ಯೂ ಟರ್ನ್ ಹೊಡೆದ ಬಿಎಸ್'ವೈ: ನಿರಾಣಿ ನೀಡಿದ್ದ ಕಾರು ವಾಪಸ್

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ಪಡೆದು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಇದೀಗ ಯೂ ಟರ್ನ್ ಹೊಡೆದಿದ್ದು, ಮುರುಗೇಶ್ ನಿರಾಣಿ ನೀಡಿದ್ದ ದುಬಾರಿ ಬೆಲೆಯ...
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ಪಡೆದು ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಇದೀಗ ಯೂ ಟರ್ನ್ ಹೊಡೆದಿದ್ದು, ಮುರುಗೇಶ್ ನಿರಾಣಿ ನೀಡಿದ್ದ ದುಬಾರಿ ಬೆಲೆಯ ಕಾರನ್ನು ಹಿಂತಿರುಗಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ.

ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, 40 ವರ್ಷದ ಸುಧೀರ್ಘ ರಾಜಕೀಯ ಜೀವನದಲ್ಲಿ ಸಾಕಷ್ಟು ಸಂಕಷ್ಟವನ್ನು ಅನುಭವಿಸಿದ್ದೇನೆ. ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸಿದ್ದೇನೆ. ಇನ್ನು ಬರಪೀಡಿತ ರಾಜ್ಯಗಳ ಪ್ರವಾಸವನ್ನು ಅದೇ ರೀತಿಯಲ್ಲಿ ಮಾಡುತ್ತೇನೆ. ಇದರಿಂದ ನನಗಾವುದೇ ಸಮಸ್ಯೆಯಿಲ್ಲ. ನಿರಾಣಿ ಅವರು ನೀಡಿದ್ದ ಕಾರನ್ನು ವಾಪಸ್ ನೀಡಿದ್ದೇನೆಂದು ಹೇಳಿದ್ದಾರೆ.

ಇದೇ ವೇಳೆ ಬರ ಪೀಡಿತ ರಾಜ್ಯಗಳಿಗೆ ಇದೇ ಕಾರಿನಲ್ಲೇ ಹೋಗಬೇಕೆಂದು ಯಾವ ಕಾರಣಕ್ಕೆ ತೀರ್ಮಾನ ಕೈಗೊಂಡಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಎರಡೂ ವಿಚಾರವನ್ನು ಹೋಲಿಕೆ ಮಾಡಬಾರದು ಎಂದು ಹೇಳಿದ್ದಾರೆ.

ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ಅವರು ಆಯ್ಕೆಯಾಗುತ್ತಿದ್ದಂತೆ ಸಚಿವ ಮುರುಗೇಶ್ ನಿರಾಣಿ ಅವರು ರು.1 ಕೋಟಿ ವೆಚ್ಚದ ದುಬಾರಿ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ನಿರಾಣಿ ಅವರು ನೀಡಿದ್ದ ದುರಾಬಿ ಕಾರನ್ನು ಪಡೆದಿದ್ದ ಬಿಎಸ್ ವೈ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕರು ಟೀಕೆಗಳನ್ನು ವ್ಯಕ್ತಪಡಿಸಿದ್ದರು.

ತಮ್ಮ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಯಡಿಯೂರಪ್ಪ ಅವರು ನಿರಾಣಿಯವರಿಗೆ ಕಾರನ್ನು ಹಿಂತಿರುಗಿ ನೀಡಿದ್ದು, ರೈಲಿನ ಮೂಲಕ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಣೆಯೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com