ಮುಂಗಾರು ಕೊರತೆ ಹಿನ್ನೆಲೆ: ಭತ್ತದ ಬೆಳೆಗೆ ನೀರು ಬಿಡದಿರಲು ಸಂಪುಟ ನಿರ್ಧಾರ

ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಭತ್ತ, ಕಬ್ಬು ಸೇರಿದಂತೆ ಯಾವುದೇ ಬೆಳೆಗಳಿಗೂ ನೀರು ಬಿಡುಗಡೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ...
ಟಿ.ಬಿ ಜಯಚಂದ್ರ
ಟಿ.ಬಿ ಜಯಚಂದ್ರ

ಬೆಂಗಳೂರು: ಮುಂಗಾರು ಕೊರತೆ ಹಿನ್ನೆಲೆಯಲ್ಲಿ ಭತ್ತ, ಕಬ್ಬು ಸೇರಿದಂತೆ ಯಾವುದೇ ಬೆಳೆಗಳಿಗೂ ನೀರು ಬಿಡುಗಡೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಸಭೆ ತೀರ್ಮಾನಿಸಿದೆ.

ಕಾವೇರಿ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಿಟ್ಟು  ಕೃಷಿ ಉದ್ದೇಶಕ್ಕೆ ಬಳಸಬಾರದು ಎಂದು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಸಚಿವ ಟಿ.ಬಿ ಜಯಚಂದ್ರ ಸಂಪುಟ ಸಭೆಯ ನಂತರ ತಿಳಿಸಿದ್ದಾರೆ.

ಕೃಷ್ಣರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ತುಂಗಭದ್ರಾ, ಭದ್ರಾ ಮತ್ತು ತುಂಗಾ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆ ಇದೆ. ಈ ಕಾರಣದಿಂದ ತುಂಗಭದ್ರಾ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ಬಿಡದೇ ಇರಲು ತೀರ್ಮಾನಿಸಲಾಗಿದೆ  

ಭತ್ತ ಬಿತ್ತನೆ ಮಾಡುವ ಮೊದಲು ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಬರದೇ ಇದ್ದರೆ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುವ ಹೊಣೆಯನ್ನು ನೀರಾವರಿ ಸಲಹಾ ಸಮಿತಿಗೆ ವಹಿಸಲು ಸಭೆ ನಿರ್ಣಯಿಸಿದೆ. ಕೊಳವೆಬಾವಿ ಕೊರೆಯುವುದನ್ನು ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ, ಜಿಲ್ಲಾಡಳಿತಕ್ಕೆ ಸೂಚಿಸಲು ಸಭೆ ತೀರ್ಮಾನಿಸಿತು ಎಂದರು.

ತೀವ್ರ ಮಳೆ ಕೊರತೆ ಎದುರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 8 ರ ವರೆಗೆ ವಾಡಿಕೆಯಂತೆ ಇಡೀ ರಾಜ್ಯದಲ್ಲಿ 537 ಮಿಲಿ ಮೀಟರ್‌ ಮಳೆ ಬೀಳಬೇಕಾಗಿತ್ತು. ಆದರೆ, 503 ಮಿಲಿ ಮೀಟರ್‌(ಮಿ.ಮೀ) ಮಳೆಯಾಗಿದ್ದು, ಶೇ 6 ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ ಎಂದರು.

ಮೋಡ ಬಿತ್ತನೆಯ ಸಾಧಕ–ಬಾಧಕಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು, ಮಳೆ ಸುರಿಸುವ ಮೋಡಗಳು ಇದ್ದರೆ ಮಾತ್ರ ಮೋಡಬಿತ್ತನೆ ಮಾಡಲು ಸಭೆ ಒಪ್ಪಿಗೆ ಸೂಚಿಸಿತು ಎಂದು ಸಚಿವ ಜಯಚಂದ್ರ ಹೇಳಿದರು.

ಅತ್ಯಾಧುನಿಕ ಮಾದರಿಯಲ್ಲಿ ಮೋಡ ಬಿತ್ತನೆ ಮಾಡಲು 30 ಕೋಟಿ ಅನುದಾನ ಒದಗಿಸಲು ಸಭೆ ಅನುಮೋದನೆ ನೀಡಿದೆ. ಜಲಸಂಪನ್ಮೂಲ ಇಲಾಖೆ ಈ ಖರ್ಚು ಭರಿಸಲಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com