, ಅಂಜೂರ, ಉತ್ತುತ್ತಿ, ಬೇಳೆಕಾಳುಗಳನ್ನು ಸೇವಿಸಬೇಕು. ಇವು ಸೆರೆಟೋನಿನ್ ಮತ್ತು ಡೋಪಮಿನ್ ಬಿಡುಗಡೆಗೆ ಸಹಾಯಕವಾಗುತ್ತವೆ. ಖಿನ್ನತೆಯನ್ನು ದೂರ ಮಾಡಲು 50-100 ಗ್ರಾಂ ಡಾರ್ಕ್ ಚಾಕಲೇಟ್‌ ಅನ್ನು ತಿಂಗಳಿಗೊಮ್ಮೆ ತಿನ್ನಬಹುದು.

ಸಾಮಾಜಿಕ ಸಂಪರ್ಕ
ಸಂತೋಷವಾಗಿರಲು ಸಾಮಾಜಿಕ ಸಂಪರ್ಕ ಮುಖ್ಯವಾಗುತ್ತದೆ. ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆಗೆ ನಿಮ್ಮ ಉತ್ತಮ ಬಾಂಧವ್ಯ ಹೊಂದಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ, ಕುಟುಂಬಸ್ಥರೊಂದಿಗೆ ಸಮಯ ಕಳೆಯಿರಿ. ಭಾವನೆಗಳನ್ನು ಹಂಚಿಕೊಳ್ಳಿ.

ನಿಮ್ಮದೇ ಹವ್ಯಾಸಗಳ ರೂಢಿಸಿಕೊಳ್ಳಿ
ನಿಮಗಿಷ್ಟವಾದ ಹವ್ಯಾಸಗಳಿಗೂ ಸಮಯ ನೀಡಿ. ಚಿತ್ರಕಲೆಯಾಗಿರಲಿ, ವಾದ್ಯ ನುಡಿಸುವುದಾಗಲೀ, ಸಂಗೀತ ಕಲೆಯಾಗಿರಲಿ. ಅವುಗಳಿಗೆ ಸಮಯ ಮೀಸಲಿಟ್ಟು, ಸಂತಸದಿಂದಿರಿ.

ಕಲಿಕೆ
ನಿಯಮಿತವಾಗಿ ಕಲಿಕೆಯು ನಮ್ಮ ಜ್ಞಾನವನ್ನು ಮತ್ತಷ್ಟು ವೃದ್ಧಿಸುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಕಲಿಕೆಯನ್ನು ಅಳವಡಿಸಿಕೊಳ್ಳಲು ಪುಸ್ತಕಗಳನ್ನು ಓದಿ, ಆನ್‌ಲೈನ್ ಕೋರ್ಸ್‌ಗಳನ್ನು ತೆಗೆದುಕೊಳ್ಳಿ.

ತಂತ್ರಜ್ಞಾನ ಬಳಕೆಯಿಂದ ದೂರವಿರಿ
ತಂತ್ರಜ್ಞಾನದ ಅತಿಯಾದ ಬಳಕೆ ನಮ್ಮ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಮಿತಿಗೊಳಿಸಿ. ಪ್ರಕೃತಿಯಲ್ಲಿ ಸಮಯ ಕಳೆಯಿರಿ. ಯೋಗಾಭ್ಯಾಸ ರೂಢಿಸಿಕೊಳ್ಳಿ.

ಕೃತಜ್ಞತಾ ಭಾವ
ಕೃತಜ್ಞತೆ ಜೀವನದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ತರುತ್ತದೆ. ಕೃತಜ್ಞತೆಯ ಭಾವನೆ ಆಶಾವಾದ, ಸಂತೋಷ, ಉತ್ಸಾಹ ಮತ್ತು ಇತರ ಧನಾತ್ಮಕ ಭಾವನೆಗಳನ್ನು ಉಂಟುಮಾಡುತ್ತದೆ. ಇದು ಆತಂಕ ಮತ್ತು ಖಿನ್ನತೆಯ ಚಿಹ್ನೆಗಳು ಅನೇಕ ಬಾರಿ ಕಡಿಮೆಯಾಗುತ್ತದೆ. ರೋಗನಿರೋಧಕ ವ್ಯವಸ್ಥೆಯು ಬಲಗೊಳ್ಳುತ್ತದೆ, ರಕ್ತದೊತ್ತಡ ಕಡಿಮೆಯಾಗುತ್ತದೆ, ರೋಗದ ರೋಗಲಕ್ಷಣಗಳು ಕಡಿಮೆಯಾಗುತ್ತವೆ,

ಕೃತಜ್ಞತೆಯನ್ನು ರೂಢಿಸಿಕೊಳ್ಳುವ ಜನರು ಸಾಮಾನ್ಯವಾಗಿ ತಮ್ಮ ಜೀವನದಲ್ಲಿ ಹೆಚ್ಚು ಸಂತೃಪ್ತರಾಗಿರುತ್ತಾರೆ. ಏಕೆಂದರೆ ಅವರು ತಮ್ಮಲ್ಲಿ ಇಲ್ಲದಿರುವುದಕ್ಕೆ ಕೊರಗುವ ಬದಲು ತಮ್ಮಲ್ಲಿರುವುದಕ್ಕೆ ಹೆಚ್ಚು ಸಂತೃಪ್ತಿ ಹೊಂದಲು ಆರಂಭಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com