

ಕಲಬುರಗಿ: ಯಾದಗಿರಿ ಜಿಲ್ಲೆಯ ಈವೂರ್ ತಾಂಡಾ(ಸೇವಾನಗರ) ಗ್ರಾಮದ ಪ್ರತಿ ಮೂರು ಮನೆಯ ಒಬ್ಬ ಸದಸ್ಯರಲ್ಲಿ ಹುಟ್ಟು ಅಂಗವೈಕಲ್ಯ ಸರ್ವೇ ಸಾಮಾನ್ಯವಾಗಿದೆ.
ಸುರಪುರ್ ದಿಂದ 40 ಕಿಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಹಲವು ವರ್ಷಗಳಿಂದ ಇಲ್ಲಿನ ನಾಗರಿಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸುಮಾರು 2.ಸಾವಿರ ಜನರಿರುವ ಈ ಗ್ರಾಮದಲ್ಲಿ ಶೇ. 9 ರಷ್ಟು ದೈಹಿಕ ಹಾಗೂ ಮಾನಸಿಕ ವಿಕಲ ಚೇತನರಿದ್ದಾರೆ.
500 ಕುಟುಂಬಗಳಿರುವ ಈವೂರು ತಾಂಡದಲ್ಲಿ 190 ಮಂದಿ ವಿಕಲಾಂಗರಿದ್ದು, ಅದರಲ್ಲಿ ಶೇ.50ರಷ್ಟು ಮಕ್ಕಳೇ ಆಗಿದ್ದಾರೆ. ದೃಷ್ಟಿದೋಷ, ಕಿವುಡುತನಕ್ಕೆ ಬಲಿಯಾಗಿದ್ದಾರೆ.
ಮತ್ತೊಂದು ಅಶ್ಚರ್ಯಕರ ಸಂಗತಿ ಎಂದರೇ ಈ ಗ್ರಾಮಕ್ಕೆ ಆಗಮಿಸಿದ್ದ ಆಶಾ ಆರೋಗ್ಯ ಸೇವಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದು, ಹುಟ್ಟಿನಿಂದಲೇ ಆ ಮಗು ಮಾತು ಕಳೆದು ಕೊಂಡು ಕಿವುಡುತನ ಅನುಭವಿಸುತ್ತಿದೆ.
ಕಳೆದ 15 ತಿಂಗಳ ಹಿಂದೆ ಇಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಈ ಗ್ರಾಮದಲ್ಲಿ ಜನಿಸುವ ಮಕ್ಕಳಿಗೆ ವಂಶವಾಹಿ ದೋಷದಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ಆರೋಗ್ಯತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಅದಕ್ಕೆ ಪೂರಕವಾದ ಯಾವುದೇ ಅಧ್ಯಯನ ನಡೆದಿಲ್ಲ. ಜೊತೆಗೆ ಈ ಸಮಸ್ಯೆಗೆ ನಿಖರವಾದ ಕಾರಣ ಏನು ಎಂಬುದು ಇನ್ನೂ ನಿಗೂಢ.
ಈ ಗ್ರಾಮದಲ್ಲಿ ಶುಚಿತ್ವ ಇಲ್ಲದಿರುವುದೇ ಪ್ರಮುಖ ಕಾರಣ ಎಂದು ಆರೋಗ್ಯಾಧಿಕಾರಿ ವಿಶ್ವನಾಥ್ ಹೇಳಿದ್ದಾರೆ. ಆದರೆ ಹುಟ್ಟಿನಿಂದಲೇ ಅಂಗ ವೈಕಲ್ಯಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.