ಕಿಡ್ನಿ ಸ್ಟೋನ್: ನಿರ್ಲಕ್ಷಿಸಿದರೆ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಲ್ಲಹುದು; ಕಲ್ಲು ಸಣ್ಣದಿದೆ ಎಂದು ಕಡೆಗಣಿಸದಿರಿ...

ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ಸಾಮಾನ್ಯ ಮೂತ್ರಪಿಂಡದ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 12ರಷ್ಟು ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದಿ ಬಳಲುತ್ತಿರುವವರು ನಿರ್ಲಕ್ಷ್ಯದಿಂದ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ, ಮೂತ್ರಪಿಂಡ ವೈಫಲ್ಯ ಎದುರಿಸುವ ಸಾಧ್ಯತೆಗಳಿರುತ್ತವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ಸಾಮಾನ್ಯ ಮೂತ್ರಪಿಂಡದ ಸಮಸ್ಯೆಗಳಲ್ಲಿ ಒಂದಾಗಿದೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 12ರಷ್ಟು ಮಂದಿಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದಿ ಬಳಲುತ್ತಿರುವವರು ನಿರ್ಲಕ್ಷ್ಯದಿಂದ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ, ಮೂತ್ರಪಿಂಡ ವೈಫಲ್ಯ ಎದುರಿಸುವ ಸಾಧ್ಯತೆಗಳಿರುತ್ತವೆ.

ಮೂತ್ರಪಿಂಡದಲ್ಲಿ ಕಲ್ಲು ಇರುವವರು ಅತೀವ್ರ ನೋವುಗಳನ್ನು ಎದುರಿಸುತ್ತಿರುತ್ತಾರೆ. ಮೂತ್ರದಲ್ಲಿ ಉರಿ, ನೊರೆ ಬರುವುದು, ಮೂತ್ರ ಬಹಿರಂಗವಾಗಿ ಹೋಗದಿರುವುದು, ಪದೇ ಪದೇ ಮೂತ್ರ ವಿಸರ್ಜನೆ ಹಾಗೂ ತೀವ್ರತರವಾದ ಪ್ರಕರಣಗಳಲ್ಲಿ ಮೂತ್ರದಲ್ಲಿ ರಕ್ತ ಹೆಚ್ಚಾಗಿ ಕಾಣಿಸಿಕೊಳ್ಳುವುದು ಇತ್ಯಾದಿ ಸಮಸ್ಯೆಗಳೂ ಕಂಡುಬರುತ್ತವೆ.

ಕೆಲವೊಮ್ಮೆ ಕೆಲವರಿಗೆ ಸಣ್ಣದಾಗಿ ನೋವು ಬಂದು ಹೋಗುತ್ತದೆ. ಕೆಲವರು ಇದನ್ನು ನಿರ್ಲಕ್ಷಿಸುವುದುಂಟು. ಆದರೆ, ಈ ನಿರ್ಲಕ್ಷ್ಯ ಕೆಲವೊಮ್ಮೆ ಅಪಾಯಗಳನ್ನೂ ತಂದಿಡುವುದುಂಟು. ಏಕೆಂದರೆ, ಒಂದು ಕಲ್ಲು ಮೂತ್ರನಾಳವನ್ನು ನಿರ್ಬಂಧಿಸಿದಾಗ, ಮೂತ್ರಪಿಂಡದಲ್ಲಿ ಒಂದು ರೀತಿಯ ಒತ್ತಡವು ಹೆಚ್ಚಾಗುತ್ತದೆ. ಈ ಒತ್ತಡವು ಮುಂದುವರಿದಾಗ, ಇದು ಮೂತ್ರಪಿಂಡದ ಕಾರ್ಯಚಟುವಟಿಕೆಗೆ ಪರಿಣಾಮ ಬೀರುತ್ತದೆ ಮತ್ತು ಮೂತ್ರಪಿಂಡದ ಹಾನಿಯನ್ನು ಉಂಟುಮಾಡುತ್ತದೆ.

ಈ ತಡೆಗಟ್ಟುವಿಕೆಗೆ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ, ಇದು ಸೋಂಕು ಹರಡಲು ಮತ್ತು ಹೈಡ್ರೋನೆಫ್ರೋಸಿಸ್‌ನಂತಹ ತೊಡಕುಗಳಿಗೆ ಕಾರಣವಾಗಬಹುದು. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ.

ದೀರ್ಘಕಾಲದ ಮೂತ್ರಪಿಂಡದ ಕಲ್ಲಿನ ಸಮಸ್ಯೆಯು ಕಾಲಾನಂತರದಲ್ಲಿ ಮೂತ್ರಪಿಂಡದ ಕಾರ್ಯವನ್ನು ಕ್ರಮೇಣ ನಿಧಾನವಾಗಿಸುತ್ತದೆ. ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಮೂತ್ರಪಿಂಡ ವೈಫಲ್ಯ ಎಂದು ಕರೆಯಲ್ಪಡುವ ಒಂದು ಅಥವಾ ಎರಡೂ ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವವರೆಗೆ ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯು ಪ್ರಗತಿಯಾಗಬಹುದು. ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ನೀಡಲು ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದು ಏಕೈಕ ಮಾರ್ಗವಾಗಿದೆ.

ಮೂತ್ರಪಿಂಡದಲ್ಲಿ ಕಲ್ಲುಗಳು ಹೇಗೆ ಆಗುತ್ತವೆ?

  • ಕಲ್ಲುಗಳು ಮೂತ್ರವ್ಯೂಹದ ಯಾವುದೇ ಭಾಗದಲ್ಲಿ ಅಂದರೆ, ಮೂತ್ರಪಿಂಡ, ಮೂತ್ರನಾಳ ಅಥವಾ ಮೂತ್ರಕೋಶದಲ್ಲಿ ಕಾಣಿಸಿಕೊಳ್ಳಬಹುದು.
  • ರಕ್ತದ ದ್ರವಾಂಶದಲ್ಲಿ ಸಹಜವಾಗಿಯೇ ಅನೇಕ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ರಕ್ತವು ಶೋಧನಾಕ್ರಿಯೆಗೆಂದು ಮೂತ್ರಪಿಂಡದ ಮೂಲಕ ಪರಿಚಲಿಸಿದಾಗ ಮುಖ್ಯವಾದ ಮತ್ತು ಶರೀರಕ್ಕೆ ಅಗತ್ಯವಾದ ರಾಸಾಯನಿಕಗಳು ಅಲ್ಲಿನ ಸಂಗ್ರಹನಾಳಗಳ ಜೀವಕೋಶಗಳ ಮೂಲಕ ಹೀರಲ್ಪಟ್ಟು ಪುನಃ ರಕ್ತವನ್ನು ಸೇರುತ್ತವೆ.
  • ವಿವಿಧ ಕಾರಣಗಳಿಗಾಗಿ ರಕ್ತದಲ್ಲಿ ಕೆಲವು ರಾಸಾಯನಿಕಗಳು ಹೆಚ್ಚಾದಾಗ ಅಥವಾ ಅವುಗಳನ್ನು ಕರಗಿದ ರೂಪದಲ್ಲಿರಿಸಲು ದ್ರವಾಂಶದ ಕೊರತೆಯಾದಾಗ ಅವು ಹರಳುಗಟ್ಟಬಹುದು. ಹೀಗೆ ಮೂತ್ರವ್ಯೂಹದಲ್ಲಿ ಹರಳುಗಟ್ಟುವ ರಾಸಾಯನಿಕಗಳಲ್ಲಿ ಕ್ಯಾಲ್ಸಿಯಂ, ಯುರಿಕ್ ಆ್ಯಸಿಡ್, ಆಕ್ಸಾಲಿಕ್ ಆ್ಯಸಿಡ್, ಸಿಸ್ಟಿನ್ ಮುಖ್ಯವಾದುವು.
  • ಶೇ. 70ರಷ್ಟು ವ್ಯಕ್ತಿಗಳಲ್ಲಿ ಹರಳುಗಳು ಕ್ಯಾಲ್ಸಿಯಂನಿಂದ ಕೂಡಿದ್ದರೂ ಬಹುತೇಕರಲ್ಲಿ ರಕ್ತದ ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಆದರೆ, ಪ್ಯಾರಾಥೈರಾಯ್ಡ್ ಗ್ರಂಥಿಯ ಸ್ರವಿಸುವಿಕೆ ಹೆಚ್ಚಾದಾಗ ಮತ್ತು ದೀರ್ಘಕಾಲದವರೆಗೆ ಹಾಸಿಗೆ ಹಿಡಿದ ವ್ಯಕ್ತಿಗಳಲ್ಲಿ ಮೂಳೆಗಳಿಂದ ಕ್ಯಾಲ್ಸಿಯಂ ಅಂಶವು ರಕ್ತಪರಿಚಲನೆಗೆ ಸೇರಿ, ಹೆಚ್ಚಾದ ಕ್ಯಾಲ್ಸಿಯಂ ಮೂತ್ರವ್ಯೂಹದಲ್ಲಿ ಹರಳುಗಳಾಗುತ್ತವೆ. ಆನುವಂಶೀಯತೆಯ ಕಾರಣದಿಂದ ಪ್ರೊಟೀನ್ ಘಟಕಗಳಾದ ಕೆಲವು ಅಮೈನೋ ಆ್ಯಸಿಡ್‍ಗಳ ಹೀರಿಕೊಳ್ಳುವಿಕೆಯಲ್ಲಿ ಮತ್ತು ಸಾಗಣಿಕೆಯಲ್ಲಿ ದೋಷವಿದ್ದಾಗ ಸಿಸ್ಟಿನ್ ಅಂಶವು ಹರಳುಗಟ್ಟಬಹುದು.
  • ಶೇ 5-10ರಷ್ಟು ವ್ಯಕ್ತಿಗಳಲ್ಲಿ ಕಲ್ಲುಗಳು ಯುರಿಕ್ ಆ್ಯಸಿಡ್‍ನಿಂದ ಕೂಡಿರುತ್ತವೆ. ಈ ವ್ಯಕ್ತಿಗಳಲ್ಲಿ ಇಲ್ಲವೇ ಹೆಚ್ಚು ಯುರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತಿರುತ್ತದೆ ಅಥವಾ ಮೂತ್ರವು ಹೆಚ್ಚು ಆಮ್ಲೀಯತೆಯಿಂದ ಕೂಡಿರುತ್ತದೆ. ಆಹಾರದಲ್ಲಿನ ಪ್ರೊಟೀನ್ ಮತ್ತು ಪ್ಯುರಿನ್ ಅಂಶಗಳು ಚಯಾಪಚಯಾ ಕ್ರಿಯೆಗೆ ಒಳಗಾದಾಗ ಯುರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ.
  • ಕಿಮೋಥೆರಪಿಗೆ ಒಳಗಾದ ಕ್ಯಾನ್ಸರ್ ರೋಗಿಗಳಲ್ಲಿ ಜೀವಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಣಿಸಿದಾಗಲೂ ಯುರಿಕ್ ಆ್ಯಸಿಡ್ ಹೆಚ್ಚು ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ರಕ್ತದ ಯುರಿಕ್ ಆ್ಯಸಿಡ್ ಸಹಜ ಮಟ್ಟದಲ್ಲಿದ್ದರೂ ಜೀರ್ಣಾಂಗವ್ಯೂಹದಲ್ಲಿ ವಿವಿಧ ಕಾರಣಗಳಿಗಾಗಿ (ಶಸ್ತ್ರಚಿಕಿತ್ಸೆ, ಮೊದಲಾದುವು) ನೀರು ಮತ್ತು ಇತರ ದ್ರವಾಂಶಗಳ ಹೀರಿಕೊಳ್ಳುವಿಕೆಯಲ್ಲಿ ಇಳಿಮುಖವಾದಾಗ ಮೂತ್ರದ ಪ್ರಮಾಣ ಕಡಿಮೆಯಾಗಿ ಯುರಿಕ್ ಆ್ಯಸಿಡ್ ಹರಳುಗಟ್ಟಬಹುದು.
  • ಆಕ್ಸಲೇಟ್ ಅಂಶದ ಚಯಾಪಚಯಗಳಲ್ಲಿ ಭಾಗವಹಿಸುವ ಕೆಲವು ನಿರ್ದಿಷ್ಟ ಕಿಣ್ವಗಳ ಕೊರತೆ ಜನ್ಮಜಾತವಾಗಿಯೇ ಇದ್ದಾಗ ಈ ಅಂಶವು ರಕ್ತದಲ್ಲಿ ಹೆಚ್ಚಾಗಿ ಮೂತ್ರವ್ಯೂಹದಲ್ಲಿ ಹರಳುಗಟ್ಟಬಹುದು.
  • ಆಹಾರದಲ್ಲಿ ಕೆಲವು ಪದಾರ್ಥಗಳ ಅತಿಯಾದ ಬಳಕೆ (ಚಹಾ, ಪಾಲಕ್ ಸೊಪ್ಪು, ಕೋಕಾ, ಚಾಕೊಲೇಟ್, ಕಾಳುಮೆಣಸು ಮೊದಲಾದುವು), ನಿರ್ದಿಷ್ಟ ಬ್ಯಾಕ್ಟಿರಿಯಾಗಳು ಮೂತ್ರವ್ಯೂಹದಲ್ಲಿ ಸೋಂಕು ಉಂಟುಮಾಡಿದಾಗ, ಮೂತ್ರನಾಳಗಳಲ್ಲಿ ವಿವಿಧ ಕಾರಣಗಳಿಗಾಗಿ ತಡೆಯುಂಟಾದಾಗ, ಮೂತ್ರದ ಹರಿವು ಸರಾಗವಾಗಿ ಆಗದಿದ್ದಾಗ ಹಾಗೂ ಕೆಲವು ಔಷಧಗಳ ಅತಿಯಾದ ಬಳಕೆ ಮೂತ್ರವ್ಯೂಹದಲ್ಲಿ ಹರಳುಗಟ್ಟುವಿಕೆ ಕಾರಣವಾಗಬಹುದು.

​ರೋಗ ಲಕ್ಷಣಗಳು​?

  • ಪಾರ್ಶ್ವ ಮತ್ತು ಬೆನ್ನು ನೋವು
  • ವಾಕರಿಕೆ ಮತ್ತು ವಾಂತಿ
  • ವಾಸನೆ ಭರಿತ ಮೂತ್ರ
  • ಮೂತ್ರದಲ್ಲಿ ತೊಂದರೆ
  • ಮೂತ್ರ ವಿಸರ್ಜಿಸುವಾಗ ಉರಿ
  • ಮೂತ್ರ ವಿಸರ್ಜಿಸಲು ತೀವ್ರವಾದ ಪ್ರಚೋದನೆಗಳು
  • ನೋವಿನ ಮೂತ್ರ ವಿಸರ್ಜನೆ

ಪತ್ತೆ ಮಾಡುವುದು ಹೇಗೆ?
ರಕ್ತದ ಮಾದರಿ ಮೂಲಕ ಮೊದಲು ಪರೀಕ್ಷೆ ನಡೆಸಲಾಗುತ್ತದೆ. ನಂತರ ಮೂತ್ರಪಿಂಡದ ಕಲ್ಲಿನ ಗಾತ್ರ ಮತ್ತು ಸ್ಥಳವನ್ನು ನೋಡಲು ವೈದ್ಯರು CT ಸ್ಕ್ಯಾನ್, ಅಲ್ಟ್ರಾಸೌಂಡ್ ಅಥವಾ ಕ್ಷ-ಕಿರಣವನ್ನು ನಡೆಸಬಹುದು.

ಚಿಕಿತ್ಸೆಗಳೇನು?
ಈ ಸಮಸ್ಯೆಗೆ ಬಹು ಸುಧಾರಿತ ಚಿಕಿತ್ಸಾ ವಿಧಾನಗಳು ಲಭ್ಯವಿದೆ. ಸಣ್ಣ ಪ್ರಮಾಣದ ಮೂತ್ರ ಪಿಂಡದ ಕಲ್ಲುಗಳು ಕಾಣಿಸಿಕೊಂಡರೆ ಹೆಚ್ಚು ನೀರು ಸೇವಿಸುವ ಮೂಲಕ ಮತ್ತು ನೋವು ನಿವಾರಕಗಳೊಂದಿಗೆ ಸ್ವಯಂ ಪ್ರೇರಿತವಾಗಿ ಅದನ್ನು ಗುಣಪಡಿಸಬಹುದು. ಮೂತ್ರಪಿಂಡದಲ್ಲಿ ದೊಡ್ಡ ಕಲ್ಲುಗಳು ಕಾಣಿಸಿಕೊಂಡಾಗ ಅದಕ್ಕೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.

ನೋವು ನಿವಾರಕ ಚುಚ್ಚುಮದ್ದುಗಳು, ಆ್ಯಂಟಿಬಯೋಟಿಕ್‍ಗಳು, ಅತಿ ಸಣ್ಣ ಕಲ್ಲುಗಳು ಮೂತ್ರದೊಂದಿಗೆ ವಿಸರ್ಜನೆಯಾಗಲು ನಿರ್ದಿಷ್ಟ ಔಷಧಗಳ ಬಳಕೆ.

ಎಕ್ಸ್ಟ್ರಾ ಕಾರ್ಪೋರಿಯಲ್ ಶಾಕ್ ವೇವ್ ಲಿತೊಟ್ರಿಪ್ಸಿ: ಈ ವಿಧಾನದಲ್ಲಿ ಸಮಸ್ಯೆಯಿಂದ ಬಳಲುವ ವ್ಯಕ್ತಿಯನ್ನು ಕೆಲವು ನಿರ್ದಿಷ್ಟ ತಪಾಸಣೆಗಳಿಗೆ ಒಳಪಡಿಸಿ ಕಲ್ಲಿನ ನಿಖರವಾದ ಸ್ಥಾನವನ್ನು ಗುರುತಿಸಿಕೊಳ್ಳುತ್ತಾರೆ. 1.5 ಸೆಂಟಿಮೀಟರ್‍ಗಳಷ್ಟು ವ್ಯಾಸವಿರುವ ಕಲ್ಲುಗಳನ್ನು ಈ ಚಿಕಿತ್ಸೆಯಿಂದ ತೆಗೆಯಬಹುದು. ಎಲೆಕ್ಟ್ರೋಮ್ಯಾಗ್ನೆಟ್ ಅಥವಾ ಪೈಜೋಎಲೆಕ್ಟ್ರಿಕ್ ಮೂಲದಿಂದ ವಿಶೇಷ ಅಲೆಗಳನ್ನು ಚರ್ಮದ ಮೂಲಕ ಕಲ್ಲಿನತ್ತ ಹರಿಹಾಯಿಸಿ ಅದನ್ನು ತುಂಡರಿಸುತ್ತಾರೆ. ಹಾಗೆ ತುಂಡಾದ ಸಣ್ಣ ಸಣ್ಣ ತುಣುಕುಗಳು ಮೂತ್ರನಾಳದ ಮೂಲಕ ಮೂತ್ರದೊಂದಿಗೆ ವಿಸರ್ಜಿಸಲ್ಪಡುತ್ತವೆ.

ಯುರಿಟರೋಸ್ಕೋಪಿಕ್ ಲಿತೊಟ್ರಿಪ್ಸಿ: ಈ ವಿಧಾನದಲ್ಲಿ ಮೂತ್ರನಾಳದ ಮೂಲಕ ಕೊಳವೆಯಂತಹ ಉಪಕರಣವನ್ನು ತೂರಿಸಿ ಲೇಸರ್ ಶಕ್ತಿಯನ್ನು ಬಳಸಿ ಕಲ್ಲನ್ನು ತುಂಡರಿಸಲಾಗುತ್ತದೆ.
ಸೋಂಕು ಕಂಡು ಬಂದಾಗ ಮೂತ್ರನಾಳದ ಮೂಲಕ ಕೊಳವೆಯನ್ನು ತೂರಿಸಿ, ನಾಳದಂತಹ ( ಸ್ಟೆಂಟ್) ವಸ್ತುವನ್ನು ಕೆಲಕಾಲ ಅಲ್ಲಿರಿಸಿ, ಸೋಂಕು ಕಡಿಮೆಯಾದ ಮೇಲೆ ಅದನ್ನು ತೆಗೆಯುತ್ತಾರೆ. ಇದು ಸೋಂಕು ಹರಡದಂತೆ ನೆರವಾಗುತ್ತದೆ.

ಪರ್ ಕ್ಯುಟೇನಿಯಸ್ ನೆಫ್ರೋಲಿತೋಟೊಮಿ: ಮೂತ್ರಪಿಂಡದ ಮುಂಭಾಗದಲ್ಲಿ ಅಥವಾ ಮೂತ್ರನಾಳದ ಮೇಲಿನ ಭಾಗದಲ್ಲಿ ಕಲ್ಲುಗಳಿದ್ದಾಗ ಈ ವಿಧಾನ ಸೂಕ್ತ. ಈ ವಿಧಾನದಲ್ಲಿ ಹೊಟ್ಟೆಯ ಭಾಗದಿಂದ ಕಲ್ಲನ್ನು ಸಮೀಪಿಸುತ್ತಾರೆ.

ಎಕ್ಸ್ ಕಾರ್ಪೊರಿಯಲ್ ಶಾಕ್ ವೇವ್ ಲಿಥೊಟ್ಸಿಪ್ಸಿ ಮತ್ತು ಪರಿಣಾಮಕಾರಿ ಶಸ್ತ್ರಚಿಕಿತ್ಸೆಯಾದ ಪೆರ್ಕ್ಯುಟೇನಿಯಸ್ ನೆಪ್ರೊಲಿಥೊಟೊಮಿ ಚಿಕಿತ್ಸೆಯ ಮೂಲಕ ಮೂತ್ರಪಿಂಡದ ಕಲ್ಲನ್ನು ತೆಗೆದುಹಾಕಬಹುದು.

ಇಲ್ಲಿ ದ್ರವಾಂಶ ಸೇವನೆಯನ್ನು ಕಡಿಮೆ ಮಾಡಲು ಮತ್ತು ಸರಿಯಾದ ರೀತಿಯಲ್ಲಿ ಮೂತ್ರಪಿಂಡ ಕಾರ್ಯವನ್ನು ನಿರ್ವಹಿಸಲು ಸೋಡಿಯಂ ಮತ್ತು ಪ್ರೋಟಿನ್ ಸೇವನೆಯನ್ನು ಸೀಮಿತಗೊಳಿಸವುದುನ್ನು ಶಿಫಾರಸು ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com