

ಬಾಗಲಕೋಟೆ: ಕಳೆದ ಹತ್ತು ವರ್ಷಗಳ ಹಿಂದೆ ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಬಾಗಲಕೋಟೆಯ ಕೆಲ ಗ್ರಾಮಗಳು, ಈ ಬಾರಿಯ ತೀವ್ರ ಬೇಸಿಗೆ ಮತ್ತು ಬರದ ಕಾರಣ ನದಿ ನೀರು ಹಿಂಗಿ ಹೋಗಿ ಆ ಗ್ರಾಮಗಳು ಜನರಿಗೆ ಕಾಣಿಸಿಕೊಂಡಿವೆ.
2005ರಲ್ಲಿ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸಿದ್ದ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿದ್ದ 32 ಗ್ರಾಮಗಳ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸಿ ಬೇರೆಡೆ ವಾಸಿಸುವಂತೆ ಸರ್ಕಾರದ ಆದೇಶಿಸಿತ್ತು, ಅಲ್ಲಿನ ನೀರಿನ ಹರಿವು ಹೆಚ್ಚಾಗಿ ಅಲ್ಲಿನ ಜನ ಬೇರೆಡೆ ಸ್ಥಳಾಂತರಗೊಂಡಿದ್ದರು.
ಅಶೋಕ್ ಭಜಂತ್ರಿ ಎಂಬಾತನು ಅಂದು ಅಲ್ಲಿಂದ ತೆರವುಗೊಳಿಸಿದ ನೆನಪನ್ನು ಇನ್ನೂ ಮರೆತಿಲ್ಲ. ಮುರ್ನಾಲ್ ಗ್ರಾಮದಲ್ಲಿದ್ದ ಆತನ ಮನೆಯು ನೀರಿನಿಂದ ಮುಳುಗಿ ಹೋಗಿತ್ತು. ಆದರೆ ಈಗ ಮಳೆಯಿಲ್ಲದ ಕಾರಣ ನೀರಿನ ಪ್ರಮಾಣ ತೀವ್ರವಾಗಿ ತಗ್ಗಿದ್ದು, ಅಂದು ಮುಳುಗಡೆಯಾಗಿದ್ದ ಗ್ರಾಮಗಳು 10 ವರ್ಷದ ನಂತರ ಮರಳಿ ಕಾಣಸಿಗುತ್ತಿವೆ.
ಅಂದು ಮುರ್ನಾಲ್, ಈರ್ ಪುರ್, ಕೆಸನೂರ್, ಬನ್ನಿದಿನ್ನಿ, ಮತ್ತು ಅಲ್ಡಾನಿ ಸೇರಿದಂತೆ ಹಲವು ಗ್ರಾಮಗಳು ಜಾಲವೃತಗೊಂಡಿದ್ದವು. ಅಲ್ಲಿಂದ ಹೊರಟ ಜನ ಬಾಗಲಕೋಟೆಯ ವಿವಿಧೆಡೆ ಸೂರು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.
ಅಂದು ರೈತರು ತಮ್ಮ 1 ಎಕರೆ ಭೂಮಿಯನ್ನು ಕೇವಲ 1ಲಕ್ಷ 8 ಸಾವಿರ ರು.ಗೆ ನೀಡಿದ್ದರು. ಆದರೆ ಈಗ ಅದೇ ಭೂಮಿಯನ್ನು ಎಕರೆಗೆ 40 ಲಕ್ಷ ರು ಗೆ ಮಾರಾಟ ಮಾಡಲಾಗುತ್ತಿದೆ.
ಅಂದು ಭೂ ಮಾಲೀಕರಾಗಿದ್ದ ಹಲವು ಮಂದಿ ಇಂದು ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಭೂಮಿಯೆಲ್ಲಾ ಆಲಮಟ್ಟಿ ಜಲಾಶಯದ ಪ್ರಾಧಿಕಾರಕ್ಕೆ ಸೇರಿದೆ.
ಅಂದು ಮುಳುಗಡೆಯಾಗಿದ್ದ ಮುರ್ನೂರು ಗ್ರಾಮದಲ್ಲಿ ಅಶೋಕ್ ಭಜಂತ್ರಿ ತಮ್ಮ ಅಪ್ಪ ಅಮ್ಮ, ಸಹೋದರಿಯರು, ಚಿಕ್ಕಪ್ಪ, ಚಿಕ್ಕಮ್ಮಂದಿರ ಜೊತೆ ನಾಲ್ಕು ರೂಮಿನ ಮನೆಯಲ್ಲಿ ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದುದ್ದನ್ನು ನೆನಪಿಸಿಕೊಳ್ಳುತ್ತಾರೆ.
ಅಂದು ಸುಮಾರು 2 ಲಕ್ಷ ಜನ ಕೃಷ್ಣಾ ನದಿ ಪಾತ್ರದಲ್ಲಿ ವಾಸಿಸುತ್ತಿದ್ದರು. ಅನಂತರ ಎಲ್ಲರೂ ಬೇರ್ಪಟ್ಟರು. ಹಳೇಯ ಮೂರ್ನಾಲ್ ಈಗ ನೀರು ಬತ್ತಿಹೋಗಿರುವುದಕ್ಕೆ ಭೂತದಂತೆ ಕಾಣುತ್ತದೆ, ತಾವು ಈ ಹಿಂದೆ ಆ ಜಾಗದಲ್ಲಿ ವಾಸಿಸಿದ, ಓಡಾಡಿದ ನೆನಪುಗಳನ್ನು ಗ್ರಾಮಗಳಲ್ಲಿ ವಾಸಿಸುತ್ತಿದ್ದ ಜನತೆ ಇಂದಿಗೂ ಸ್ಮರಿಸುತ್ತಾರೆ.