
ಬೆಂಗಳೂರು: ರಾಜ್ಯದಲ್ಲಿ 30ಕ್ಕೂ ಹೆಚ್ಚು ದಿನಗಳ ಕಾಲ ಉಳಿಯುವ ಹೊರ ರಾಜ್ಯದ ವಾಹನಗಳ ಮೇಲೆ ಜೀವಮಾನ ತೆರಿಗೆ ಪಾವತಿಸಬೇಕು ಎಂದು ರಾಜ್ಯ ಸರ್ಕಾರ ರೂಪಿಸಿದ್ದ ನಿಯಮ ಅಸಂವಿಧಾನಿಕ ಎಂದು ಹೈಕೋರ್ಟ್ ಏಕಸದಸ್ಯ ಪೀಠನೀಡಿದ್ದ ಆದೇಶಕ್ಕೆ ಸಂಬಂಧಿಸಿ ಮೇಲ್ಮನವಿ ತೀರ್ಪನ್ನು ಶುಕ್ರವಾರ ಹೈಕೋರ್ಟ್ ವಿಭಾಗೀಯ ಪೀಠ ಕಾಯ್ದಿರಿಸಿದೆ.
ಹೊರ ರಾಜ್ಯಗಳ ವಾನಗಳ ಮೇಲಿನ ಜೀವಮಾನ ತೆರಿಗೆ ಪಾವತಿ ಕುರಿತಂತೆ ರಾಜ್ಯ ಸರ್ಕಾರದ ಮೇಲ್ಮನವಿ ಸಂಬಂಧ ನಿನ್ನೆ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾ.ಜಯಂತ್ ಪಟೇಲ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ -1957ರ ಸೆಕ್ಷನ್ 3ಕ್ಕೆ ತಿದ್ದುಪಡಿ ತಂದು, ರಾಜ್ಯದಲ್ಲಿ 30 ದಿನಗಳಿಗೂ ಮೀರಿ ಉಳಿಯುವ ವಾಹನಗಳು ಜೀವಮಾನ ತೆರಿಗೆ ಪಾವತಿಸಬೇಕು ಎಂದು ಸರ್ಕಾರ ಈ ಹಿಂದೆ ನಿಯಮವೊಂದನ್ನು ರೂಪಿಸಿತ್ತು.
ಈ ನಿಯಮದಂತೆ ರಾಜ್ಯದಲ್ಲಿ 30 ದಿನಗಳಿಗೂ ಮೀರಿ ಉಳಿದ ಹೊರ ರಾಜ್ಯದ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ತಡೆದು ತಂಡ ವಿಧಿಸುತ್ತಿದ್ದರು. ಜತೆಗೆ, ವಾಹನಗಳ ಹಾಗೂ ನೋಂದಣಿ ಪತ್ರ ಜಪ್ತಿ ಮಾಡಿ ಜೀವಮಾನ ತೆರಿಗೆ ಪಾವತಿಸುವಂತೆ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಈ ನೋಟಿಸ್ ರದ್ದುಗೊಳಿಸುವಂತೆ ಕೋರಿ ಹೊರ ರಾಜ್ಯದ ವಾಹನ ಮಾಲೀಕರು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ರಾಜ್ಯದಲ್ಲಿ 30 ದಿನಕ್ಕೂ ಅಧಿಕ ಕಾಲ ಉಳಿಯುವ ಹೊರ ರಾಜ್ಯದ ವಾಹನಗಳು ಜೀವಮಾನ ತೆರಿಗೆ ಪಾವತಿಸಬೇಕು ಎಂಬುದಾಗಿ ಕರ್ನಾಟಕ ಸರ್ಕಾರ ರೂಪಿಸಿದ್ದ ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ (ತಿದ್ದುಪಡಿ)-2014ನ್ನು ಅಸಂವಿಧಾನಿಕ ಎಂದು ಘೋಷಿಸಿ ಕಳೆದ ಮಾರ್ಚ್ 10 ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಇದರಂತೆ ನಿನ್ನೆ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠ ಈ ಕುರಿತ ತೀರ್ಪನ್ನು ಕಾಯ್ದಿರಿಸಿದೆ.
Advertisement