ಮಧುಮೇಹವನ್ನು ಗುಣಪಡಿಸಬಹುದಾ? ಡಯಾಬಿಟಿಕ್ ರಿವರ್ಸಲ್ ಬಗ್ಗೆ ನಿಮಗೆಷ್ಟು ಗೊತ್ತು?
ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತಿದೆ. ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
Published: 04th September 2023 02:20 PM | Last Updated: 06th September 2023 01:33 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತಿದೆ. ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಇದರ ನಡುವೆ ಜಗತ್ತಿನ ಹಲವೆಡೆ ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬ ಪ್ರಚಾರ ಆರಂಭವಾಗಿದೆ. ಇದನ್ನು 'ಡಯಾಬಿಟಿಕ್ ರಿವರ್ಸಲ್' ಚಿಕಿತ್ಸೆ ಎಂದು ಕರೆಯಲಾಗುತ್ತದೆ.
ಡಯಾಬಿಟಿಕ್ ರಿವರ್ಸಲ್ ಚಿಕಿತ್ಸೆ ಹೆಸರಿನಲ್ಲಿ ಇತ್ತೀಚೆಗೆ ಸಾಕಷ್ಟು ಕಂಪನಿಗಳು ನಾಯಿಕೊಡಗಳಂತೆ ತಲೆ ಎತ್ತಿದ್ದು, ಸಾಕಷ್ಟು ಮಂದಿ ಈ ಕಂಪನಿಗಳು ನೀಡುವ ಆಶ್ವಾಸನಗಳ ನಂಬಿ ಚಿಕಿತ್ಸೆ ಪಡೆಯಲು ಆರಂಭಿಸಿದ್ದಾರೆ. ಆದರೆ, ಈ ಜಾಲಕ್ಕೆ ಬೀಳದಂತೆ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
ಇತ್ತೀಚಿನ ಘಟನೆಯೊಂದರಲ್ಲಿ, ಟೈಪ್ 1 ಡಯಾಬಿಟಿಕ್ ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು, ಇದನ್ನು ನಂಬಿ ಚಿಕಿತ್ಸೆ ಪಡೆದುಕೊಂಡಿದ್ದು, ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಯಾಬಿಟಿಕ್ ರಿವರ್ಸಲ್ ಚಿಕಿತ್ಸೆ ಪಡೆಯುತ್ತಿದ್ದ ಇವರು ಇನ್ಸುಲಿನ್ ಪಡೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು. ಇದರ ಪರಿಣಾಮ ಮಧುಮೇಹದ ಮಟ್ಟವು 500ಕ್ಕೆ ಹೋಗಿದೆ. ಬಳಿಕ ಆರೋಗ್ಯದಲ್ಲಿ ಏರುಪೇರು ಕಂಡಬಂದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಮಧುಮೇಹದ ಎಫೆಕ್ಟ್: ದೇಶದಲ್ಲಿ ಪ್ರತಿ ವರ್ಷ ನಾಳೀಯ ಕಾಯಿಲೆಗಳ ಪ್ರಮಾಣ ಶೇ.10 ರಷ್ಟು ಹೆಚ್ಚಳ!
ಇದೇ ರೀತಿಯ ಮತ್ತೊಂದು ಘಟನೆ ಕೂಡ ವರದಿಯಾಗಿದೆ. ಈ ತರಹದ ಚಿಕಿತ್ಸೆ ಬಳಿಕ ಟೈಪ್ 2 ಡಯಾಬಿಟಿಸ್ ನಿಂದ ಬಳಲುತ್ತಿದ್ದ ವ್ಯಕ್ತಿಯ ಮಧುಮೇಹ 300-400ಕ್ಕೆ ಏರಿಕೆಯಾಗಿದೆ.
ಕರ್ನಾಟಕ ರಿಸರ್ಚ್ ಸೊಸೈಟಿ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ ಇನ್ ಇಂಡಿಯಾ (ಕೆಆರ್‌ಎಸ್‌ಎಸ್‌ಡಿಐ) ಅಧ್ಯಕ್ಷ ಡಾ ಮನೋಹರ್ ಕೆಎನ್ ಅವರು ಮಾತನಾಡಿ, ಈ ಕಂಪನಿಗಳು ವಂಚನೆಗಳನ್ನು ನಡೆಸುತ್ತಿವೆ. ಮಧುಮೇಹವನ್ನು ಗುಣಪಡಿಸಿಕೊಳ್ಳಲು ಯತ್ನಿಸಿ, ಹತಾಶರಾದ ಜನರನ್ನು ಇವರು ತಮ್ಮ ಜಾಲಕ್ಕೆ ಬೀಳಿಸಿಕೊಳ್ಳುತ್ತಾರೆ. ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಎಲೆಕ್ಟ್ರಾನಿಕ್ ಸಾಧನಗಳ ಬಳಸಿ ಅಥವಾ ಇತರ ಸಾಬೀತಾಗದ ವಿಧಾನಗಳ ಮೂಲಕ ಮಧುಮೇಹವನ್ನು ಹಿಮ್ಮೆಟ್ಟಿಸಲು ಅವಾಸ್ತವಿಕ ಚಿಕಿತ್ಸೆಗಳನ್ನು ನೀಡುತ್ತಾರೆ. ಈ ಚಿಕಿತ್ಸೆ ಪಡೆದುಕೊಂಡ ಸಾಕಷ್ಟು ರೋಗಿಗಳು ಅಧಿಕ ಸಕ್ಕರೆ ಕಾಯಿಲೆಯ ಸಮಸ್ಯೆ ಶುರುವಾಗಿ ಪ್ರತೀವಾರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ಹೇಳಿದ್ದಾರೆ.
ಟೈಪ್-2 ಡಯಾಬಿಟಿಸ್'ನ್ನು ಗುಣಪಡಿಸಲು ಸಾಧ್ಯವಿಲ್ಲ. ಅದನ್ನು ನಿಯಂತ್ರಿಸಬಹುದಷ್ಟೇ. ಆಹಾರ ಕ್ರಮ ಅನುಸರಿಸುತ್ತಿದ್ದರೂ ಮಧುಮೇಹದಿಂದ ಬಳಲುತ್ತಿರುವವರು ಆಗಾಗ್ಗೆ ಮಧುಮೇಹವನ್ನು ಪರಿಶೀಲಿಸಿಕೊಳ್ಳುತ್ತಿರಬೇಕು. ಡಯಾಬಿಟಿಕ್ ರಿವರ್ಸಲ್ ಎಂಬುದು ಒಂದು ಹಗರಣವಾಗಿದ್ದು, ಇದರ ಬಗ್ಗೆ ಜನರು ತಿಳಿದುಕೊಳ್ಳಲೇಬೇಕಿದೆ. ಹಣ ನೀಡುವುದಕ್ಕೂ ಮುನ್ನ ಅದರ ಬಗ್ಗೆ ಅಧ್ಯಯನ ನಡೆಸಿ. ಮಧುಮೇಹಕ್ಕೆ ಯಾವುದೇ ಗ್ಯಾರಂಟಿ ಚಿಕಿತ್ಸೆ ಇಲ್ಲ, ಹೀಗಾಗಿ ಡಯಾಬಿಟಿಕ್ ರಿವರ್ಸಲ್ ಚಿಕಿತ್ಸೆಯನ್ನು ಸಂದೇಹದಿಂದಲೇ ನೋಡಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ?; ದೇಶದಲ್ಲಿ 101 ಮಿಲಿಯನ್ ಮಂದಿಗೆ ಸಕ್ಕರೆ ಖಾಯಿಲೆ: ICMR ವರದಿ
ಡಯಾಬಿಟಿಕ್ ರಿವರ್ಸಲ್ ಎಂಬುದು ತಪ್ಪು ಗ್ರಹಿಕೆಯಾಗಿದ್ದು, ಇದನ್ನು ನಂಬಿ ಚಿಕಿತ್ಸೆ ಪಡೆದರೆ ರೋಗದ ಮಟ್ಟ ಉಲ್ಭಣಗೊಳ್ಳುತ್ತದೆ ಎಂದಿದ್ದಾರೆ.
ಪೌಷ್ಟಿಕಾಂಶ ತಜ್ಞೆ ಮತ್ತು ಮಧುಮೇಹ ಶಿಕ್ಷಣತಜ್ಞರಾಗಿರುವ ರಿಧಿಮಾ ಬಾತ್ರಾ ಅವರು ಮಾತನಾಡಿ, ಚಿಕಿತ್ಸೆ ಪಡೆಯುವುದರಿಂದ ಯಾವುದೇ ಹಾನಿಯಾಗದಿದ್ದಲೂ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವುದು ಮುಖ್ಯವಾಗುತ್ತದೆ. ಚಿಕಿತ್ಸೆ ಸಕ್ಕರೆ ಮಟ್ಟವನ್ನು ಸಾಮಾನ್ಯಕ್ಕೆ ತರಲು ಸಹಾಯ ಮಾಡುತ್ತದೆ. ಆದರೆ, ಆಗಾಗ್ಗೆ ಪರಿಶೀಲನೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಿರ್ಲಕ್ಷ್ಯಯುತ ಜೀವನಶೈಲಿ ಮುಂದುವರೆಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಹೇಳಿದ್ದಾರೆ.
ನನ್ನ ಮೇಲ್ವಿಚಾರಣೆಯಲ್ಲಿರುವ ಶೇ.35ರಷ್ಟು ರೋಗಿಗಳು ಡಯಾಬಿಟಿಕ್ ರಿವರ್ಸಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯ ಸೃಷ್ಟಿಸುವ ಯಾವುದೇ ಚಿಕಿತ್ಸೆಯಿಂದ ದೂರ ಉಳಿಯುವುದೇ ಒಳಿತು ಎಂದು ತಿಳಿಸಿದ್ದಾರೆ.