ಕಿಂಗ್ ಮೇಕರ್ ಆಗಿ ರಾಜ್ಯದ ಗದ್ದುಗೆ ಏರುವ ಕನಸು ಕಂಡಿದ್ದ ಜೆಡಿಎಸ್‌ಗೆ ವಿಧಾನಸೌಧದಿಂದಲೇ ಗೇಟ್ ಪಾಸ್?
ವಿಧಾನಸಭೆ ಚುನಾವಣೆಯಲ್ಲಿ ಶೇ 10ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ ಜೆಡಿಎಸ್‌ಗೆ ವಿಧಾನಸೌಧದಲ್ಲಿ ಕಚೇರಿ ಲಭ್ಯವಾಗುವುದು ಕಷ್ಟ ಎನ್ನಲಾಗುತ್ತಿದೆ. ವಿಧಾನಸಭೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಅಧಿಕೃತ ಪಕ್ಷದ ಮಾನ್ಯತೆ ಸಿಗುವ ಸಾಧ್ಯತೆ ಇಲ್ಲ.
Published: 14th May 2023 08:03 AM | Last Updated: 14th May 2023 08:53 AM | A+A A-

ಜೆಡಿಎಸ್
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶನಿವಾರ ತೆರೆಬಿದ್ದಿದ್ದು, ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 66 ಸ್ಥಾನಗಳೊಂದಿಗೆ ಬಿಜೆಪಿ ಎರಡನೇ ಸ್ಥಾನಕ್ಕೆ ಇಳಿದಿದ್ದು, ಜೆಡಿಎಸ್ ಕೇವಲ 19 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಎರಡು ದಶಕದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಕೇವಲ 19 ಸ್ಥಾನಗಳಲ್ಲಿ ಮಾತ್ರ ಪಕ್ಷ ಜಯಗಳಿಸಿದೆ.ಈಗಿನ ಫಲಿತಾಂಶವನ್ನು ಗಮನಿಸಿದರೆ ಜೆಡಿಎಸ್ ಅನುಭವಿಸಿದ ದೊಡ್ಡ ಹಿನ್ನಡೆ ಇದಾಗಿದೆ. 2004ರಲ್ಲಿ 54 ಕ್ಷೇತ್ರದಲ್ಲಿ ಗೆಲುವು ಕಂಡಿದ್ದ ಜೆಡಿಎಸ್, 2008 ರಲ್ಲಿ 28, 2013ರಲ್ಲಿ 40 ಮತ್ತು 2018ರಲ್ಲಿ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಶೇ 10ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿದ ಜೆಡಿಎಸ್‌ಗೆ ವಿಧಾನಸೌಧದಲ್ಲಿ ಕಚೇರಿ ಲಭ್ಯವಾಗುವುದು ಕಷ್ಟ ಎನ್ನಲಾಗುತ್ತಿದೆ. ವಿಧಾನಸಭೆಯಲ್ಲಿ ಈ ಬಾರಿ ಜೆಡಿಎಸ್‌ಗೆ ಅಧಿಕೃತ ಪಕ್ಷದ ಮಾನ್ಯತೆ ಸಿಗುವ ಸಾಧ್ಯತೆ ಇಲ್ಲ.
224 ಕ್ಷೇತ್ರಗಳಲ್ಲಿ ಕನಿಷ್ಠ 22 ಸ್ಥಾನಗಳನ್ನು ಗೆದ್ದಿದ್ದರೆ, ಈ ಮಾನ್ಯತೆ ಸಿಗುತ್ತಿತ್ತು. ಆದರೆ, ಜೆಡಿಎಸ್ ವಿಫಲವಾಗಿದೆ. ಒಟ್ಟು ಸ್ಥಾನಗಳಲ್ಲಿ ಹತ್ತನೇ ಒಂದರಷ್ಟು ಸ್ಥಾನಗಳನ್ನು ಜೆಡಿಎಸ್ ಗೆಲ್ಲಬೇಕಿತ್ತು.
ಹೀಗಾಗಿ, ನಿಯಮದ ಪ್ರಕಾರ ಅಧಿಕೃತ ಪಕ್ಷದ ಸ್ಥಾನ ಸಿಗುವುದಿಲ್ಲ. ಆದರೆ, ಜೆಡಿಎಸ್ ರಾಜ್ಯದ ಅತ್ಯಂತ ಹಳೆಯ ಪಕ್ಷವಾಗಿರುವುದು ಮಾತ್ರವಲ್ಲದೇ, ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌ಡಿ ದೇವೇಗೌಡರು ಪ್ರಧಾನಿ ಆಗಿದ್ದವರು. ಆದ್ದರಿಂದ, ಮುಂದಿನ ವಿಧಾನ ಸಭಾಧ್ಯಕ್ಷರು ಸೌಜನ್ಯದಿಂದ ಅಧಿಕೃತ ಪಕ್ಷದ ಮಾನ್ಯತೆ ಮತ್ತು ಕೊಠಡಿಯನ್ನು ನೀ ಡಬಹುದಾಗಿದೆ’ ಎಂದು ವಿಧಾನಸಭಾ ಸಚಿವಾಲಯದಮೂಲಗಳು ಹೇಳಿವೆ.
ಶೇ 10ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಪಕ್ಷಕ್ಕೆ ವಿಧಾನಸೌಧದಲ್ಲಿ ಕಚೇರಿ ನೀಡುವುದಿಲ್ಲ ಎಂಬ ನಿಯಮ ಇತ್ತು. ಆದರೆ, ಈ ನಿಯಮಕ್ಕೆ ತಿದ್ದುಪಡಿ ಮಾಡಿ ಈ ನಿರ್ಧಾರವನ್ನು ಸಭಾಧ್ಯಕ್ಷರ ವಿವೇಚನಕ್ಕೆ ಬಿಡಲಾಗಿದೆ. ಈ ಹಿಂದೆ ಜೆಡಿಎಸ್ ಇಷ್ಟೊಂದು ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿರಲಿಲ್ಲ. ಇದೀಗ ಕಡಿಮೆ ಸ್ಥಾನ ಪಡೆದುಕೊಂಡಿದ್ದು, ಈಗ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.