

Health Tips: ಮನೆಯಿಂದ ಹೊರ ಹೋಗಬೇಕು ಅಂದ್ರೆ ಸ್ಲೀಪರ್ ಇಲ್ಲ ಶೂ ಬೇಕೇಬೇಕು, ಅಷ್ಟೇ ಯಾಕೆ ಮನೆಯ ಒಳಗು ಓಡಾಡ ಬೇಕು ಅಂದ್ರು ಸ್ಲೀಪರ್ ಇರಬೇಕು; ಆದ್ರೆ, ನಿಮಗೆ ಗೊತ್ತಾ, ದಿನಕ್ಕೆ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ದೇಹ ಮತ್ತು ಮನಸ್ಸಿಗೆ ನಂಬಲಾಗದ ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಆ ಕುರಿತ ವರದಿ ಇಲ್ಲಿದೆ:
ನಮ್ಮ ಪಾದಗಳಲ್ಲಿ ಸಾವಿರಾರು ನರಗಳ ತುದಿಗಳಿರುತ್ತವೆ. ನಾವು ಬರಿಗಾಲಿನಲ್ಲಿ ನೆಲ, ಹಸಿರು ಹುಲ್ಲು ಅಥವಾ ಮಣ್ಣಿನ ಮೇಲೆ ನಡೆದಾಗ ಆ ನರಗಳು ಜಾಗೃತಗೊಂಡು ಇಡೀ ದೇಹದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ. ಹಾಗಾಗಿಯೇ, ಭೂಮಿಯೊಂದಿಗೆ ನೇರ ಸಂಪರ್ಕ ಹೊಂದುವ ಈ ಪ್ರಕ್ರಿಯೆಯನ್ನು 'ಅರ್ಥಿಂಗ್' ಅಥವಾ 'ಗ್ರೌಂಡಿಂಗ್' ಎಂದು ಕರೆಯಲಾಗುತ್ತದೆ. ಅದರಲ್ಲೂ, ಹೀಗೆ ಪ್ರತಿದಿನ ಕೇವಲ 15 ನಿಮಿಷ ಬರಿಗಾಲಿನಲ್ಲಿ ನಡೆಯುವುದರಿಂದ ಹೃದಯದ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಸಿಗುತ್ತವೆ ಎಂದು ಪ್ರಸಿದ್ಧ ಹೃದಯರೋಗ ತಜ್ಞರು ತಿಳಿಸಿದ್ದಾರೆ.
ಹಾಗಾದ್ರೆ, ಬರಿಗಾಲಿನ ನಡಿಗೆಯಿಂದ ಹೃದಯಕ್ಕೆ ಸಿಗುವ ಪ್ರಮುಖ ಪ್ರಯೋಜನಗಳೇನು?
ರಕ್ತ ಪರಿಚಲನೆ ಸುಧಾರಣೆ: ಬರಿಗಾಲಿನಲ್ಲಿ ನಡೆದಾಗ ಪಾದಗಳಲ್ಲಿರುವ ಸಹಸ್ರಾರು ನರಗಳು ಉತ್ತೇಜನಗೊಳ್ಳುತ್ತವೆ. ಇದು ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯಲು ಸಹಾಯ ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟುವಿಕೆ: ಭೂಮಿಯ ಸಂಪರ್ಕದಿಂದ ಕೆಂಪು ರಕ್ತಕಣಗಳ ವಿದ್ಯುತ್ ಚಾರ್ಜ್ ಸಮತೋಲನಕ್ಕೆ ಬರುತ್ತದೆ. ಇದರಿಂದ ರಕ್ತವು ಗಟ್ಟಿಯಾಗುವುದು ತಪ್ಪುತ್ತದೆ ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.
ಹೃದಯ ಬಡಿತದ ಸಮತೋಲನ: ಇದು ಹೃದಯದ ಎಲೆಕ್ಟ್ರಿಕಲ್ ವ್ಯವಸ್ಥೆಯನ್ನು ಸರಿಪಡಿಸಿ, ಹೃದಯ ಬಡಿತದ ಏರುಪೇರನ್ನು ನಿಯಂತ್ರಣದಲ್ಲಿಡುತ್ತದೆ.
ಒತ್ತಡ ಮತ್ತು ರಕ್ತದೊತ್ತಡ ನಿಯಂತ್ರಣ: ಹಸಿರು ಹುಲ್ಲು ಅಥವಾ ನೆಲದ ಮೇಲೆ ಬರಿಗಾಲಿನಲ್ಲಿ ನಡೆದಾಗ ದೇಹದಲ್ಲಿ 'ಕಾರ್ಟಿಸೋಲ್' ಎಂಬ ಒತ್ತಡದ ಹಾರ್ಮೋನ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಮನಸ್ಸು ಶಾಂತವಾಗಿ, ರಕ್ತದೊತ್ತಡ ಹದ್ದುಬಸ್ತಿನಲ್ಲಿರುತ್ತದೆ.
ದೇಹದ ಉರಿಯೂತ ಇಳಿಕೆ: ಭೂಮಿಯಿಂದ ಹೀರಿಕೊಳ್ಳುವ ನೈಸರ್ಗಿಕ ಎಲೆಕ್ಟ್ರಾನ್‌ಗಳು ದೇಹದಲ್ಲಿರುವ ಫ್ರೀ ರಾಡಿಕಲ್ಸ್‌ಗಳನ್ನು ನಾಶಪಡಿಸಿ, ಹೃದಯಕ್ಕೆ ಹಾನಿ ಮಾಡುವ ಉರಿಯೂತವನ್ನು ಕಡಿಮೆ ಮಾಡುತ್ತವೆ.
ಈ ಬಗ್ಗೆ ತಜ್ಞರು ಹೇಳೋದು ಏನು?
ಹೃದಯರೋಗ ತಜ್ಞರಾದ ಡಾ. ಅಲೋಕ್ ಚೋಪ್ರಾ ಅವರ ಪ್ರಕಾರ, ನಮ್ಮ ಪಾದಗಳು ಭೂಮಿಯನ್ನು ಸ್ಪರ್ಶಿಸಿದಾಗ ದೇಹದಲ್ಲಿರುವ ಹೆಚ್ಚುವರಿ ವಿದ್ಯುತ್ ಆವೇಶಗಳು ಭೂಮಿಗೆ ಬಿಡುಗಡೆಯಾಗುತ್ತವೆ. ಈ ಪ್ರಕ್ರಿಯೆಯು ದೇಹದ ಜೀವಕೋಶಗಳ ನೈಸರ್ಗಿಕ ವಿದ್ಯುತ್ ಸಮತೋಲನವನ್ನು ಮರುಸ್ಥಾಪಿಸುತ್ತದೆ. ಜೀವಕೋಶಗಳು ಮರುಧ್ರುವೀಕರಣಗೊಂಡಾಗ ಕೆಂಪು ರಕ್ತಕಣಗಳು ಮುಕ್ತವಾಗಿ ಚಲಿಸಲು ಸಾಧ್ಯವಾಗಿ, ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಹಾಗಾಗಿ, ಬರಿಗಾಲಿನಲ್ಲಿ ನಡೆಯುವಾಗ ಈ ಅಂಶ ನೆನಪಿಡಿ:
ಸುರಕ್ಷಿತ ಜಾಗ ಆಯ್ಕೆ ಮಾಡಿ: ಗಾಜು, ಚೂಪಾದ ಕಲ್ಲುಗಳು ಅಥವಾ ಮಲಿನ ಕಸ ಇಲ್ಲದ ಸ್ವಚ್ಛವಾದ ಹಸಿರು ಹುಲ್ಲುಹಾಸು, ಮರಳು ಅಥವಾ ಮಣ್ಣಿನ ರಸ್ತೆಗಳನ್ನು ಆಯ್ದುಕೊಳ್ಳಿ. ಸಿಮೆಂಟ್ ಅಥವಾ ಟೈಲ್ಸ್ ರಸ್ತೆಗಳಿಗಿಂತ ನೈಸರ್ಗಿಕ ನೆಲವೇ ಹೆಚ್ಚು ಸೂಕ್ತ.
ನಿಧಾನವಾಗಿ ಆರಂಭಿಸಿ: ಮೊದಲ ದಿನವೇ ತುಂಬಾ ದೂರ ನಡೆಯಬೇಡಿ. ಆರಂಭದಲ್ಲಿ ದಿನಕ್ಕೆ 5 ರಿಂದ 10 ನಿಮಿಷ ನಡೆದು, ನಂತರ ಅದನ್ನು 15-20 ನಿಮಿಷಕ್ಕೆ ಹೆಚ್ಚಿಸಿ.
ಇವರೆಲ್ಲಾ ಬರಿಗಾಲಿನಲ್ಲಿ ನಡೆಯೋದು ಬೇಡವೇ ಬೇಡ!
ಯಾರು ಮಧುಮೇಹ ಹೊಂದಿದ್ದರೆ, ಪಾದದಲ್ಲಿ ಗಾಯಗಳಿದ್ದರೆ ಅಥವಾ ನರಗಳ ತೀವ್ರ ಸಮಸ್ಯೆ ಇದ್ದರೆ ಬರಿಗಾಲಿನಲ್ಲಿ ನಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.