ನೆಲಕಚ್ಚಿದ ಜಗದೀಶ್ ಶೆಟ್ಟರ್ ಪ್ರತಿಷ್ಠೆ; ಲಿಂಗಾಯತ ಹೃದಯಭಾಗದಲ್ಲಿಯೇ ಭಾರಿ ಅಂತರದಿಂದ ಸೋಲು

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಬಲ ಲಿಂಗಾಯತ ನಾಯಕ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸುಮಾರು 34,053 ಮತಗಳ ಅಂತರದಿಂದ ಮೊದಲ ಬಾರಿಗೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋತಿದ್ದಾರೆ. 
ಜಗದೀಶ್ ಶೆಟ್ಟರ್(ಸಂಗ್ರಹ ಚಿತ್ರ)
ಜಗದೀಶ್ ಶೆಟ್ಟರ್(ಸಂಗ್ರಹ ಚಿತ್ರ)

ಹುಬ್ಬಳ್ಳಿ: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಬಲ ಲಿಂಗಾಯತ ನಾಯಕ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸುಮಾರು 34,053 ಮತಗಳ ಅಂತರದಿಂದ ಮೊದಲ ಬಾರಿಗೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋತಿದ್ದಾರೆ. ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ನಂತರ ಶೆಟ್ಟರ್ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ಈ ಕ್ಷೇತ್ರ ಅವರಿಗೆ ಪ್ರತಿಷ್ಠೆಯ ಕಣವಾಗಿತ್ತು.

ಶೆಟ್ಟರ್ ಕ್ಷೇತ್ರದಿಂದ ಸತತ ಏಳನೇ ಬಾರಿಗೆ ಗೆಲುವಿನ ಗುರಿ ಹೊಂದಿದ್ದರು. ಆದರೆ, ಮತದಾರರು ಬಿಜೆಪಿಯ ಬೆನ್ನಿಗೆ ಗಟ್ಟಿಯಾಗಿ ನಿಂತರು, ಕ್ಷೇತ್ರದ ಇತಿಹಾಸದಲ್ಲಿ ದಾಖಲೆಯ ಗರಿಷ್ಠ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರು.

1994 ರಿಂದ ಗೆದ್ದು ಬರುತ್ತಿದ್ದ ಶೆಟ್ಟರ್ ಅವರ ಸ್ವಂತ ನೆಲದಲ್ಲಿನ ಸೋಲು ಅವರಿಗೆ ಭಾರಿ ಹಿನ್ನಡೆಯಾಗಿದೆ. ಪಕ್ಷ ಬದಲಾಯಿಸುವ ಅವರ ಆಲೋಚನೆ ಮತದಾರರಿಗೆ ಖಂಡಿತವಾಗಿಯೂ ಹಿಡಿಸಿಲ್ಲ.

ಕೆಲವು ಆರಂಭಿಕ ಚುನಾವಣೆಗಳನ್ನು ಹೊರತುಪಡಿಸಿ ಕ್ಷೇತ್ರವು ಹೆಚ್ಚಾಗಿ ಬಿಜೆಪಿಯ ಭದ್ರಕೋಟೆಯಾಗಿದೆ. ಒಟ್ಟು 15 ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಉಳಿದ 10 ಸ್ಥಾನಗಳನ್ನು ಜೆಡಿಎಸ್ (ಮೂರು) ಮತ್ತು ಬಿಜೆಪಿ (ಏಳು) ಹಂಚಿಕೊಂಡಿವೆ. ಈ ಕ್ಷೇತ್ರವು 1990 ರ ದಶಕದ ಆರಂಭದಲ್ಲಿ ಈದ್ಗಾ ಮೈದಾನದ ಚಳುವಳಿಯನ್ನು ಕೈಗೆತ್ತಿಕೊಂಡ ನಂತರ ಮತ್ತು 1994 ರಲ್ಲಿ ಮೊದಲ ಬಾರಿಗೆ ಗೆದ್ದ ನಂತರ ಕೇಸರಿ ಪಕ್ಷದ ಭದ್ರಕೋಟೆಯಾಯಿತು.

ಇದನ್ನು ಅರಿಯದ ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಕಾರಣ ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು, ತಾವೇ ಕಟ್ಟಿದ ಪಕ್ಷದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಅಂತಿಮವಾಗಿ ಶೆಟ್ಟರ್ ಅವರ 60,355 ವಿರುದ್ಧ ಟೆಂಗಿನಕಾಯಿ 90,408 ಮತಗಳನ್ನು ಪಡೆದರು.

ಅಲ್ಲದೆ, ಕ್ಷೇತ್ರದಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಗೆ ಚಲಾವಣೆಯಾದ ಅತಿ ಹೆಚ್ಚು ಮತ ಇದಾಗಿದೆ. 2018 ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ 25,000ಕ್ಕೂ ಹೆಚ್ಚು ಮತಗಳನ್ನು ಪಡೆದರೆ, ಕಾಂಗ್ರೆಸ್ ಕೇವಲ 5,000 ಹೆಚ್ಚಿನ ಮತದಾರರನ್ನು ಪಡೆದುಕೊಂಡಿದೆ. ಶೆಟ್ಟರ್ ಸೋಲಿಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಷ್ಟೇ ನಿಷ್ಕ್ರೀಯ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತ ಪ್ರಚಾರ ನಡೆಸಿರುವುದು ಶೆಟ್ಟರ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಆದರೆ, ಇದಕ್ಕೆ ಬಿಜೆಪಿಯ ಹಣ ಬಲವೇ ಕಾರಣ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಟೆಂಗಿನಕಾಯಿ ಅವರು, ಕ್ಷೇತ್ರದ ಮತದಾರರು ತಾವು ಸದಾ ಬಿಜೆಪಿ ಜೊತೆಗಿದ್ದೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಪಕ್ಷದ ನಾಯಕರ ಟೀಂ ವರ್ಕ್ ಮತ್ತು ಪಕ್ಷದ ಕಾರ್ಯಕರ್ತರ ಶ್ರಮವೇ ತಮ್ಮ ಗೆಲುವಿಗೆ ಕಾರಣ ಎಂದರು.

ತಮ್ಮ ಹಿಂದಿನ ಗುರುಗಳ (ಶೆಟ್ಟರ್) ಆಶೀರ್ವಾದವೇ ತಮ್ಮ ಗೆಲುವಿಗೆ ಕಾರಣ ಎಂದೂ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com