Bird Flu: ಮಾಂಸ, ಮೊಟ್ಟೆ ಚೆನ್ನಾಗಿ ಬೇಯಿಸಿ ತಿಂದರೆ ಸೋಂಕು ತಗುಲುವುದಿಲ್ಲ, ಜ್ವರದ ಲಕ್ಷಣ-ಮುಂಜಾಗ್ರತೆ ಬಗ್ಗೆ ಇಲ್ಲಿದೆ ಮಾಹಿತಿ...

ಹಕ್ಕಿಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಮುನ್ನೆಚ್ಚರಿಕೆ ವಹಿಸಿದರೆ ಸೋಂಕನ್ನು ತಡೆಯಬಹುದಾಗಿದೆ. ಹೀಗಾಗಿ ಕಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನೆರೆಯ ಆಂಧ್ರಪ್ರದೇಶ. ಮಹಾರಾಷ್ಟ್ರ ಮತ್ತು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರ (H5N1) ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕೋಳಿ ಮಾಂಸ ಹಾಗೂ ಮೊಟ್ಟೆಯ ಸೇವನೆಯ ಬಗ್ಗೆ ಆತಂಕ ಶುರುವಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಸ್ಥಿತಿ ಅವಲೋಕನ ನಡೆಸಿದರು. ಈ ವೇಳೆ ಹಕ್ಕಿ ಜ್ವರ ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಪಕ್ಷಿಗಳು ಅಥವಾ ಕೋಳಿಗಳ ಯಾವುದೇ ಅನುಮಾನಾಸ್ಪದ, ಅಸಹಜ ಅಥವಾ ಹಠಾತ್ ಸಾವು ಕಂಡುಬಂದರೆ, ಹತ್ತಿರದ ಪಶುವೈದ್ಯಕೀಯ ಇಲಾಖೆಗೆ ತಿಳಿಸಿ ಎಂದು ತಿಳಿಸಿದರು.

ಹಕ್ಕಿ ಜ್ವರ ಪತ್ತೆಯಾದ ಸ್ಥಳದಿಂದ 10 ಕಿ.ಮೀ ವ್ಯಾಪ್ತಿಯ ಸುತ್ತಲಿನ ನಿವಾಸಿಗಳು ಶೀತ, ಕೆಮ್ಮು, ಜ್ವರ, ತಲೆನೋವು, ಮೈ-ಕೈ ನೋವು, ಗಂಟಲು ನೋವು ಮತ್ತು ಇತರ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ, ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಹಕ್ಕಿ ಜ್ವರದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಆರೋಗ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಂಗ್ರಹ ಚಿತ್ರ
ಬಳ್ಳಾರಿಯಲ್ಲಿ ಹಕ್ಕಿ ಜ್ವರ ಭೀತಿ: ಒಂದೇ ಫಾರಂನಲ್ಲಿ 10,000 ಕೋಳಿಗಳ ಸಾವು

ಏನಿದು ಹಕ್ಕಿ ಜ್ವರ?

ಹಕ್ಕಿಜ್ವರ ಸಾಂಕ್ರಾಮಿಕ ರೋಗವಾಗಿದ್ದು, ಮುನ್ನೆಚ್ಚರಿಕೆ ವಹಿಸಿದರೆ ಸೋಂಕನ್ನು ತಡೆಯಬಹುದಾಗಿದೆ. ಹೀಗಾಗಿ ಕಾಯಿಲೆಯ ಲಕ್ಷಣಗಳು ಕೋಳಿಗಳಲ್ಲಿ ಕಾಣಿಸಿಕೊಂಡ ಕೂಡಲೇ ಹತ್ತಿರದ ಮಾಹಿತಿ ಕೇಂದ್ರ ಅಥವಾ ಪಶು ವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸೂಚಿಸಿದೆ.

ಹಕ್ಕಿಜ್ವರದ ಲಕ್ಷಣಗಳೇನು?

ಹಕ್ಕಿಜ್ವರದ ಲಕ್ಷಣಗಳು ಸಾಮಾನ್ಯವಾಗಿ ಎಚ್1ಎನ್1 ಜ್ವರದ ಲಕ್ಷಣಗಳಂತೆಯೇ ಇರುತ್ತದೆ. ಜ್ವರ, ಕೆಮ್ಮು, ಶೀತ, ತಲೆನೋವು, ಗಂಟಲು ಕೆರೆತ, ನೆಗಡಿ, ಸ್ನಾಯುಗಳಲ್ಲಿ ನೋವು, ಆಯಾಸ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ವಾಂತಿ ಮತ್ತು ಭೇದಿಯೂ ಆಗಬಹುದು. ಉಸಿರಾಟದಲ್ಲಿ ತೊಂದರೆಯೂ ಉಂಟಾಗಬಹುದು.

ಮುನ್ನೆಚ್ಚರಿಕಾ ಕ್ರಮಗಳೇನು?

  • ಹಕ್ಕಿಜ್ವರ ಪೀಡಿತ ಕೋಳಿಗಳು, ಪಕ್ಷಿಗಳು ಹಾಗೂ ಬಾತುಕೋಳಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು.

  • ಹಕ್ಕಿಜ್ವರ ಪೀಡಿತ ಫಾರಂಗಳಿಗೆ ಭೇಟಿ ನೀಡಬಾರದು.

  • ಹಕ್ಕಿಜ್ವರ ಹರಡಿರುವ ಫಾರಂನ ಸಂಪರ್ಕಕ್ಕೆ ಬಂದಲ್ಲಿ ತಕ್ಷಣ ಕೈಕಾಲು, ಮುಖ ತೊಳೆದುಕೊಂಡು ಬಟ್ಟೆ ಬದಲಾಯಿಸಿಕೊಳ್ಳಬೇಕು. ಕನಿಷ್ಠ 15 ಸೆಕೆಂಡುಗಳ ಕಾಲವಾದರೂ ಸೋಪ್ ಮತ್ತು ನೀರಿನಿಂದ ಕೈಗಳನ್ನು ತೊಳೆಯಿರಿ,

  • ಒಂದು ವೇಳೆ ಜ್ವರದ ಲಕ್ಷಣ ಕಾಣಿಸಿದಲ್ಲಿ ತಕ್ಷಣ ವೈದ್ಯರನ್ನು ಕಾಣಬೇಕು.

  • ಸೋಂಕಿತ ಸ್ಥಳದಲ್ಲಿ ಯಾವುದೇ ವಸ್ತು ಮುಟ್ಟಿದರೂ ಕೈಯನ್ನು ಸ್ವಚ್ಛಗೊಳಿಸಬೇಕು.

  • ಹಕ್ಕಿಜ್ವರ ಪ್ರಕರಣಗಳು ವರದಿಯಾಗಿರುವ ಪ್ರದೇಶದ 3ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶಗಳಲ್ಲಿ ಜ್ವರ, ಶೀತ ನೆಗಡಿಯ ರೋಗ ಲಕ್ಷಣ ಇರುವ ಬಗ್ಗೆ ವಾರಕ್ಕೊಮ್ಮೆ ಸಮೀಕ್ಷೆ ಮಾಡಬೇಕು ಮತ್ತು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

  • ಕೋಳಿ ಫಾರಂಗಳಿಂದ ಕೋಳಿಗಳನ್ನು ಸಾಗಣೆ ಮಾಡುವ ವಾಹನಗಳನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಬೇಕು.

  • ನಿಮ್ಮ ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸಿ.

  • ಕೋಳಿ ಮತ್ತು ಜಾನುವಾರುಗಳಿರುವ ಸ್ಥಳದಲ್ಲಿ ಕೆಲಸ ಮಾಡುವಾಗ ಕೈಗವಸುಗಳು, ಮುಖವಾಡ ಮತ್ತು ಕನ್ನಡಕಗಳನ್ನು ಧರಿಸಿ,

  • ಆರೋಗ್ಯ ದುರ್ಬಲವಾಗಿರುವ ವ್ಯಕ್ತಿಗಳಿಗೆ ಲಸಿಕೆಗಳನ್ನು ಹಾಕಿಸಿ.

ಸಂಗ್ರಹ ಚಿತ್ರ
ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ: ರೋಗ ಪೀಡಿತ ಪ್ರದೇಶದಿಂದ 1 ಕಿ.ಮೀ ವ್ಯಾಪ್ತಿಯ ಕೋಳಿಗಳ ಹತ್ಯೆಗೆ ಆದೇಶ

ಸೋಂಕು ದೃಢಪಟ್ಟರೆ ಏನು ಮಾಡಬೇಕು?

  • ಹಕ್ಕಿಜ್ವರ ದೃಢಪಟ್ಟರೆ ಕೇಂದ್ರ ಸರಕಾರದ ನಿಯಮ ಪ್ರಕಾರ ರೋಗ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಬೇಕು.

  • ತಾಲೂಕು ಮಟ್ಟದಲ್ಲಿ ಪಶು ವೈದ್ಯಾಧಿಕಾರಿ ಅಥವಾ ಪಶು ವೈದ್ಯಕೀಯ ಪರೀಕ್ಷಕರನ್ನು ಒಳಗೊಂಡ ಕ್ಷಿಪ್ರ ಕಾರ್ಯಾಚರಣೆ ಪಡೆ ರಚನೆ ಮಾಡಬೇಕು.

  • ಜಿಲ್ಲೆಯಲ್ಲಿರುವ ಕೋಳಿ ಫಾರಂಗಳ ಸಂಖ್ಯೆ, ಮಾಲೀಕರ ವಿಳಾಸ, ಕೋಳಿಗಳ ಸಂಖ್ಯೆ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ.

  • ಮಾಂಸಾಹಾರ ತಿಂದರೆ ಹಕ್ಕಿಜ್ವರ ಬರುತ್ತದೆಯೇ?

  • ರಾಜ್ಯದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬಳಿಕ ಹಲವರಲ್ಲಿ ಕೋಳಿ ಮಾಂಸ, ಮೊಟ್ಟೆ ಸೇವನೆ ಬಗ್ಗೆ ಗೊಂದಲ, ಆತಂಕ ಶುರುವಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

  • ಕೋಳಿ ಮಾಂಸವನ್ನಾಗಲಿ ಇಲ್ಲವೇ ಮೊಟ್ಟೆಯನ್ನು ತಿನ್ನುವುದರಿಂದ ಜನರಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳಲ್ಲ. ಹೀಗಾಗಿ ಈ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಇದೇ ಸಂದರ್ಭದಲ್ಲಿ ಮಾಂಸ ಸೇವನೆಯ ಬಗ್ಗೆ ಕೆಲವೊಂದು ಮುನ್ಸೂಚನೆಗಳನ್ನೂ ನೀಡಿದೆ.

ಯಾವ ರೀತಿ ಸೇವನೆ ಉತ್ತಮ?

  • ಹಕ್ಕಿಜ್ವರ ಸೋಂಕು ತಗುಲಿದ ಕೋಳಿಯ ಮಾಂಸವನ್ನು ಚೆನ್ನಾಗಿ ಬೇಯಿಸದೆ ಇಲ್ಲವೇ ಅದರ ಹಸಿ ಮೊಟ್ಟೆಯನ್ನು ತಿನ್ನುವುದರಿಂದ ರೋಗ ಬರುವ ಸಾಧ್ಯತೆ ಇರುತ್ತದೆ.

  • ನಾನ್‌ವೆಬ್‌ ಬಳಸುವವರು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಚಿಕನ್‌ ಅನ್ನು ಚೆನ್ನಾಗಿ ತೊಳೆದು ಬಳಸಬೇಕು.

  • ಕೋಳಿ ಮಾಂಸ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಬೇಕು. 70 ಡಿ.ಸೆಂಗೂ ಹೆಚ್ಚು ಉಷ್ಣಾಂಶದಲ್ಲಿ ಬೇಯಿಸಬೇಕು.

  • ಸೋಂಕಿತ ಕೋಳಿಯ ಹಸಿ ಮೊಟ್ಟೆಯನ್ನು ತಿನ್ನಬಾರದು. ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನುವುದರಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

  • ತೆರೆದ ಮಾರುಕಟ್ಟೆ ಅಥವಾ ಹೊರಗಡೆ ಚಿಕನ್‌ ಸೇವಿಸುವಾಗ ಎಚ್ಚರಿಕೆ ವಹಿಸಿ. ಚೆನ್ನಾಗಿ ಬೇಯಿಸಿದ ನಾನ್‌ವೆಜ್‌ ಮಾತ್ರ ಸೇವನೆ ಮಾಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com