

ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲು ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಕೂದಲಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿರುತ್ತದೆ. ನಿಮ್ಮ ಕೂದಲಿಗೆ ಒಳ್ಳೆಯ ರೀತಿಯಲ್ಲಿ ಪೋಷಣೆ ನೀಡುವುದು ಅತ್ಯಂತ ಅಗತ್ಯವಾಗಿದೆ.
ಕೂದಲಿನ ಪೋಷಣೆಗೆ ಆಹಾರದ ಜೊತೆಗೆ ಕೆಲ ಅಭ್ಯಾಸಗಳೂ ಕೂಡ ಮುಖ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಹೋಗಿದೆ. ಎಲ್ಲಾ ವಯಸ್ಸಿನವರು ಕೂಡ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ತಮ್ಮ ಕೂದಲನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಾಮಾನ್ಯವಾಗಿ ಮಹಿಳೆಯರು ಉದ್ದನೆಯ ಕೂದಲನ್ನು ಹೊಂದಿರುವುದರಿಂದ ಅವರು ಹೆಚ್ಚಾಗಿ ಕೂದಲಿನ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಕೆಲವು ಮಹಿಳೆಯರು ಸ್ನಾನ ಮಾಡಿದ ನಂತರ ತಮ್ಮ ಕೂದಲನ್ನು ಟವೆಲ್ನಿಂದ ಕಟ್ಟಿಕೊಳ್ಳುವುದು, ಒದ್ದೆ ಕೂದಲಿನಲ್ಲೇ ಮಲಗುವುದನ್ನು ನಾವು ಗಮನಿಸುತ್ತೇವೆ. ಹೀಗೆ ಮಾಡುವುದರಿಂದ ಕೂದಲು ಬೇಗನೆ ಒಣಗುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ, ಒದ್ದೆಯಾದ ಕೂದಲನ್ನು ಟವೆಲ್ನಿಂದ ಸುತ್ತುವುದು, ಒದ್ದೆ ಕೂದಲಿನಲ್ಲಿ ಮಲಗುವುದರಿಂದ ಪ್ರಯೋಜನಕ್ಕಿಂತ ಸಾಕಷ್ಟು ಅನಾನುಕೂಲಗಳು ಎದುರಾಗಲಿದೆ.
ರಾತ್ರಿ ಹೊತ್ತು ತಲೆಕೂದಲಿಗೆ ಸ್ನಾನ ಮಾಡಿ, ಕೂದಲನ್ನು ಒಣಗಿಸದೇ ಹಾಗೆಯೇ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯೇ? ಇಂತಹ ಅಭ್ಯಾಸ ಈ ಕೂಡಲೇ ಬಿಟ್ಟು ಬಿಡಿ. ಏಕೆಂದರೆ ಇದು ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಒದ್ದೆ ಕೂದಲಿನಲ್ಲಿ ಮಲಗುವುದು ಕೂದಲಿನ ಆರೈಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ದುರ್ಬಲತೆ ಮತ್ತು ತುಂಡಾಗುವಿಕೆ
ಒದ್ದೆಯಾದ ಕೂದಲು ಒಣ ಕೂದಲಿಗಿಂತ ಹೆಚ್ಚು ದುರ್ಬಲವಾಗಿರುತ್ತದೆ. ಅದಕ್ಕಾಗಿಯೇ ಒಣಗುವ ಮೊದಲು ನೀವು ಎಂದಿಗೂ ಕೂದಲನ್ನು ಬಾಚಬಾರದು. ನೀವು ಒದ್ದೆ ಕೂದಲಿನೊಂದಿಗೆ ಮಲಗಲು ಹೋದರೆ ರಾತ್ರಿಯಿಡಿ ಕೂದಲು ಸಾಕಷ್ಟು ಚಲಿಸಿದರೆ ಕೂದಲು ಹೆಚ್ಚು ಸುಲಭವಾಗಿ ಒಡೆಯುತ್ತದೆ. ಆದ್ದರಿಂದ ಆದಷ್ಟು ರಾತ್ರಿ ಹೊತ್ತು ತಲೆಗೆ ಸ್ನಾನ ಮಾಡಿ ಒದ್ದೆ ಕೂದಲಿನಲ್ಲಿ ಮಲಗುವ ಅಭ್ಯಾಸವನ್ನು ಬಿಟ್ಟು ಬಿಡಿ. ಆದಾಗಿಯೂ ನೀವೂ ಮಲಗುವ ಹೊತ್ತಿನಲ್ಲಿ ಕೂದಲು ಒದ್ದೆ ಇದ್ದರೆ ಕೂದಲನ್ನು ಬನ್ ಅಥವಾ ಪೋನಿ ಟೈಲ್‌ನಲ್ಲಿ ಹಾಕಿ ಮಲಗಿ. ಇದರಿಂದಾಗಿ ನಿಮ್ಮ ಕೂದಲು ಒಡೆಯುವುದನ್ನು ತಡೆಗಟ್ಟಬಹುದು.
split ends (ಕೂದಲಿನ ತುದಿ ಸೀಳುವುದು)
ಕೂದಲು ಒದ್ದೆಯಾಗಿದ್ದಾಗ ಹೆಚ್ಚು ಹಿಗ್ಗುವ (elastic) ಗುಣವನ್ನು ಹೊಂದಿರುತ್ತದೆ. ಈ ವೇಳೆ ಕೂದಲನ್ನು ಬಾಚಿದಾಗ ಅಥವಾ ಎಳೆದಾಗ ಅದು ತನ್ನ ಮೂಲ ಆಕಾರಕ್ಕೆ ಮರಳುವುದಿಲ್ಲ, ಬದಲಿಗೆ ಹೊರಪದರವು ಹಾನಿಗೊಳಗಾಗಿ ಕೂದಲಿನ ತುದಿ ಒಡೆಯುತ್ತದೆ.
ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕು
ತೇವಾಂಶವುಳ್ಳ ನೆತ್ತಿ ಮತ್ತು ದಿಂಬುಕವಚವು ಶಿಲೀಂಧ್ರಗಳು (ಫಂಗಸ್) ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ವಾತಾವರಣವನ್ನು ಸೃಷ್ಟಿಸುತ್ತದೆ.
ತಲೆಹೊಟ್ಟು
ಮಲಾಸೆಜಿಯಾ ಎಂಬ ಶಿಲೀಂಧ್ರದ ಬೆಳವಣಿಗೆಯು ತಲೆಹೊಟ್ಟು ಅಥವಾ ಸೆಬೊರ್ಹೆಕ್ ಸಮಸ್ಯೆಗಳಿಗೆ ಕಾರಣವಾಗುತ್ತೆ.
ಒದ್ದೆ ಕೂದಲಿನೊಂದಿಗೆ ಮಲಗಲೇಬೇಕಾದರೆ, ಹಾನಿಯನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ಅನುಸರಿಸಿ...
ಕೂದಲನ್ನು ಭಾಗಶಃ ಒಣಗಿಸಿ
ಸಂಪೂರ್ಣವಾಗಿ ಒದ್ದೆಯಾದ ಕೂದಲಿನೊಂದಿಗೆ ಮಲಗಬೇಡಿ. ಮಲಗುವ ಮುನ್ನ ಟವೆಲ್ ಬಳಸಿ ಅಥವಾ ಹೇರ್ ಡ್ರೈಯರ್‌ನ ತಂಪಾದ ಸೆಟ್ಟಿಂಗ್‌ನಲ್ಲಿ ಕೂದಲನ್ನು ಕನಿಷ್ಠ ಶೇ.70ರಷ್ಟು ಭಾಗ ಒಣಗಿಸಿ.
ಮೈಕ್ರೋಫೈಬರ್ ಟವೆಲ್ ಬಳಸಿ
ಹತ್ತಿ ಟವೆಲ್‌ಗಳ ಬದಲಿಗೆ ಮೈಕ್ರೋಫೈಬರ್ ಟವೆಲ್ ಬಳಸಿ. ನಿಧಾನವಾಗಿ ನೀರನ್ನು ಹೀರಿಕೊಳ್ಳುವಂತೆ ಮಾಡಿ. ಇದರಿಂದ ಕೂದಲು ಡ್ಯಾಮೇಜ್ ಆಗುವುದನ್ನು ನಿಯಂತ್ರಿಸುತ್ತದೆ.
ಸಿಲ್ಕ್ ಅಥವಾ ಸ್ಯಾಟಿನ್ ದಿಂಬುಕವಚ
ಹತ್ತಿ ದಿಂಬುಗಳು ಕೂದಲಿಗೆ ಹೆಚ್ಚು ಸಮಸ್ಯೆಯನ್ನು ಮಾಡುತ್ತದೆ. ಹೀಗಾಗಿ ಸಿಲ್ಕ್ ಅಥವಾ ಸ್ಯಾಟಿನ್ ದಿಂಬು ಕವಚಗಳನ್ನು ಬಳಸುವುದು ಉತ್ತಮ. ಇದು ಕೂದಲು ಸಿಕ್ಕುಬೀಳುವುದನ್ನು ಕಡಿಮೆ ಮಾಡುತ್ತದೆ.
ಸಡಿಲವಾದ ಕೇಶವಿನ್ಯಾಸ
ಬಿಗಿಯಾದ ಬನ್ ಅಥವಾ ಪೋನಿಟೇಲ್ ಹಾಕುವುದನ್ನು ತಪ್ಪಿಸಿ. ಬದಲಿಗೆ, ಸಡಿಲವಾದ ಹೆಣಿಗೆ (braid) ಅಥವಾ ಸಡಿಲವಾದ ಬನ್ ಮಾಡಿ. ಇದು ಕೂದಲಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಕಂಡಿಷನರ್ ಅಥವಾ ಹೇರ್ ಆಯಿಲ್ ಬಳಸಿ
ಕೂದಲಿನ ಉದ್ದಕ್ಕೂ ಕಂಡಿಷನರ್ ಅಥವಾ ಸ್ವಲ್ಪ ತೆಂಗಿನೆಣ್ಣೆಯನ್ನು ಹಚ್ಚುವುದರಿಂದ ತೇವಾಂಶ ಕಾಪಾಡಿಕೊಳ್ಳಬಹುದು ಮತ್ತು ಹಾನಿಯನ್ನು ತಡೆಯಬಹುದು.
Advertisement