284 ಜೈಲು ಹಕ್ಕಿಗಳಿಗೆ "ಸ್ವಾತಂತ್ರ್ಯ"; ಹೊಸ ಜೀವನದತ್ತ ಮೊದಲ ಹೆಜ್ಜೆ

70ನೇ ಸ್ವಾತಂತ್ರ್ಯ ದಿನವನ್ನು ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಸಂಭ್ರಮದಲ್ಲಿ ಸರ್ಕಾರ ಸನ್ನಡತೆಯ ಆಧಾರದ ಮೇಲೆ 284 ಜೈಲು ಹಕ್ಕಿಗಳನ್ನು...
ವಯಸ್ಸಾದ ಮಹಿಳೆಯೊಬ್ಬರು ಜೈಲಿನಿಂದ ಹೊರ ಬರುತ್ತಿರುವುದು.
ವಯಸ್ಸಾದ ಮಹಿಳೆಯೊಬ್ಬರು ಜೈಲಿನಿಂದ ಹೊರ ಬರುತ್ತಿರುವುದು.

ಬೆಂಗಳೂರು: 70ನೇ ಸ್ವಾತಂತ್ರ್ಯ ದಿನವನ್ನು ದೇಶದೆಲ್ಲೆಡೆ ವಿವಿಧ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ಸಂಭ್ರಮದಲ್ಲಿ ಸರ್ಕಾರ ಸನ್ನಡತೆಯ ಆಧಾರದ ಮೇಲೆ 284 ಜೈಲು ಹಕ್ಕಿಗಳನ್ನು ಬಿಡುಗಡೆ ಮಾಡುವ ಮೂಲಕ ಕೈದಿಗಳಿಗೆ ಹೊಸ ಜೀವನದತ್ತ ಸಾಗಲು ಅವಕಾಶ ಮಾಡಿಕೊಟ್ಟಿದೆ.

14 ವರ್ಷಕ್ಕೂ ಹೆಚ್ಚು ವರ್ಷಗಳ ಕಾಲ ಸೆರೆವಾಸ ಅನುಭವಿಸಿ ಹೊರ ಪ್ರಪಂಚವನ್ನೇ ನೋಡದ ಕೈದಿಗಳಿಗೆ ನಿನ್ನೆಯ 70ನೇ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿತ್ತು. ಬಿಡುಗಡೆಗೊಂಡ ಸಂತಸ ಪ್ರತೀಯೊಬ್ಬ ಕೈದಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ನಿನ್ನೆಯಷ್ಟೇ ಕಾಡುಗಳ್ಳ ವೀರಪ್ಪನ್'ನ 4 ಜನ ಸಹಚರರು, 48 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 284 ಕೈದಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಒಟ್ಟು 120 ಕೈದಿಗಳನ್ನು ಪರಪ್ಪನ ಅಗ್ರಹಾರದಿಂದ ಬಿಡುಗಡೆ ಮಾಡಲಾಗಿದೆ. ಮೈಸೂರಿನಲ್ಲಿ 52, ಬೆಳಗಾವಿ ಜೈಲಿನಲ್ಲಿ 35 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಜೈಲು ಹಕ್ಕಿಗಳ ಮುಖದಲ್ಲಿ ಸಂತಸದೊಂದಿಗೆ ದುಃಖ ಒಮ್ಮೆಲೆ ಚಾಚಿ ಬಂದಿತ್ತು. ಜೈಲಿನ ಗೇಟ್ ದಾಟುತ್ತಿದ್ದಂತೆ ಅವರ ಕಣ್ಣಾಲಿಗಲು ತುಂಬಿ ಬಂದಿದ್ದವು. ಸಾಕಷ್ಟು ಮಂದಿ ಜೈಲಾಧಿಕಾರಿಗಳನ್ನು ಸಂತೈಸುವುದು, ಕಾಲಿಗೆ ಬೀಳುವ ದೃಶ್ಯಗಳು ಜೈಲುಗಳ ಹೊರಾಂಗಣದಲ್ಲಿ ಕಾಣಸಿಗುತ್ತಿದ್ದವು.

ಜೈಲಿನಿಂದ ಬಿಡುಗಡೆಗೊಳ್ಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕೈದಿಗಳ ಕುಟುಂಬಸ್ಥರು ಹಾಗೂ ಸಂಬಂಧಿಕರು  ಅವರನ್ನು ಬರಮಾಡಿಕೊಳ್ಳಲು ಜೈಲಿನ ಗೇಟ್ ಬಳಿ ಕಾದು ಕುಳಿತಿದ್ದರು. ಇನ್ನು ಕೆಲವರು ತಮ್ಮನ್ನು ಸ್ವಾಗತಿಸಲು ಯಾರು ಇಲ್ಲ ಎಂಬ ದುಃಖದಲ್ಲೇ ಜೈಲಿನಿಂದ ಹೊರ ಬರುತ್ತಿದ್ದರು.

ಜೈಲಿನಿಂದ ಹೊರಬರುತ್ತಿದ್ದಂತೆ ನಾನು ಗೇಟ್ ಬಳಿ ಕೆಲ ಗಂಟೆಗಳ ಕಾಲ ನಿಂತಿದ್ದೆ. ಜನರ ಚಲನವಲನಗಳನ್ನು ಗಮನಿಸುತ್ತಿದ್ದೆ. ನಂತರ ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟೆ. ಡೈರಿ ನಡೆಸಬೇಕೆಂಬುದು ನನ್ನ ಕನಸ್ಸಾಗಿತ್ತು. ಇಂದು ನನ್ನ ಕನಸ್ಸು ನನಸಾಗಿದೆ. ಜೈಲಿನಲ್ಲಿದ್ದಾಗ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತಮವಾಗಿ ನೋಡಿಕೊಂಡಿದ್ದರು ಎಂದು ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸುರೇಶ್ (42) ಎಂಬುವವರು ಹೇಳಿದ್ದಾರೆ.

14 ವರ್ಷಗಳಿಗಿಂತಲೂ ಹೆಚ್ಚು ವರ್ಷ ನಾನು ಸೆರೆವಾಸ ಅನುಭವಿಸಿದ್ದೇನೆ. ಜೈಲಿನಲ್ಲಿದ್ದಾಗ ಯಾರೊಬ್ಬರೂ ನನ್ನನ್ನು ಭೇಟಿ ಮಾಡಲು ಬಂದಿರಲಿಲ್ಲ. ಬಿಡುಗಡೆಗೊಳ್ಳುವ ವೇಳೆ ಯಾರಾದರೂ ನನ್ನನ್ನು ಸ್ವಾಗತಿಸುತ್ತಾರೆಂದು ಭಾವಿಸಿದ್ದೆ. ಆದರೆ ಯಾರೊಬ್ಬರೂ ಬಂದಿಲ್ಲ ಎಂದು ಪತಿಯನ್ನು ಕೊಂದ ಆಪರಾಧದ ಮೇಲೆ ಸೆರವಾಸ ಅನುಭವಿಸಿ ಬಿಡುಗಡೆಗೊಂಡ ಅಕ್ಕಮಹಾದೇವಿ (73) ಅವರು ಹೇಳಿದ್ದಾರೆ.

ಜೈಲಿನಲ್ಲಿದ್ದ ವೇಳೆ ನಾನು ಯೋಗ ಕಲಿತುಕೊಂಡಿದ್ದೆ. ಇತರರಿಗೂ ಈ ಯೋಗವನ್ನು ಹೇಳಿಕೊಡುತ್ತಿದ್ದೆ ಎಂದು ಕೊಲೆ ಪ್ರಕರಣದಲ್ಲಿ 18 ವರ್ಷ ಸೆರೆವಾಸ ಅನುಭವಿಸಿ ಬಿಡುಗಡೆಗೊಂಡಿರುವ ಸುಬ್ರಮಣಿ (39) ಹೇಳಿದ್ದಾರೆ.

ಜೈಲಿನಲ್ಲಿದ್ದ ಸಂದರ್ಭದಲ್ಲಿ ನಾನು ಅಡುಗೆ ಮಾಡುವುದನ್ನು ಕಲಿತಿದ್ದೆ. ಅಲ್ಲದೆ, ರಾತ್ರಿ ಪಾಳಿಯಲ್ಲಿ ಭದ್ರತಾ ಸಿಬ್ಬಂದಿಯಾಗಿಯೂ ಕೆಲಸ ಮಾಡಿದ್ದೆ. ಇದರಿಂದ ರು.1.25 ಲಕ್ಷ ಸಂಪಾದಿಸಿದ್ದೇನೆ. ಮುಂದೆ ಜೀವನ ಸಾಗಿಸಲು ಈ ಹಣ ನನಗೆ ಸಹಾಯವಾಗಲಿದೆ ಎಂದು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 14 ವರ್ಷ ಜೈಲುವಾಸ ಅನುಭವಿಸಿರುವ ಹೊನ್ನಮ್ಮ (38) ಹೇಳಿದ್ದಾರೆ.

ಮತ್ತೆಂದಿಗೂ ಜೈಲಿನ ಗೇಟ್ ನೋಡಬೇಡಿ: ಜಿ. ಪರಮೇಶ್ವರ
ಕೈದಿಗಳನ್ನು ಬಿಡುಗಡೆ ಮಾಡುವ ವೇಳೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್ ಅವರು, ಮತ್ತೆ ಜೀವನದಲ್ಲಿ ಎಂದಿಗೂ ಜೈಲಿನ ಗೇಟ್ ನ್ನು ನೋಡಬೇಡಿ ಎಂದು ಬಿಡುಗಡೆಗೊಂಡ ಜೈಲು ಹಕ್ಕಿಗಳಿಗೆ ಬುದ್ಧಿ ಮಾತನ್ನು ಹೇಳಿದರು.

ಜೈಲಿನಿಂದ ಬಿಡುಗಡೆಗೊಂಡವರಿಗೆ ಹೊಸ ಜೀವನದತ್ತ ಸಾಗಲು ಮತ್ತೊಂದು ಅವಕಾಶ ಸಿಕ್ಕಿದೆ. ಬಿಡುಗಡೆಗೊಂಡ ಮಹಿಳೆಯರಿಗೆ ಸರ್ಕಾರ ಸಹಾಯ ಮಾಡಲು ಬೆಂಬಲಿಸಲು ನಿರ್ಧರಿಸಿದ್ದು, ಇದಕ್ಕಾಗಿ ಮಹಿಳಾ ಸಂಘಟನೆಗಳೊಂದಿಗೆ ಚರ್ಚಿಸಲು ತೀರ್ಮಾನಿಸಿದೆ.

ಆದರೆ, ಬಿಡುಗಡೆಗೊಂಡ ಮಹಿಳೆಯರನ್ನು ಸ್ವೀಕರಿಸಲು ಸಮಾಜ ಹಾಗೂ ಅವರ ಸಂಬಂಧಿಕರು ಮುಂದೆಬಾರದಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ. ಇದಕ್ಕೆ ಹಿಂಜರಿಯಬಾರದು. ನಿಮ್ಮ ಉತ್ತಮ ನಡವಳಿಕೆಯಿಂದ ನಿಮ್ಮನ್ನು ನೀವು ಉತ್ತಮ ವ್ಯಕ್ತಿಯೆಂದು ಸಾಬೀತುಪಡಿಸಬೇಕು. ಇದಕ್ಕೆ ನಿಮಗೆ ಮತ್ತೊಂದು ಅವಕಾಶ ಸಿಕ್ಕಿದೆ. ಇದನ್ನು ಬಳಸಿಕೊಳ್ಳುವ ಸಮಯ ಕೂಡ ಬಂದಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com