ಅವಧಿಗೂ ಮುನ್ನ ಹೆರಿಗೆ: ಬೆಂಗಳೂರಿನ ವೈದ್ಯರಿಂದ ಅತೀ ಕಡಿಮೆ ತೂಕದ ಶಿಶು ರಕ್ಷಣೆ

ಸಾಮಾನ್ಯವಾಗಿ ಗರ್ಭಿಣಿಯರು ಮಗು ಆರೋಗ್ಯವಾಗಿರಬೇಕು ಮತ್ತು ಹೆರಿಗೆ ಸುರಕ್ಷಿತವಾಗಿ ಆಗಬೇಕು ಎಂಬ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ನಿಗಾವಹಿಸಿರುತ್ತಾರೆ. ಆದಾಗ್ಯೂ ಕೆಲವೊಮ್ಮೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಾಮಾನ್ಯವಾಗಿ ಗರ್ಭಿಣಿಯರು ಮಗು ಆರೋಗ್ಯವಾಗಿರಬೇಕು ಮತ್ತು ಹೆರಿಗೆ ಸುರಕ್ಷಿತವಾಗಿ ಆಗಬೇಕು ಎಂಬ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಅವರು ತಮ್ಮ ಆರೋಗ್ಯದ ಬಗೆಗೆ ಹೆಚ್ಚಿನ ನಿಗಾವಹಿಸಿರುತ್ತಾರೆ. ಆದಾಗ್ಯೂ ಕೆಲವೊಮ್ಮೆ ಅನಿರೀಕ್ಷಿತಗಳು ಘಟಿಸುತ್ತವೆ. ಅಂತಹ ಒಂದು ಅಪರೂಪದ ಪ್ರಕರಣವನ್ನು ನಿಭಾಯಿಸುವಲ್ಲಿ ಬೆಂಗಳೂರಿನ ಕಿಂಡರ್‌ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಅಚ್ಚರಿ ಎಂಬಂತೆ ಕೇವಲ 28 ವಾರಗಳಲ್ಲಿ ಜನಿಸಿದ 750 ಗ್ರಾಂ ತೂಕದ ಶಿಶುವನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ ಕಿಂಡರ್‌ ಆಸ್ಪತ್ರೆಯ ವೈದ್ಯರು. ತಾಯಿಯ ಗರ್ಭದಲ್ಲಿ ಅವಳಿ ಶಿಶುಗಳಿದ್ದವು. ಎರಡನೇ ಶಿಶು ಕೂಡ ಒಂದೇ ಪ್ಲಸೆಂಟಾವನ್ನು(Placenta) ಹಂಚಿಕೊಂಡಿತ್ತು. ಇದರಿಂದಾಗಿ ಅವಳಿಗಳ ನಡುವೆ  ರಕ್ತದ ಹಂಚಿಕೆ ಅಸಹಜವಾಗಿತ್ತು. ಅದರ ಪರಿಣಾಮ ಒಂದು ಶಿಶು ರಕ್ತಹೀನತೆ, ಕಡಿಮೆ ರಕ್ತದ ಪ್ರಮಾಣ ಮತ್ತು ಕಡಿಮೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ. ಅದೇ ರೀತಿಯಾಗಿ ಮತ್ತೊಂದು ಶಿಶುವು ಕೆಂಪು ರಕ್ತ ಕಣಗಳು ಮತ್ತು ಹೆಚ್ಚಿನ ರಕ್ತದ ಪ್ರಮಾಣ ಹಾಗೂ ಒತ್ತಡದಿಂದ ಬಳಲುವ ಸಾಧ್ಯತೆಗಳಿದ್ದು, ಎರಡೂ ಸಂದರ್ಭಗಳು ಮಾರಣಾಂತಿಕ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಇದೊಂದು ಸವಾಲಾಗಿ ಪರಿಣಮಿಸಿತ್ತು. 

ಕಿಂಡರ್‌ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ಸುಶಾಂತ್‌ ಶಿವಸ್ವಾಮಿ ಮತ್ತು ಅವರ ತಂಡದ ಕೌಶಲ್ಯ ಮತ್ತು ಬದ್ಧತೆಯಿಂದ ಈ ಕಠಿಣ ಸಂದರ್ಭವನ್ನು ಯಶಸ್ವಿಯಾಗಿ  ನಿಭಾಯಿಸಲಾಯಿತು.  ಪ್ರತಿ ಶಿಶುವು 750 ಗ್ರಾಂ ತೂಕ ಹೊಂದಿದ್ದು, ಕೇವಲ 28 ವಾರಕ್ಕೆ ಜನಿಸಿದ್ದ ಕಾರಣ ಕೂಡಲೇ ನವಜಾತ ಶಿಶು ತೀವ್ರ ಘಟಕಕ್ಕೆ ದಾಖಲು ಮಾಡಲಾಯಿತು.

ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾದ ಕಾರಣ ಮೊದಲ ಶಿಶುವನ್ನು ಉಳಿಸಿಕೊಳ್ಳಲಾಗಲಿಲ್ಲ. ಹಾಗೆಯೇ ಎರಡನೇ ಶಿಶುವು ಕೂಡ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿತ್ತು. ಆ ಶಿಶುವಿನ ಜೀವ ರಕ್ಷಣೆ ಕೂಡ ಸವಾಲಿನ ಕೆಲಸವಾಗಿತ್ತು. ಆದರೆ ನಿರಂತರ ಉಸಿರಾಟದ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಮತ್ತು ಹೃದಯದ ಸಕ್ರಿಯ ಕಾರ್ಯಾಚರಣೆಯು ಜೀವ ರಕ್ಷಣೆಗೆ ಅಗತ್ಯವಾಗಿತ್ತು. ಈ ವೇಳೆ ವೈದ್ಯರು  ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡಿದರು.

ಈ ಕುರಿತು ವಿವರಿಸಿರುವ ಡಾ.ಸುಶಾಂತ್‌,  "ಅವಳಿಗಳಲ್ಲಿ ಎರಡನೇ ಶಿಶುವಿಗೆ ಸರಿಯಾದ ಮೇಲ್ವಿಚಾರಣೆ, ಹೃದಯದ ನಿಖರ ಕಾರ್ಯಾಚರಣೆ ಮತ್ತು ಅವಶ್ಯಕ ಪೋಷಕಾಂಶಗಳನ್ನು ನೀಡುವ ಅಗತ್ಯವಿತ್ತು. ಈ ನಿಟ್ಟಿನಲ್ಲಿ ನಮ್ಮ ವೈದ್ಯರ ತಂಡದ ನೆರವಿನೊಂದಿಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಚಿಕಿತ್ಸೆ ನೀಡಿದೆವು ಎಂದು ಹೇಳಿದರು.

ಅವಧಿಗೂ ಮುನ್ನ ಜನಿಸಿದ ಶಿಶುವಿನ ಚೇತರಿಕೆಗೆ ಕಿಂಡರ್‌ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯ ಮತ್ತು ತಜ್ಞರ ಶ್ರಮ ಪ್ರಮುಖ ಪಾತ್ರವಹಿಸಿತು. ಎರಡು ತಿಂಗಳ ತೀವ್ರ ಚಿಕಿತ್ಸೆಯ ನಂತರ ಶಿಶುವು 1.98 ಕೆ.ಜಿ ತೂಕ ಹೊಂದಿತ್ತು. ಬಳಿಕ ಶಿಶುವಿನ ಮೆದುಳು ಮತ್ತು ಕಣ್ಣಿನ ಪರೀಕ್ಷೆಗಳನ್ನು ನಡೆಸಿ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಲಾಗಿದೆ. 

ವೈದ್ಯಕೀಯ ಕ್ಷೇತ್ರದಲ್ಲಿ  ಎದುರಾಗುವ ಸವಾಲುಗಳನ್ನು ಎದುರಿಸಲು ಬೇಕಾದ ವಿಶೇಷ ಆರೈಕೆ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳ ಒಳಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಈ ಘಟನೆಯು ಒತ್ತಿ ಹೇಳುತ್ತಿದೆ. ಈ ಮೂಲಕ ಆರೋಗ್ಯ ಸಮಸ್ಯೆ ಹೊಂದಿರುವ ಶಿಶುಗಳ ಆರೋಗ್ಯಕ್ಕೆ ಭರವಸೆ  ನೀಡಿದಂತಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com