ಕ್ರೂರಿ ತಾಯಿಯ ಚಿತ್ರಹಿಂಸೆಯಿಂದ ಮುಕ್ತಿ ಪಡೆದ 2 ಮಕ್ಕಳು

ತಾಯಿಯೊಬ್ಬಳು ತಾನು ಹೆತ್ತ ಮಕ್ಕಳಿಗೆ ಸತತವಾಗಿ ಚಿತ್ರಹಿಂಸೆ ನೀಡಿ ಅವರನ್ನು ಮನೆಯಲ್ಲೇ ಕೂಡಿ ಹಾಕಿ ದಿನ ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ
ಮೂರು ವರ್ಷದ ಮಗನಿಗೆ ಕಬ್ಬಿಣ ಸಲಾಕೆಯಿಂದ ಬರೆ ಹಾಕಿರುವ ತಾಯಿ
ಮೂರು ವರ್ಷದ ಮಗನಿಗೆ ಕಬ್ಬಿಣ ಸಲಾಕೆಯಿಂದ ಬರೆ ಹಾಕಿರುವ ತಾಯಿ

ಬೆಂಗಳೂರು: ತಾಯಿಯೇ ಪ್ರತ್ಯಕ್ಷ ದೇವರು ಎಂದು ಪೂಜಿಸುವ ದೇಶ ನಮ್ಮದು. ಆದರೇ ಇಲ್ಲೊಬ್ಬ ತಾಯಿ ತಾನು ದೇವರಲ್ಲ ದೆವ್ವ ಎಂದು ಸಾಬೀತು ಪಡಿಸಲು ಹೊರಟಿದ್ದಾಳೆ.

ತಾಯಿಯೊಬ್ಬಳು ತಾನು ಹೆತ್ತ ಮಕ್ಕಳಿಗೆ ಸತತವಾಗಿ ಚಿತ್ರಹಿಂಸೆ ನೀಡಿ ಅವರನ್ನು ಮನೆಯಲ್ಲೇ ಕೂಡಿ ಹಾಕಿ ದಿನ ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಯಲಹಂಕದ ಕಾಶಿಂಪುರದ ಬಾಡಿಗೆ ಮನಯೊಂದರಲ್ಲಿ ವಾಸವಾಗಿರುವ ಮಂಜುಶ್ರೀ ಎಂಬಾಕೆ ತನ್ನ ಇಬ್ಬರು ಮಕ್ಕಳ ಜೊತೆ ಕ್ರೌರ್ಯ ಮೆರೆದಿದ್ದಾಳೆ. ಗಂಡನಿಂದ ಬೇರೆಯಾಗಿರು ಆಕೆ ಕಳೆದ 3 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ.

ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುವ ಮಂಜುಶ್ರೀ, ತಾನು ನೌಕರಿಗೆ ಹೋಗುವ ಮುನ್ನ ತನ್ನ 3 ವರ್ಷದ ಮಗ ಹಾಗೂ 5 ವರ್ಷದ ಮಗಳನ್ನು ಮನೆಯಲ್ಲಿ ಬೀಗ ಹಾಕಿ ಕೂಡಿ ಹಾಕಿ ಹೋಗುತ್ತಿದ್ದಳು ಕೆಲಸದಿಂದ ತಡವಾಗಿ ಬರುತ್ತಿದ್ದಳು. ಜೊತೆಗೆ ಮಕ್ಕಳಿಗೆ ಊಟ ಸಹ ನೀಡುತ್ತಿರಲಿಲ್ಲ. ಆಕೆ ಕೆಲಸಕ್ಕೆ ಹೋದ ನಂತರ ಮಕ್ಕಳು ಅಕ್ಕ ಪಕ್ಕದ ಮನೆಯವರನ್ನು ತಿನ್ನಲು ಏನಾದರು ನೀಡುವಂತೆ ಕಿಟಕಿಯಿಂದ ಬೇಡುತ್ತಿದ್ದರು. ಇದರಿಂದ ಬೇಸತ್ತ ಸ್ಥಳೀಯರು ಮಕ್ಕಳನ್ನು ಚೆನ್ನಾಗಿ ನೋಡಿಕೊಂಳ್ಳುವಂತೆ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ ತಮ್ಮ ಸಂಸಾರದ ವಿಷಯದಲ್ಲಿ ತಲೆ ಹಾಕದಂತೆ ನೆರೆಹೊರೆಯವರಿಗೆ ಎಚ್ಚರಿಕೆ ನೀಡಿದ್ದಳು. ಮಕ್ಕಳ ಸ್ಥಿತಿ ನೋಡಲಾರದೇ ಸ್ಥಳೀಯ ನಿವಾಸಿಗಳು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು.

ಮಂಜುಶ್ರೀ ಮನೆಗೆ ತೆರಳಿದ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ತನ್ನ ಗಂಡ ಅಪರಾಧ ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸುತ್ತಿದ್ದಾನೆ. ಆತನಂತೆ ತನ್ನ ಮಕ್ಕಳು ಆಗೂಬಾರದು ಶಿಸ್ತಿನ ಜೀವನ ರೂಪಿಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ತಾನು ಮಕ್ಕಳನ್ನು ಕೂಡಿ ಹಾಕಿ ಕೆಲಸಕ್ಕೆ ಹೋಗುತ್ತಿರುವುದಾಗಿ ಈ ವೇಳೆ ಹೇಳಿದ್ದಾಳೆ.

ಇನ್ನು ಮೂರು ವರ್ಷದ ಮಗನ ಕೆನ್ನೆ ಕೈ, ಹಾಗೂ ಕಾಲಿನ ಮೇಲೆ ಕಬ್ಬಿಣದ ಸಲಾಕೆಯನ್ನು ಕಾಯಿಸಿ ಬರೆ ಎಳೆದಿರುವುದರ ಬಗ್ಗೆ ಪ್ರಶ್ನಿಸಿದರೇ, ಅವರು ಒಳ್ಳೆಯ ಬುದ್ದಿ ಕಲಿಯಲಿ ಎಂದು ಹಾಗೆ ಮಾಡಿರುವುದಾಗಿ ಸಮಜಾಯಿಷಿ ನೀಡುತ್ತಾಳೆ. ತನ್ನ ಮಗ ಊಟವನ್ನು ವ್ಯರ್ಥ ಮಾಡುತ್ತಿದ್ದ, ಆತನಿಗೆ ಹಣ ಹಾಗೂ ಅನ್ನದ ಬೆಲೆ ಗೊತ್ತಾಗಲಿ ಎಂಬ ಕಾರಣಕ್ಕೆ ಊಟ ನೀಡದೇ ಇದ್ದುದ್ದಾಗಿ ಮಂಜುಶ್ರೀ ಮಾನವ ಹಕ್ಕುಗಳ ಆಯೋಗದ ಮುಂದೆ ಹೇಳಿಕೆ ನೀಡಿದ್ದಾಳೆ.

ಕೆಲಸಕ್ಕೂ ಹೋಗಿ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಷ್ಠವಾಗುತ್ತಿದೆ ಎಂದು ಹೇಳಿರುವ ಮಂಜುಶ್ರೀ, ಕೆಲಸ ಮುಗಿಸಿ ವಾಪಸ್ ಬಂದ ನಂತರ ಮಕ್ಕಳನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದಳು.

ಇನ್ನು ಮಂಜುಶ್ರೀ ಹೇಳಿಕೆಗಳನ್ನು ಕೇಳಿದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಆಕೆಗೆ ಎಚ್ಚರಿಕೆ ನೀಡಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ. ಆಕೆಯ ವಿರುದ್ಧ ಇದುವರೆಗೆ ಯಾವುದೇ ಕೇಸು ದಾಖಲಿಸಿಲ್ಲ. ಕೇವಲ ಕಾಟಾಚಾರಕ್ಕಾಗಿ ಬಂದ ಮೀರಾ ಸಕ್ಸೇನಾ ಮಾಧ್ಯಮಗಳಿಗೆ ಪೋಸು ನೀಡಿ ಹೊರಡು ಹೋದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಂಜುಶ್ರೀ ಇನ್ನಾದರೂ ತನ್ನ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡು ಹೆತ್ತ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲಿ ಎಂಬುದು ಎಲ್ಲರ ಆಶಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com