ಬೆಂಗಳೂರು: ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನೂಕಾಟ ತಳ್ಳಾಟದ ನಡುವೇ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 2016-17ನೇ ಸಾಲಿನ ಬಜೆಟ್ ಗೆ ಕೌನ್ಸಿಲ್ ಸಭೆಯಲ್ಲಿ ಅಂಗೀಕಾರವಾಗಿದೆ.
ಮಂಗಳವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಬಿಬಿಎಂಪಿ ಬಜೆಟ್ ಗೆ ಒಪ್ಪಿಗೆ ದೊರೆಯಿತು. ಬಜೆಟ್ ಗಾತ್ರವನ್ನು ರು.8,996.43 ಕೋಟಿಯಿಂದ ರು.9,360.93 ಕೋಟಿಗೆ ಹೆಚ್ಚಿಸಿ ಅನುಮೋದನೆ ನೀಡಲಾಯಿತು.
ಇನ್ನು ಕೌನ್ಸಿಲ್ ಸಭೆಯಲ್ಲಿ ಬಜೆಟ್ ಅಂಗೀಕಾರದ ಮುದ್ರೆಯೊತ್ತಲು ಆಡಳಿತ ಪಕ್ಷದ ಸದಸ್ಯರು ಮುಂದಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ನಿರ್ಣಯದ ಮೇಲೆ ಮತ ವಿಭಜನೆ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಇದಕ್ಕೆ ಮೇಯರ್ ಬಿಎನ್ ಮಂಜುನಾಥ್ ಅವಕಾಶ ನೀಡಲಿಲ್ಲ.
ಆಗ ಬಿಜೆಪಿ ಸದಸ್ಯರು ಮೇಯರ್ ಪೀಠದ ಮುಂದೆ ಧರಣಿ ನಡೆಸಿದರು. ಧರಣಿ ನಡೆಸುತ್ತಿದ್ದ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನೂಕಾಟ ತಳ್ಳಾಟವಾಗಿ ಕೋಲಾಹಲದ ವಾತಾವರಣ ಮೂಡಿತ್ತು.