
ಬಾಗಲಕೋಟೆ: ಸಿಎಂ ಜೊತೆಗೆ ಗ್ರಾಮಗಳಿಗೆ ಭೇಟಿ ನೀಡುವ ಅಧಿಕಾರಿಗಳು ಫೊಟೋ ತೆಗೆಸಿಕೊಂಡಿದ್ದು ಬಿಟ್ಟರೆ ಬರಕ್ಕಾಗಿ ಕೈಗೊಂಡ ಕ್ರಮಗಳೇನೂ ಇಲ್ಲ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.
ಬರ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಕಾಂಗ್ರೆಸ್ ಕಾರ್ಯಕರ್ತರೇ ಅಡ್ಡಿಯಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳ ಬಂಡವಾಳ ಬಯಲಾಗುವ ಭೀತಿಯಿಂದಾಗಿ ರೈತರನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿಗೂ ಬಿಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಅಲ್ಲದೆ ಬರ ಪ್ರವಾಸದಲ್ಲಿರುವ ಸಿಎಂ ಅಲ್ಲಿಂದ ಬೇರೆ ಪ್ರದೇಶಕ್ಕೆ ತೆರಳುತ್ತಿದ್ದಂತೆಯೇ ಅಧಿಕಾರಿಗಳು ಕೂಡ ಅಲ್ಲಿಂದ ಕಾಲ್ಕೀಳುತ್ತಿದ್ದಾರೆ. ಮತ್ತೆ ಗ್ರಾಮಸ್ಥರು ಎಷ್ಟು ಬಾರಿ ತಮ್ಮ ಅಳಲು ತೋಡಿಕೊಂಡರು ಅಧಿಕಾರಿಗಳು ಮಾತ್ರ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಇನ್ನು ನಿನ್ನೆ ವಿಜಯಪುರಕ್ಕೆ ಸಿಎಂ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾದ ಕಾರಣ, ಬರದಿಂದ ಕಂಗಾಲಾಗಿದ್ದ ರೈತರು ಸಿಎಂ ವಿರುದ್ಧವೇ ತಿರುಗಿಬಿದ್ದ ಪ್ರಸಂಗ ಕೂಡ ನಡೆಯಿತು. ಜಿಲ್ಲೆಯ ಬರ ಪರಿಹಾರ ಕಾಮಗಾರಿ ಆಲಿಸಲು ಸೋಮವಾರ ಇಂಡಿ ತಾಲೂಕಿನ ಅಥರ್ಗಾ ಹಳ್ಳದ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಥರ್ಗಾ ಗ್ರಾಮಸ್ಥರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸೇತುವೆ ಮೇಲೆ ಸಿಎಂ ಕಾರಿನಿಂದ ಇಳಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಹೂಮಾಲೆ ಹಾಕಲು ಮುಗಿಬಿದ್ದರಲ್ಲದೆ, ಪೊಲೀಸರ ಸಹಾಯದಿಂದ ಗ್ರಾಮಸ್ಥರನ್ನು ದೂರ ತಳ್ಳಲು ಯತ್ನಿಸಿದರು.
ಇದರಿಂದ ಬರ ಹಾಗೂ ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟ ಗ್ರಾಮಸ್ಥರು ‘ಹಾರ ತುರಾಯಿ ಬಿಡಿ, ಮೊದಲು ಸಮಸ್ಯೆ ಆಲಿಸಿ’ ಎಂದು ಕೇಳಿಕೊಂಡರೂ ಸ್ಪಂದನೆ ದೊರೆಯದಿದ್ದರಿಂದ ಆಕ್ರೋಶಗೊಂಡು ಮುಖ್ಯಮಂತ್ರಿಗಳ ಕಾರನ್ನು ಸುತ್ತುವರಿದು ಅವರಿಗೆ ಘೆರಾವ್ ಹಾಕಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಕ್ಯಾರೆ ಎನ್ನದೆ, ದೂರದಿಂದಲೇ ಕಾಮಗಾರಿ ವೀಕ್ಷಿಸಿದ ಸಿಎಂ, ಕಾರನ್ನೇರಿ ಮುಂದಿನ ಊರಿನತ್ತ ಹೊರಟಿದ್ದು ಗ್ರಾಮಸ್ಥರ ಆಕ್ರೋಶಕ್ಕೆಕಾರಣವಾಯಿತು.
7 ನಿಮಿಷದಲ್ಲಿ ಬರ ಕಾಮಗಾರಿ ವೀಕ್ಷಣೆ!
ಇನ್ನು ಸಿಎಂ ಬರ ಪ್ರವಾಸದ ಬಗೆಗೂ ಹಲವು ಟೀಕೆಗಳು ವ್ಯಕ್ತವಾಗುತ್ತಿದ್ದು, ನಾಮಕಾವಾಸ್ತೆ ಬರ ಪ್ರವಾಸ ಎಂಬ ಟೀಕೆ ವ್ಯಕ್ತವಾಗುತ್ತಿದೆ. ಸಿದ್ದರಾಮಯ್ಯ ಅವರ ಬರ ಪ್ರವಾಸ ಕೇವಲ ಸ್ಥಳೀಯರ ಕಣ್ಣೊರೆಸುವ ತಂತ್ರ ಎಂಬ ಟೀಕಿಗಳು ವ್ಯಕ್ತವಾಗುತ್ತಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ಸಿಎಂ ಕೂಡ ಬರ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಹೊತ್ತ ಕಳೆಯದೇ, ರೈತರ ಸಮಸ್ಯೆ ಆಲಿಸದೇ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಅಲ್ಲಿಂದ ತೆರಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂ ಬರ ಕಾಮಗಾರಿ ವೀಕ್ಷಣೆ ಮಾಡಿದ್ದು ಬರೋಬ್ಬರಿ 7 ನಿಮಿಷ. ವಿಜಯಪುರ ಜಿಲ್ಲೆಯ ಬರ ಪ್ರವಾಸ ಮುಗಿಸಿಕೊಂಡು ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದ ಹೊಲಕ್ಕೆ ಆಗಮಿಸಿದಾಗ ಮಧ್ಯಾಹ್ನ 2.33 ಗಂಟೆಯಾಗಿತ್ತು. ಕಾರು ಇಳಿದು ನೇರವಾಗಿ ಕಾರ್ಮಿಕರ ಜತೆ 7 ನಿಮಿಷದ ಚುಟುಕು ಮಾತುಕತೆ ನಡೆಸಿದ ಸಿಎಂ, 2.40ಕ್ಕೆ ಅಲ್ಲಿಂದ ತೆರಳಿದರು.
ಬಳಿಕ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ ಅವರ ಬಾಪೂಜಿ ಅಂತಾರಾಷ್ಟ್ರೀಯ ಶಾಲೆಗೆ ಭೇಟಿ ನೀಡಿದರು. ಶಾಲಾ ಆವರಣದಲ್ಲಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿ ಅಲ್ಲಿಯೇ ಊಟ ಮಾಡಿದರು. ಬರ ವೀಕ್ಷಣೆ 7 ನಿಮಿಷಕ್ಕೆ ಮುಗಿಸಿದ್ದ ಸಿಎಂ ಜಿಲ್ಲಾಡಳಿತ ಭವನದಲ್ಲಿ ನಡೆದ ಪರಿಶೀಲನಾ ಸಭೆಯನ್ನು ಮಾತ್ರ ಭರ್ತಿ ಎರಡು ಗಂಟೆಗೂ ಅಧಿಕ ನಡೆಸಿದರು.
‘ರಾಜ್ಯದಲ್ಲಿ ತೀವ್ರ ಬರ ಇಲ್ಲ: ವಿಶೇಷ ಪ್ಯಾಕೇಜ್ ಬೇಕಿಲ್ಲ’: ಸಿಎಂ
ಮಹಾರಾಷ್ಟ್ರದಲ್ಲಿ ಇರುವಂತೆ ರಾಜ್ಯದಲ್ಲಿ ತೀವ್ರ ಬರ ಇಲ್ಲ. ಹೀಗಾಗಿ, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‘ಬರವನ್ನು ಸಮರ್ಥವಾಗಿ ಎದುರಿಸುವ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆರೆಗಳ ಹೂಳೆತ್ತಿ ಅಂತರ್ಜಲ ಮಟ್ಟ ವೃದ್ಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ತಿಳಿಸಲಾಗಿದೆ’ ಎಂದು ತಿಳಿಸಿದರು.
Advertisement