ಹೊನಗೊನ್ನೆ ಸೊಪ್ಪು: ಕಣ್ಣಿನ ದೋಷಕ್ಕೆ ಮಾತ್ರವಲ್ಲ ಇನ್ನೂ11 ಸಮಸ್ಯೆಗಳಿಗೆ ರಾಮಬಾಣ
ಹೊನಗೊನ್ನೆ ಸೊಪ್ಪು.. ಈ ಪದ ಸಾಮಾನ್ಯವಾಗಿ ದಕ್ಷಿಣ ಭಾರತದ ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಈ ಹೊನಗೊನ್ನೆ ಸೊಪ್ಪು ದಕ್ಷಿಣ ಭಾರತದ ಹಳ್ಳಿಗಾಡಿನ ನಿವಾಸಿಗಳ ದೈನಂದಿನ ಆಹಾರ ಪದ್ಧತಿಯ ಪ್ರಮುಖ ಆಹಾರವಾಗಿದೆ.
ಪಲ್ಯ, ಬಸ್ಸಾರು, ಸಾಂಬಾರು ರೀತಿಯಾಗಿ ವಿವಿಧ ರೀತಿಯ ಖಾದ್ಯಗಳಲ್ಲಿ ಈ ಹೊನಗೊನ್ನೆ ಸೊಪ್ಪನ್ನು ಬಳಸುತ್ತಾರೆ. ಸಾಮಾನ್ಯವಾಗಿ ಹೊಲಗಳಲ್ಲಿ ಹೇರಳವಾಗಿ ಸಿಗುವ ಈ ಹೊನಗೊನ್ನೆ ಸೊಪ್ಪನ್ನು ಆಯುರ್ವೇದ ಶಾಸ್ತ್ರದಲ್ಲಿ ಸಂಸ್ಕೃತದಲ್ಲಿ ಮತ್ಸ್ಯಾಕ್ಷಿ ಎಂದು ಕರೆಯಲ್ಪಡುತ್ತದೆ. ಈ ಸೊಪ್ಪು ತನ್ನ ಔಷಧೀಯ ಗುಣಗಳಿಂದ ಪ್ರಖ್ಯಾತಿ ಹೊಂದಿದೆ.
ಈ ಸೊಪ್ಪಿನಲ್ಲಿ ಶೇ.5ರಷ್ಟು ಪ್ರೊಟೀನ್, ಶೇ. 16 ಮಿಲಿಗ್ರಾಂ ನಷ್ಟು ಕಬ್ಬಿಣಾಂಶ ಹೊಂದಿದೆ. ಕಣ್ಣು-ಕೂದಲಿನ ಚರ್ಮದ ಸಮಸ್ಯೆಗೆ ಇದು ರಾಮಬಾಣ. ಅಷ್ಟೇ ಅಲ್ಲದೆ ಕೆಮ್ಮು ನೆಗಡಿ ಸಕ್ಕರೆ ಕಾಯಿಲೆ ಮೂಲ ಸಮಸ್ಯೆಗೂ ಇದು ಪರಿಹಾರವಾಗಿದೆ. ಇಂತಹ ಅಮೂಲ್ಯ ಔಷಧೀಯ ಗುಣಗಳ ಸೊಪ್ಪಿನ ಉಪಯೋಗಗಳು ಇಲ್ಲಿದೆ.
ಎರಡು ಚಮಚ ಬೇಯಿಸಿದ ಸೊಪ್ಪಿನ ರಸವನ್ನು ನಲವತ್ತೈದು ದಿನಗಳು ತಪ್ಪದೇ ಸೇವಿಸಿದರೆ ಕಣ್ಣಿನ ದೋಷ ದೂರವಾಗುತ್ತದೆ. ಈ ಸೊಪ್ಪಿನ ಹೂವುಗಳನ್ನು ಸೇವಿಸಿದರೆ ಇರುಳು ಕುರುಡುತನ ವಾಸಿಯಾಗುತ್ತದೆ. ಕಣ್ಣಲ್ಲಿ ನೀರು ಸೋರುವುದು ಕಣ್ಣಿನ ಊತ, ಕಾಟರಾಕ್ಟ್ ಸಮಸ್ಯೆ ವಾಸಿಯಾಗುತ್ತದೆ. ಈ ಸೊಪ್ಪಿನ ರಸವನ್ನು ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡರೆ ಕಣ್ಣಿನ ಸಮಸ್ಯೆ ದೂರಾಗುತ್ತದೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಈ ಸೊಪ್ಪಿನ ಬೇರುಗಳು ಹುಳಿತೇಗು ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ.
ರಕ್ತದೊತ್ತಡ ಹೆಚ್ಚಿರುವವರು ಈ ಸೊಪ್ಪನ್ನು ಸೇವಿಸುತ್ತಿದ್ದರೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಚರ್ಮದ ಕಜ್ಜಿ ಗುಳ್ಳೆ ಮೊಡವೆ ಸಮಸ್ಯೆಗಳಿಗೆ ಔಷಧಿಯಾಗಿ ಬಳಕೆಯಾಗುತ್ತದೆ. ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಮತ್ತು ಈ ಸೊಪ್ಪಿನಲ್ಲಿರುವ ನಾರಿನಂಶ ಸಕ್ಕರೆ ಕಾಯಿಲೆಯನ್ನು ದೂರ ತಳ್ಳುತ್ತದೆ. ಈ ಗಿಡದ ಬೇರನ್ನು ಹಾಲಿನಲ್ಲಿ ಅರೆದು ಕುಡಿಯುವುದರಿಂದ ಮೂತ್ರ ವಿಸರ್ಜನೆ ಸಮಸ್ಯೆ ನಿವಾರಣೆಯಾಗುತ್ತದೆ. ಈ ಸೊಪ್ಪಿನ ರಸ ಮತ್ತು ಮೂಲಂಗಿ ಸೊಪ್ಪಿನ ರಸ 10ಗ್ರಾಂ ಮಿಶ್ರಣ ಮಾಡಿ ಚಿಟಿಕೆ ಸೈಂಧವ ಲವಣ ಸೇರಿಸಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ: ಸ್ತನ್ಯಪಾನದಿಂದ ಪ್ರಸವಾನಂತರದ ಖಿನ್ನತೆ ದೂರ!
ಸ್ತ್ರೀಯರ ಮುಟ್ಟಿನ ಸಮಸ್ಯೆ ನಿವಾರಣೆಗೆ ಈ ಗಿಡದ ಬೇರನ್ನು ಅರೆದು ಬೆಲ್ಲವನ್ನು ಮಿಶ್ರಣ ಮಾಡಿ ತಿಂದರೆ ಒಳ್ಳೆಯದು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ