ಬೆಂಗಳೂರು: ದೇಶ ವಿರೋಧಿ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ವಿರುದ್ಧದ ಎಬಿವಿಬಿ ಪ್ರತಿಭಟನೆ ತೀವ್ರಗೊಂಡಿದ್ದು, ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಭಾರತೀಯ ಯೋಧರ ವಿರುದ್ಧ ಘೋಷಣೆ ಕೂಗಿದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಮೇಲೆ ನಿಷೇಧ ಹೇರುವಂತೆ ಆಗ್ರಹಿಸಿ ಎಬಿವಿಪಿ ತನ್ನ ಪ್ರತಿಭಟನೆಯನ್ನು ನಿನ್ನೆಯಷ್ಟೇ ತೀವ್ರಗೊಳಿಸಿತ್ತು. ಇಂದಿರಾನಗರದಲ್ಲಿರುವ ಆಮ್ನೆಸ್ಟಿ ಕಚೇರಿ ಬಳಿ ಪ್ರತಿಭಟನೆ ನಡೆಸಲು ಆರಂಭಿಸಿತ್ತು. ಇದರಂತೆ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಯತ್ನ ನಡೆಸಿದರು. ನಂತರ ಲಾಠಿಚಾರ್ಜ್ ನಡೆಸಲು ಆರಂಭ ಮಾಡಿದರು. ಘಟನೆ ವೇಳೆ 6 ಮಂದಿ ಪ್ರತಿಭಟನಾಕಾರರು ತೀವ್ರವಾಗಿ ಗಾಯಗೊಂಡಿದ್ದಾರೆ.
ಆಮ್ನೆಸ್ಟಿ ಕಚೇರಿ ಮೇಲೆ ಎಸೆಯುವ ಸಲುವಾಗಿ ಕೆಲವು ಪ್ರತಿಭಟನಾಕಾರರು ಪೆಟ್ರೋಲ್ ಬಾಟಲ್ ಗಳನ್ನು ಸ್ಥಳಕ್ಕೆ ತಂದಿದ್ದರು. ನಂತರ ಪೊಲೀಸರು ಎಚ್ಚರಿಕೆ ನೀಡಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ತಿಳಿಸಿದರು. ಎಚ್ಚರಿಕೆ ನಡುವೆಯೂ 4 ಪ್ರತಿಭಟನಾಕಾರರು ಪೆಟ್ರೋಲ್ ಬಾಟಲ್ ಗಳನ್ನು ಕಚೇರಿಯ ಗೇಟ್ ಬಳಿ ತಂದರು. ನಂತರ ಪೊಲೀಸರು ಅವರನ್ನು ಹಿಂದಕ್ಕೆ ತಳ್ಳಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಟಲಿಗಳಲ್ಲಿ ತುಂಬಿಸಿ ತಂದಿದ್ದ ಪೆಟ್ರೋಲ್ ನ್ನು ಪೆಟ್ರೋಲ್ ಬಾಂಬ್ ಗಳಾಗಿ ಬಳಸಲು ಯತ್ನ ನಡೆಸಲಾಗಿತ್ತು ಎಂದು ಶಂಕಿಸಲಾಗಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಬಾರದೆಂಬ ಉದ್ದೇಶದಿಂದ ಬೇರಾವುದೇ ದಾರಿಯಿಲ್ಲದೆ ಲಾಠಿಚಾರ್ಜ್ ಮಾಡಲೇಬೇಕಾಯಿತು. ಕೆಲವು ಕಾರ್ಯಕರ್ತರು ಸ್ಥಳದಲ್ಲಿದ್ದ ಡಿಸಿಪಿ ಮೇಲೆಯೇ ದೈಹಿಕವಾಗಿ ಹಲ್ಲೆ ನಡೆಸಲು ಯತ್ನ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.
ಘಟನೆ ವೇಳೆ 2 ಯುವತಿಯರು ಸೇರಿ 6 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ, ಓರ್ವ ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರೆ, ಮೂವರು ವಿದ್ಯಾರ್ಥಿಗಳು ಘಟನೆ ವೇಳೆ ಪ್ರಜ್ಞೆಯನ್ನು ಕಳೆದುಕೊಂಡು ಬಿದ್ದಿದ್ದರು. ನಂತರ ಪೊಲೀಸರು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು.
ಗಾಯಗೊಂಡ ವಿದ್ಯಾರ್ಥಿಗಳನ್ನು ಮಂಜುನಾಥ ರೆಡ್ಡಿ, ವೀಣಾ, ಸೋಮಶೇಖರ್, ಅಶ್ವಥ್ ಮತ್ತು ಪೃಥ್ವಿ ಎಂದು ಗುರ್ತಿಸಲಾಗಿದೆ.
ಪ್ರತಿಭಟನೆಯನ್ನು ಶಾಂತಿಯುತವಾಗಿ ಮಾಡಲು ನಿರ್ಧರಿಸಲಾಗಿತ್ತು. ಪೊಲೀಸರು ಲಾಠಿ ಚಾರ್ಜ್ ಮಾಡಿದಾಗ ಸ್ಥಳಕ್ಕೆ ಮತ್ತಷ್ಟು ವಿದ್ಯಾರ್ಥಿಗಳು ಆಗಮಿಸಿದರು. ಪ್ರಸ್ತುತ 21 ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ದೇಶದ ವಿರುದ್ಧ, ದೇಶಕ್ಕಾಗಿ ತ್ಯಾಗ ಮಾಡುತ್ತಿರುವ ಯೋಧರ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ನಮ್ಮ ಪ್ರತಿಭಟನೆಯಾಗಿತ್ತು ಎಂದು ಎಬಿವಿಪಿ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.
Advertisement