
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ನಿಜಕ್ಕೂ ನಮ್ಮಲ್ಲಿ ಭಯ ಹುಟ್ಟಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಅಲೆಯಲ್ಲಿ ಆಮ್ ಆದ್ಮಿ ಪಕ್ಷ ಈ ಮಟ್ಟದ ಜಯಭೇರಿ ಬಾರಿಸಿದೆ. ಈ ಮಟ್ಟದ ದಿಗ್ವಿಜಯವನ್ನು ನಾವು ಎಂದು ಊಹಿಸಿರಲಿಲ್ಲ. ಆದರೆ ಆ ಫಲಿತಾಂಶ ನಮ್ಮಲ್ಲಿ ಹೆಚ್ಚಿನ ಸ್ಫೂರ್ತಿಯನ್ನು ತಂದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಪಕ್ಷ ಸಂಘಟನೆಗೆ ಮುಂದಾಗುತ್ತೇವೆ ಎಂದು ಆಪ್ ಮುಖಂಡ ರವಿ ಕೃಷ್ಣಾ ರೆಡ್ಡಿ ಅವರು ಹೇಳಿದ್ದಾರೆ.
ಕನ್ನಡಪ್ರಭ.ಕಾಮ್ ಜೊತೆಗಿನ ಸಂದರ್ಶನದಲ್ಲಿ ರವಿ ಕೃಷ್ಣಾ ರೆಡ್ಡಿ ಅವರು ಮುಂದಿನ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ದೆಹಲಿಯಲ್ಲಿ ಆಪ್ ಹವಾ ಇದ್ದಂತೆ, ಬೆಂಗಳೂರಲ್ಲೂ ಇದೆಯೇ?
ದೆಹಲಿಯಲ್ಲಿ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಅರವಿಂದ್ ಕೇಜ್ರಿವಾಲ್. ಅದಾಗಲೇ ಅವರು ಸಾಕಷ್ಟು ಹೋರಾಟಗಳನ್ನು ಮಾಡಿ ಮನೆ ಮಾತಾಗಿದ್ದರು. ಇದೇ ವೇಳೆ ಹಿರಿಯ ಹೋರಾಟಗಾರ ಅಣ್ಣಾ ಹಜಾರೆಯವರು ಭ್ರಷ್ಟಚಾರ ವಿರೋಧಿ ಪ್ರತಿಭಟನೆಯನ್ನು ಕೈಗೊಂಡಿದ್ದರು. ಅಣ್ಣಾ ಹಜಾರೆಯವರ ಹೋರಾಟಕ್ಕೆ ಕೇಜ್ರಿವಾಲ್ ಸೇರಿದಂತೆ ಇನ್ನಿತರ ಪ್ರಮುಖರು ಸೇರಿ ದೇಶದಲ್ಲಿ ದೊಡ್ಡ ಹೋರಾಟವನ್ನು ಮಾಡಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ದರು. ನಂತರ ಆಮ್ ಆದ್ಮಿ ಪಕ್ಷವನ್ನು ಹುಟ್ಟು ಹಾಕಿದ ಕೇಜ್ರಿವಾಲ್ ಈ ಮೂಲಕ ದೆಹಲಿ ವಿಧಾನಸಭೆಗೆ ಸ್ಫರ್ಧಿಸಿ ದಿಗ್ವಜಯ ಸಾಧಿಸಿದ್ದು, ಇದೀಗ ಇತಿಹಾಸ. ಅದೇ ರೀತಿ ಬೆಂಗಳೂರಿನಲ್ಲೂ ಆಪ್ ಪಕ್ಷಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಮನ್ನಣೆ ದೊರೆಯಿತು. ಆದರೆ ಇಲ್ಲಿ ಹೇಳಿಕೊಳ್ಳುವಂತ ಪ್ರತಿಭಾವಿ ನಾಯಕರು ಇಲ್ಲದೇ ಇರುವುದು ಸದ್ಯದ ಮಟ್ಟಿಗೆ ದೊಡ್ಡ ಸವಾಲು. ಆದರೆ ಬೆಂಗಳೂರಿನಲ್ಲಿ ಸಾಕಷ್ಟು ಜನರು ಆಪ್ ಗೆ ಬೆಂಬಲ ನೀಡುತ್ತಿದ್ದಾರೆ. ಸದ್ಯದ ಮಟ್ಟಿಗೆ ಐಟಿ-ಬಿಟಿ ಉದ್ಯೋಗಿಗಳು ಆಪ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.
ಆಪ್ ಸಂಘಟನೆ ಕಾರ್ಯಕ್ರಮಗಳು ಕೇವಲ ವೀಕೆಂಡ್ ಗೆ ಮಾತ್ರ ಸೀಮಿತವೇ?
ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಆಪ್ ಸಂಘಟನೆ ಆಮೆ ಗತಿಯಲ್ಲಿ ನಡೆಯುತ್ತಿದೆ. ಪೂರ್ವಭಾವಿ ಸಿದ್ಥತೆಗಳು ಆಗಿಲ್ಲ. ನಮ್ಮಲ್ಲಿ ಪ್ರಜ್ಞಾವಂತರು ಹೆಚ್ಚಾಗಿ ಸಂಘಟನೆಗೆ ಮುಂದಾಗಿದ್ದು, ಐಟಿ-ಬಿಟಿ ಉದ್ಯೋಗಿಗಳು ಆಪ್ ಸಂಘಟನೆಯಲ್ಲಿ ಸಕ್ರಿಯರಾಗುತ್ತಿದ್ದಾರೆ. ತಮ್ಮ ಜೀವನ ಸುಧಾರಣೆಯೊಂದಿಗೆ ಅವರು ತಮ್ಮ ಅಮೂಲ್ಯವಾದ ಸಮಯವನ್ನು ಪಕ್ಷದ ಸಂಘನೆಗೆ ವಿನಿಯೋಗಿಸುತ್ತಿದ್ದಾರೆ. ಐಟಿ ಬಿಟಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಭಾನುವಾರ ರಜೆ ಇದೆ. ಹೀಗಾಗಿ ಅವರು ವಿಕೇಂಡ್ ಪಾರ್ಟಿ, ಮೋಜು ಮಸ್ತಿ ಎಂದು ಹೋಗದೆ ಪಕ್ಷದ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಬಿಬಿಎಂಪಿ ಚುನಾವಣೆ ಮುಂದೂಡುಲು ಯತ್ನಿಸುತ್ತಿರುವ ಸರ್ಕಾರದ ವಿರುದ್ಧ ನಿಮ್ಮ ಹೋರಾಟ?
ಅಂದಿನ ಬಿಜೆಪಿ ಹಾಗೂ ಇಂದಿನ ಕಾಂಗ್ರೆಸ್ ವಿಭಜನೆ ಹೆಸರಲ್ಲಿ ಸರ್ಕಾರ ಬಿಬಿಎಂಪಿ ಚುನಾವಣೆಗಳನ್ನು ಮುಂದೂಡುತ್ತಾ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿವೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ನಡೆಸುವಂತೆ ಆದೇಶಿಸುತ್ತಿದ್ದರು. ಇದಕ್ಕೆ ಮನ್ನಣೆ ಕೊಡದ ರಾಜಕೀಯ ಪಕ್ಷಗಳು ತಮ್ಮ ಹಿತಾಸಕ್ತಿಗಾಗಿ ಹುನ್ನಾರ ಮಾಡುತ್ತಿವೆ. ಇದರಲ್ಲಿ ಎರಡು ಪಕ್ಷಗಳು ಶಾಸಕರು ಶಾಮೀಲಾಗಿದ್ದಾರೆ. ವಿಭಜನೆ ವಿರೋಧಿಸಿ ಬಿಜೆಪಿ ಕಾನೂನು ಹೋರಾಟ ಮಾಡುವುದಾಗಿ ಹೇಳುತ್ತಿದೆ. ಆದರೆ ಈ ಹೋರಾಟ ಪ್ರಾಮಾಣಿಕವಾಗಿರುವುದಿಲ್ಲ. ಅವರು ತಮ್ಮ ಸ್ವಹಿತಾಸಕ್ತಿಗಾಗಿ ಈ ರೀತಿಯ ಸುಳ್ಳು ಹೋರಾಟಗಳನ್ನು ಮಾಡುತ್ತಾರೆ. ಇದರ ವಿರುದ್ಧ ಆಪ್ ಬೀದಿಗಳಿದು, ಬಿಬಿಎಂಪಿ ಮುಂದೆ ಧರಣಿ ನಡೆಸಿ, ರಾಜಕೀಯ ಪಕ್ಷಗಳ ಉದ್ದೇಶದ ಹಿಂದಿನ ಹುನ್ನಾರ ಏನು ಎಂಬುದನ್ನು ನಾವು ಜನರಿಗೆ ತೋರಿಸುತ್ತೇವೆ.
ಬಿಬಿಎಂಪಿ ಚುನಾವಣೆಗೆ ಆಪ್ ಸ್ಪರ್ಧಿಸುತ್ತಾ?
ಈ ಚುನಾವಣೆಯಲ್ಲಿ ಆಪ್ ಸ್ಪರ್ಧಿಸಬೇಕೋ ಬೇಡವೋ ಎಂಬ ತೀರ್ಮಾನವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಏನು ಹೇಳಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಬಿಬಿಎಂಪಿ ಚುನಾವಣೆ ಸ್ಫರ್ಧಿಸುವ ಉದ್ದೇಶದೊಂದಿಗೆ ಆಪ್ ಪಕ್ಷ ಬೊಂಬಾಟ್ ಬೆಂಗಳೂರು ಎಂಬ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದೆ. ಈ ಪ್ರಣಾಳಿಕೆಯಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಬಿಬಿಎಂಪಿ ಚುನಾವಣೆಯಲ್ಲಿ ಯಾವುದೇ ಪಕ್ಷ ಗೆದ್ದರು ಅದು ಇದೇ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಕಾರ್ಯಗತಗೊಳಿಸುವಂತಾ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತೇವೆ. ಈ ಪ್ರಣಾಳಿಕೆಯನ್ನು ನಾವೇ ಅಸ್ಥಿತ್ವಕ್ಕೆ ತರಬೇಕೆಂದಿಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ ಆ ಪಕ್ಷ ಈ ಯೋಜನೆಗನ್ನು ಕಾರ್ಯರೂಪಕ್ಕೆ ತಂದರೆ ಅದನ್ನು ಆಪ್ ಸ್ವಾಗತಿಸುತ್ತೇದೆ.
ಬಿಬಿಎಂಪಿ ಚುನಾವಣೆಯಿಂದ ಹಿಂದೆ ಸರಿಯುತ್ತೀರಾ?
ಒಂದು ಪಕ್ಷ ಯಾವುದೇ ಪೂರ್ವಭಾವಿ ಸಿದ್ಧತೆಗಳಿಲ್ಲದೆ ಚುನಾವಣೆ ಎದುರಿಸುವುದು ಕಷ್ಟಸಾಧ್ಯ. ನಮ್ಮಲ್ಲಿ ಇನ್ನು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಆಗಿಲ್ಲ. ಯಾವುದೋ ಒಂದು ಅಲೆಯಲ್ಲಿ ನಾವು ಸ್ಥಳೀಯ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರ ಅಲೆಯನ್ನು ಇಟ್ಟುಕೊಂಡು ನಾವು ಬೆಂಗಳೂರಿನಲ್ಲಿ ಚುನಾವಣೆ ಎದುರಿಸಿದರೆ ಅದು ಕೇಜ್ರಿವಾಲ್ ರ ಅಲೆಯನ್ನು ನಾವು ದುರ್ಬಳಕೆ ಮಾಡಿಕೊಂಡಂತೆ. ಚುನಾವಣೆಯನ್ನು ಗೆದ್ರೆ ಅಲೆಯಲ್ಲಿ ಗೆಲ್ಲಬೇಕು. ಆ ಮಟ್ಟದ ಅಲೆಯನ್ನು ನಾವು ಬೆಂಗಳೂರಿನಲ್ಲಿ ಸೃಷ್ಠಿಸಬೇಕು. ನಾವು ಮೊದಲು ಆಪ್ ಬಗ್ಗೆ ಜನರಲ್ಲಿ ಪೂರ್ಣ ವಿಶ್ವಾಸ ಬರುವಂತೆ ಮಾಡಬೇಕು. ಬಿಬಿಎಂಪಿ ಚುನಾವಣೆಯನ್ನು ಮುಂದಿಟ್ಟುಕೊಂಡು ಹೇಳುವುದಾದರೆ, ಆಪ್ ಕಡೆಯಿಂದ ಪ್ರಾಮಾಣಿಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾಗಾದ ಅವಶ್ಯಕತೆ ಬಹು ಮುಖ್ಯ.
ಬೊಂಬಾಟ್ ಬೆಂಗಳೂರು ಪ್ರಣಾಳಿಕೆಯ ಉದ್ದೇಶ?
ನಮ್ಮ ಪಕ್ಷ ಬೊಂಬಾಟ್ ಬೆಂಗಳೂರು ಮೂಲಕ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಸ್ಥಳೀಯವಾಗಿ ಇರುವ ಸಮಸ್ಯೆಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಪ್ರಣಾಳಿಕೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
ಪಕ್ಷ ಸಂಘಟನೆಗಾಗಿ ನಿಮ್ಮ ಮುಂದಿನ ಯೋಜನೆಗಳು?
ಕಾಂಗ್ರೆಸ್ ಹಾಗೂ ಬಿಜೆಪಿಯಂತೆ ಆಮ್ ಆದ್ಮಿಗೆ ಇತಿಹಾಸ ಇಲ್ಲ. ಈ ಪಕ್ಷಗಳು ಹಲವು ದಶಕಗಳಿಂದ ತಮ್ಮ ಕಬಂಧ ಬಾಹುವನ್ನು ಈಗಾಗಲೇ ವಿಸ್ತರಿಸಿವೆ. ಆದರೆ ಆಪ್ ಸಾಮಾಜಿಕ ಹೋರಾಟಗಳ ಮೂಲಕ ಇದೀಗ ಗುರುತಿಸಿಕೊಳ್ಳುತ್ತಿದೆ. ರಾಷ್ಟ್ರೀಯ ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಾ. ಜನರಲ್ಲಿ ಅರಿವು ಮೂಡಿಸುತ್ತಿದೆ. ಆಪ್ ನಲ್ಲಿ ಪ್ರಜ್ಞಾವಂತ ಯುವಕ ಯುವತಿಯರನ್ನು ಬಿಟ್ಟರೆ. ನಮ್ಮಲ್ಲಿ ಸ್ಥಳೀಯ ಯುವ ಜನತೆಯ ಸಾಥ್ ಇನ್ನೂ ಸಿಕ್ಕಿಲ್ಲ. ಇವರೆಲ್ಲ ಈಗಾಗಲೇ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರಾಗಿದ್ದು, ಆಪ್ ಮುಂದಿನ ದಿನಗಳಲ್ಲಿ ಪ್ರಾಮಾಣಿಕತೆ ಮೂಲಕ ಸಕ್ರಿಯ ರಾಜಕಾರಣ ಮಾಡುವವರನ್ನು ಆಪ್ ನತ್ತ ಸೆಳೆಯುತ್ತೇವೆ. ದೆಹಲಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಸಭೆ ಸಮಾರಂಭಗಳನ್ನು ಆಯೋಜಿಸುವ ಮೂಲಕ ಜನರನ್ನು ತಲುಪ್ಪಿದ್ದೇವು. ಅದೇ ರೀತಿ ಬೆಂಗಳೂರಿನಲ್ಲೂ 800 ಸಭೆಗಳನ್ನು ಮಾಡಬೇಕೆಂಬ ಉದ್ದೇಶವನ್ನು ಪಕ್ಷ ಇಟ್ಟುಕೊಂಡಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಕೇಜ್ರಿವಾಲ್ರನ್ನು ಕರೆಸಲಾಗುವುದು. ಸದ್ಯದ ಮಟ್ಟಿಗೆ ಕೇಜ್ರಿವಾಲ್ರ ಗಮನವೆಲ್ಲ ರಾಷ್ಟ್ರ ರಾಜಧಾನಿ ದೆಹಲಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ಆಗಿದೆ.
ಚುನಾವಣೆ ಎದುರಿಸಲು ಬೇಕಾದ ಫಂಡನ್ನು ಹೇಗೆ ಸಂಗ್ರಹಿಸುತ್ತೀರಾ?
ಸ್ಥಳೀಯ ಅಥವಾ ಯಾವುದೇ ಚುನಾವಣೆಯನ್ನು ಎದುರಿಸಬೇಕಾದರೂ ಅಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಬೇಕಾಗುತ್ತದೆ. ಕನಿಷ್ಠ 20 ಲಕ್ಷ ರುಪಾಯಿ ಇದಕ್ಕಾಗಿ ವ್ಯಯಿಸಬೇಕು. ಆದರೆ ಆ ಮಟ್ಟದ ಹಣವನ್ನು ಖರ್ಚು ಮಾಡಲು ನಮ್ಮಿಂದ ಸಾಧ್ಯವಿಲ್ಲ. ಇತರ ಪಕ್ಷದ ಅಭ್ಯರ್ಥಿಗಳು ಏನಿಲ್ಲವೆಂದರೂ 5 ಕೋಟಿ ರುಪಾಯಿ ಖರ್ಚು ಮಾಡಲು ಸಿದ್ಧರಿರುತ್ತಾರೆ. ನಾವು ಪ್ರಾಮಾಣಿಕತೆ ಮೂಲಕ ಜನರ ಮುಂದೆ ಹೋಗುತ್ತೇವೆ. ನಾವು ಯಾವುದೇ ಉದ್ಯಮಿಗಳಿಂದ ಫಂಡ್ ಪಡೆಯುವುದಿಲ್ಲ. ದೇಣಿಗೆ ಮೂಲಕ ಹಣ ಸಂಗ್ರಹಿಸುತ್ತೇವೆ. ಅರವಿಂದ್ ಕೇಜ್ರಿವಾಲ್ ಅವರು ಈ ಹಿಂದೆ ಬೆಂಗಳೂರಿನಲ್ಲಿ ಸೆಲ್ಫಿ ವಿದ್ ಮಫ್ಲರ್ ಮಾನ್, ಲಂಚ್ ವಿದ್ ಕೇಜ್ರಿ ಎಂಬ ವಿನೂತನ ಕಾರ್ಯಕ್ರಮ ಮೂಲಕ ದೇಣಿಗೆ ಸಂಗ್ರಹಿಸಿದ್ದರು. ಅದೇ ರೀತಿ ನಾನು ಮುಂದಿನ ದಿನಗಳಲ್ಲಿ ಮಾಡುತ್ತೇವೆ.
ಸಂದರ್ಶನ: ವಿಶ್ವನಾಥ್. ಎಸ್
Advertisement