ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೇವಲ 5 ಗಂಟೆಗಳ ರೈಲು ಪ್ರಯಾಣ?

ಇನ್ನು ಮೂರು ವರ್ಷಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವ ಅವಧಿ ಕಡಿಮೆಯಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇನ್ನು ಕೆಲವೇ ವರ್ಷಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡುವ ಅವಧಿ ಕಡಿಮೆಯಾಗಲಿದೆ. ಹೌದು 2019 ಕ್ಕೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲು ತೆಗೆದುಕೊಳ್ಳುವ ಅವಧಿ ಕೇವಲ 5 ಗಂಟೆಗಳಾಗಿರಲಿದೆ.
ಪ್ರಸ್ತುತ ಬೆಂಗಳೂರು- ಹುಬ್ಬಳ್ಳಿ ಮಾರ್ಗದ ಜನ ಶತಾಬ್ಧಿ ಅತ್ಯಂತ ವೇಗವಾಗಿ ಚಲಿಸುವ ರೈಲು, ನಗರದಿಂದ ಹುಬ್ಬಳ್ಳಿಗೆ ತಲುಪಲು ತೆಗೆದುಕೊಳ್ಳುವ ಅವಧಿ 7 ಗಂಟೆ 25 ನಿಮಿಷಗಳು. ಎಲ್ಲವೂ ರೈಲ್ವೆ ಇಲಾಖೆಯ ಯೋಜನೆ ಪ್ರಕಾರವೇ ನಡೆದರೆ ಉತ್ತರ ಕರ್ನಾಟಕದ ಎಲ್ಲಾ ರೈಲು ಮಾರ್ಗಗಳು ಜೋಡಿ ಹಳಿ ಮಾರ್ಗವಾಗಿ ಮಾರ್ಪಾಡಾಗಲಿದ್ದು ರಾಜ್ಯದ ಪ್ರಮುಖ ನಗರಗಳು ಹಾಗೂ ನೆರೆ ರಾಜ್ಯಗಳ ಪ್ರಮುಖ ನಗರಗಳನ್ನು ತಲುಪಲು ತೆಗೆದುಕೊಳ್ಳುವ ಅವಧಿ ಅರ್ಧದಷ್ಟು ಕಡಿಮೆಯಾಗಲಿದೆ. ಜೋಡಿ ಹಳಿ ಮಾರ್ಗ ಯೋಜನೆಗೆ ಅನುದಾನದ ಕೊರತೆ ಎದುರಾಗಬಹುದಾದರೂ ಈ ಯೋಜನೆಗೆ ಭೂಮಿ ಮಂಜೂರು ಪ್ರಕ್ರಿಯೆ ಪ್ರಮುಖ ಪಾತ್ರ ವಹಿಸಲಿದೆ.
ರೈಲು ಸಂಪರ್ಕದ ವಿಚಾರದಲ್ಲಿ ಕರ್ನಾಟಕದ ಉತ್ತರ ಭಾಗದ ಸ್ಥಿತಿ ಹದಗೆಟ್ಟಿದ್ದು, ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ಕಳಪೆ ದಾಖಲೆ ಹೊಂದಿದೆ. ಉತ್ತರ ಕರ್ನಾಟಕದಲ್ಲಿ ರೈಲು ಸಂಪರ್ಕವನ್ನು ಉತ್ತಮಗೊಳಿಸಲು ರಾಜ್ಯದಿಂದ ನಿರಂತರ ಮನವಿ ಸಲ್ಲಿಸಲಾಗಿತ್ತಾದರೂ ಈ ವರೆಗೂ ರೈಲು ಇಲಾಖೆ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಆದರೆ ಈಗ ಉತ್ತರ ಕರ್ನಾಟಕದ ರೈಲು ಸಂಪರ್ಕಗಳನ್ನು ಉತ್ತಮಗೊಳಿಸಲು ಕೇಂದ್ರ ಸರ್ಕಾರ ಈಗಿರುವ ಎಲ್ಲಾ ಹಳಿ ಮಾರ್ಗಗಳನ್ನು ಜೋಡಿ ಹಳಿ ಮಾರ್ಗಗಳನ್ನಾಗಿ ಪರಿವರ್ತಿಸುವುದು, ಅರ್ಧಕ್ಕೇ ಸ್ಥಗಿತಗೊಂಡಿದ್ದ ಕಾಮಗಾರಿಗಳ ಮುಂದುವರಿಕೆಗೆ ಅನುದಾನ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ 10 ಹೊಸ ರೈಲು ಮಾರ್ಗಗಳಿಗಾಗಿ ಸಮೀಕ್ಷೆ ಸಹ ನಡೆಸಲು ಉದ್ದೇಶಿಸಲಾಗಿದೆ. 
ಹೊಸಪೇಟೆ- ವಾಸ್ಕೋ (ತಿನೈ ಘಾಟ್) ಹಳಿ ಮಾರ್ಗವನ್ನು ಜೋಡಿ ಹಳಿ ಮಾರ್ಗವನ್ನಾಗಿಸುವ ರೈಲ್ವೆ ಕಾಮಗಾರಿ ಪ್ರಗತಿಯಲ್ಲಿದ್ದು  ರೈಲ್ವೆ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರವನ್ನು ನಡೆಸಲಾಗುತ್ತಿದೆ. ಇನ್ನು ಹುಬ್ಬಳ್ಳಿ- ಚಿಕ್ಕಜಾಜನೂರು, ಗದಗ್-ಸೋಲಾಪುರ್, ಲೋಂಡಾ -ಮಿರಾಜ್ ಮಾರ್ಗಗಳಿಗೆ ರೈಲ್ವೆ ಇಲಾಖೆಯಿಂದ ಹಸಿರು ನಿಶಾನೆ ದೊರೆತಿದೆ, ಈ ಎಲ್ಲಾ ಯೋಜನೆಗಳು ಪೂರ್ಣವಾಗುವುದಕ್ಕೆ ಇನ್ನೂ 4 -5 ವರ್ಷ ಅವಧಿ ಅಗತ್ಯವಿದ್ದು 2019 ರ ವೇಳೆಗೆ ಉತ್ತರ ಕರ್ನಾಟಕದ ಎಲ್ಲಾ ರೈಲು ಮಾರ್ಗಗಳು ಜೋಡಿ ಹಳಿ ಮಾರ್ಗಗಳಾಗಿ ಪರಿವರ್ತನೆಯಾಗಲಿದೆ ಎಂದು ಎಸ್ ಡಬ್ಲ್ಯೂ ಆರ್ ವಿಭಾಗೀಯ ನಿರ್ವಹಣಾ ವ್ಯವಸ್ಥಾಪಕ ಹೆಚ್ಎಂ ದಿನೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com