ಬೆಂಗಳೂರು: ದೇಶ ವಿರೋಧಿ ಘೋಷಣೆ ಕೂಗಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿರುವ ಆಮ್ನೆಸ್ಟಿ ಇಂಟರನ್ಯಾಷನಲ್ ಇಂಡಿಯಾದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಜ್ಯ ವ್ಯಾಪ್ತಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದೆ.
ನಗರದಲ್ಲಿ ಆ.13ರಂದು ಥಿಯೋಲಾಜಿಕಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶ ಮತ್ತು ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳು ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಆಮ್ನೆಸ್ಟಿ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮಹಾರಾಣಿ ಮಹಿಳಾ ಕಾಲೇಜು, ಆರ್ ಸಿ ಕಾಲೇಜು, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳಿಂದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮೈಸೂರು ಬ್ಯಾಂಕ್ ವೃತ್ತದ ಬಳಿ ಬಂದ ವಿದ್ಯಾರ್ಥಿಗಳು ಆಮ್ನೆಸ್ಟಿ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ದೇಶ ವಿರೋಧಿ ಘೋಷಣೆ ಕೂಗಿದ ಆಮ್ನೆಸ್ಟಿ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ಪೊಲೀಸರು ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿದರೆ ನಾವು ಹೆದರುವುದಿಲ್ಲ. ಸರ್ಕಾರ ಆಮ್ನೆಸ್ಟಿ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಡೆಸುತ್ತೇವೆಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದ್ರೆಯವರು ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗುರುವಾರ ಎಬಿವಿಪಿಯು ಪೊಲೀಸ್ ಆಯುಕ್ತರ ಕಚೇರಿಯೆದುರಿಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಗೃಹ ಸಚಿವರಿಗೆ ಕಪ್ಪು ಬಾವುಟನ್ನು ಪ್ರದರ್ಶಿಸಲು ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಒಂದೆಡೆ ದೇಶ ವಿರೋಧಿ ಘೋಷಣೆ ಕೂಗಿ ಆಮ್ನೆಸ್ಟಿ ವಿರುದ್ಧ ಹಲವು ಪ್ರತಿಭಟನೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳು ಗಮನಾರ್ಹವೆಂಬಂತೆ ಹೇಳಿಕೆ ನೀಡುತ್ತಿದ್ದಾರೆ.
ದೇಶ ವಿರೋಧಿ ಘೋಷಣೆ ಕುರಿತಂತೆ ರಾಯಚೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಅವರು ಮಾತನಾಡಿದ್ದು, ದೇಶದ್ರೋಹ ಪ್ರಕರಣಕ್ಕೆ ಸರ್ಕಾರದ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕ್ರಿಮಿನಲ್ ಬೆದರಿಕೆ ಆರೋದಡಿಯಲ್ಲಿ ಬಂಧನಕ್ಕೊಳಗಾಗಿರುವ ತುಮಕೂರು ವಿದ್ಯಾರ್ಥಿ ಕುರಿತಂತೆ ಮಾತನಾಡಿರುವ ಅವರು, ಸಿದ್ಧಾರ್ಥ ಕಾಲೇಜನ್ನು ಗೃಹ ಸಚಿವ ಪರಮೇಶ್ವರ ಅವರು ನಡೆಸುತ್ತಿದ್ದಾರೆ. ದೇಶ ವಿರೋಧಿ ಘೋಷಣೆಯನ್ನು ಕೂಗಲಾಗಿದೆ. ಆದರೆ, ವರದಿ ತಿಳಿಸಿರುವ ಪ್ರಕಾರ ಆ ಘೋಷಣೆಯನ್ನು ಪಾನಮತ್ತನಾಗಿದ್ದ ವ್ಯಕ್ತಿಯೊಬ್ಬ ಕೂಗಿರುವುದಾಗಿ ತಿಳಿಸಿವೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.
Advertisement