
ಬೆಂಗಳೂರು: ಸೋಮವಾರ ನಡೆಯಲಿರುವ 70 ನೇ ಸ್ವಾತಂತ್ರ್ಯ ದಿನಾಚರಣೆಗೆ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮ ನಡೆಯುವ ಮಾಣೆಕ್ ಷಾ ಪರೇಡ್ ಮೈದಾನ ಸೇರಿದಂತೆ ನಗರದಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಗರುಡಾ ಕಮಾಂಡೊ ಪಡೆಯೂ ಹದ್ದಿನ ಕಣ್ಣಿಡಲಿದೆ. ಪರೇಡ್ ಮೈದಾನದ ಸುತ್ತಲೂ 40 ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಭಾರತೀಯ ಭೂಸೇನೆಯ ‘ಮೈನ್ ಡಿಟೆಕ್ಷನ್’ (ನೆಲಬಾಂಬ್ ಪತ್ತೆ) ದಳವನ್ನು ಈ ಬಾರಿ ನಿಯೋಜನೆ ಮಾಡಲಾಗಿದೆ. ಅದರೊಟ್ಟಿಗೆ ಬಾಂಬ್ ನಿಷ್ಕ್ರಿಯ ದಳದ ಎರಡು ತಂಡ, ಎರಡು ಗುಂಡು ನಿರೋಧಕ ವಾಹನಗಳು ಹಾಗೂ ಸ್ಕೈ ಸೆಂಟ್ರಿಗಳು ಇರಲಿದ್ದಾರೆನಗರ ಪೊಲೀಸ್ ಆಯುಕ್ತ ಎನ್ ಮೆಘರಿಕ್ ತಿಳಿಸಿದ್ದಾರೆ.
ಪೊಲೀಸ್ ಭದ್ರತೆಯ ಜೊತೆಗೆ 16 ಆಂಬುಲೆನ್ಸ್‌ಗಳು, 20 ವೈದ್ಯರು, 30 ಜನ ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ 10 ಹಾಸಿಗೆಗಳನ್ನು ಒಳಗೊಂಡ ವೈದ್ಯಕೀಯ ವ್ಯವಸ್ಥೆಯೂ ಮೈದಾನದಲ್ಲಿ ಇರಲಿದೆ. 25 ಎಸ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ 8 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿಯೂ ಇರಲಿದ್ದಾರೆ. 12 ಡಿಸಿಪಿಗಳು, 22 ಎಸಿಪಿಗಳು, 55 ಪೊಲೀಸ್ ಇನ್ಸ್ ಪೆಕ್ಟರ್ ಗಳು, 105 ಸಬ್ ಇನ್ಸ್ ಪೆಕ್ಟರ್ ಗಳು, 40 ಕೆಎಸ್ ಆರ್ ಪಿ ತುಕಡಿ, ನಿಯೋಜಿಸಲಾಗಿದೆ.
ಬೆದರಿಕೆ ಇರುವ ಕುರಿತು ಕೇಂದ್ರೀಯ ಭದ್ರತಾ ಸಂಸ್ಥೆಗಳಿಂದ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಭದ್ರತಾ ದೃಷ್ಟಿಯಿಂದ ನಗರದಲ್ಲಿ ಆಗಸ್ಟ್ 13ರಿಂದ ಆಗಸ್ಟ್ 15ರ ತನಕ ಡ್ರೋನ್, ಬಲೂನ್ ಸೇರಿದಂತೆ ದೂರ ನಿಯಂತ್ರಿತ ವಿಮಾನಗಳ ಹಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.
Advertisement