ಮಣ್ಣಿನ ಗಣೇಶನ ಬಳಕೆ;ಬೇಡಿಕೆ ಕಳೆದುಕೊಳ್ಳುತ್ತಿರುವ ಬಣ್ಣದ ಗಣಪ

ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಪ್ಲಾಸ್ಟರ್ ಆಫ್ ಪಾರಿಸ್ (ಪಿಒಪಿ)ನ ವಿಗ್ರಹಗಳಿಗೆ ನಿಷೇಧ ಹೇರಿ ಮಣ್ಣಿನ ಗಣೇಶ...
ಮಣ್ಣಿನ ಗಣಪ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪ
ಮಣ್ಣಿನ ಗಣಪ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪ
ಬೆಂಗಳೂರು: ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಪ್ಲಾಸ್ಟರ್ ಆಫ್ ಪಾರಿಸ್ (ಪಿಒಪಿ)ನ ವಿಗ್ರಹಗಳಿಗೆ ನಿಷೇಧ ಹೇರಿ ಮಣ್ಣಿನ ಗಣೇಶ ವಿಗ್ರಹಗಳನ್ನು ತಯಾರು ಮಾಡಬೇಕು ಮತ್ತು ಬಳಸಬೇಕೆಂದು ಸರ್ಕಾರ ಜನಜಾಗೃತಿ ಮೂಡಿಸುತ್ತಿದೆ. ಇನ್ನೊಂದೆಡೆ ಜನರು ಕೂಡ ಇತ್ತೀಚಿನ ದಿನಗಳಲ್ಲಿ ಬಣ್ಣಬಣ್ಣದ ಗಣೇಶನ ಮೂರ್ತಿಗಳಿಗೆ ಬದಲಾಗಿ ಮಣ್ಣಿನ ಮೂರ್ತಿಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಹೀಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಯಾರಿಸುವವರಿಗೆ ಮತ್ತು ಅದನ್ನು ಮಾರುವವರಿಗೆ ನಿರುದ್ಯೋಗದ, ವ್ಯಾಪಾರ ಕುಸಿತದ ಭೀತಿ ಎದುರಾಗಿದೆ.
ಎಂ.ಶ್ರೀನಿವಾಸರವರ ಪೂರ್ವಜರು ಮೂರ್ತಿಗಳನ್ನು ತಯಾರಿಸುವ ವ್ಯಾಪಾರದಲ್ಲಿ 70 ವರ್ಷಗಳ ಹಿಂದೆ ತೊಡಗಿದ್ದರು. ವ್ಯಾಪಾರ ಚೆನ್ನಾಗಿಯೇ ಸಾಗುತ್ತಿತ್ತು. ಬೆಂಗಳೂರಿನ ಆರ್ ವಿ ರಸ್ತೆಯ ಕೊನೆಯವರೆಗೂ ವ್ಯಾಪಾರವನ್ನು ವಿಸ್ತರಿಸಿದ್ದರು. ಆಗ ಬಣ್ಣ ಬಣ್ಣದ ಗಣಪಗಳೇ ಗ್ರಾಹಕರನ್ನು ಇಷ್ಟಪಡುತ್ತಿದ್ದವು. ನಾಲ್ಕಾರು ಮಣ್ಣಿನ ಗಣಪಗಳನ್ನು ತಯಾರಿಸಿ ಅಂಗಡಿಯ ಒಳಗೆ ಇಡುತ್ತಿದ್ದೆವು. ಮಣ್ಣಿನ ವಿಗ್ರಹಗಳಿಗಿಂತ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ವಿಗ್ರಹಗಳು ಹಗುರವಾಗಿರುತ್ತವೆ. ಆದರೆ ಇಂದು ಗ್ರಾಹಕರು ಮಣ್ಣಿನ ವಿಗ್ರಹಗಳಿಗೇ ಮೊರೆ ಹೋಗುತ್ತಾರೆ ಎನ್ನುತ್ತಾರೆ ಶ್ರೀನಿವಾಸ್ ಪುತ್ರ ಎಂ.ಶ್ರೀಧರ್.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸುವ ಗಣೇಶನ ಮೂರ್ತಿಗಳಿಗೆ ನಿಷೇಧ ಹೇರಲು ಮುಂದಾಗಿರುವುದಕ್ಕೆ ಶ್ರೀಧರ್ ಅವರಿಗೆ ತೀವ್ರ ನೋವಿದೆ. ತಮ್ಮ ವ್ಯಾಪಾರ ವಹಿವಾಟು ಕುಸಿಯುವುದಲ್ಲದೆ, ಈ ಕಲೆ ನಶಿಸಿ ಹೋಗುವ ಆತಂಕದಲ್ಲಿಯೂ ಅವರಿದ್ದಾರೆ.
ಮಣ್ಣು ಎಲ್ಲಿಂದ ತರುವುದು? ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ಎಲ್ಲ ಮಣ್ಣನ್ನು ಬಳಸಿಕೊಳ್ಳುತ್ತದೆ. ಜನರು ಮಣ್ಣಿನ ಮನೆಗಳಲ್ಲಿ ವಾಸಿಸುವುದಿಲ್ಲ. ಅಂತಹುದರಲ್ಲಿ ನಮ್ಮಲ್ಲಿ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಲು ಹೇಳುತ್ತಾರೆ. ಮಣ್ಣಿನ ವಿಗ್ರಹಗಳನ್ನು ಹೆಚ್ಚು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ, ಜೊತೆಗೆ ಅದು ಬೇಗನೆ ಮುರಿದು ಹೋಗುತ್ತದೆ. ಪ್ಲಾಸ್ಟರ್ ಆಪ್ ಪ್ಯಾರಿಸ್ ಮೂರ್ತಿಗಳನ್ನು ಸಂಗ್ರಹಿಸಿಡುವುದು ಸುಲಭ.ಜೊತೆಗೆ ಅನೇಕ ಕಲಾವಿದರಿಗೆ ಮಣ್ಣಿನ ಮೂರ್ತಿಗಳನ್ನು ರಚಿಸಲು ಗೊತ್ತಿರುವುದಿಲ್ಲ. ಈ ವರ್ಷ ನಮಗೆ ಸುಮಾರು 6 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನುತ್ತಾರೆ ಶ್ರೀಧರ್.
ಇನ್ನು ಸಣ್ಣ ಮೂರ್ತಿಗಳ ಬದಲಾಗಿ ಗಣೇಶನ ದೊಡ್ಡ ಮೂರ್ತಿಗಳಿಗೆ ಬೇಡಿಕೆ ಅಧಿಕ. ಶ್ರೀ ವಿನಾಯಕ ಶಾಪ್ ನಲ್ಲಿ 80 ಸಾವಿರ ರೂಪಾಯಿ ಮೌಲ್ಯದ 18 ಅಡಿ ಎತ್ತರದ ಗಣೇಶನ ಮೂರ್ತಿಗಳನ್ನು ತಯಾರಿಸಲಾಗಿದೆ, ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಮೂರ್ತಿಗಳನ್ನು ತಯಾರಿಸಲು ಸಾಧ್ಯವಿದ್ದು, ಮಣ್ಣಿನ ವಿಗ್ರಹಗಳಾದರೆ 5 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿಗಳನ್ನು ತಯಾರಿಸಲು ಸಾಧ್ಯವಾಗುವುದಿಲ್ಲ. ಅದು ಮುರಿಯುತ್ತದೆ. 
ಮಣ್ಣಿನ ಮೂರ್ತಿ ತಯಾರಿಸುವ ರಾಮಾನುಜಮ್ ಹೇಳುವ ಪ್ರಕಾರ, ಗಣೇಶ ಮೂರ್ತಿ ತಯಾರಿಸಲು ತುಂಬಾ ಸಮಯ ಹಿಡಿಯುತ್ತದೆ. ಮಾಡುವಾಗ ಅರ್ಧದಲ್ಲಿ ಮುರಿದು ಹೋಗಬಹುದು. ಮತ್ತೆ ಮಾಡಬೇಕಾಗಿ ಬರಬಹುದು. ತಳಮಟ್ಟದ ಭಾಗ ಗಟ್ಟಿಯಾಗಿರಬೇಕು.ಒಂದು ಗಟ್ಟಿಯಾದ ಶಾಶ್ವತ ಗಣೇಶನ ಮೂರ್ತಿ ಮಾಡಬೇಕಾದರೆ 6 ತಿಂಗಳು ಹಿಡಿಯಬಹುದು ಎನ್ನುತ್ತಾರೆ.
ರಸೆಲ್ ಮಾರ್ಕೆಟ್ ನ ಮೂರ್ತಿ ತಯಾರಕರದ್ದು ಕೂಡ ಇದೇ ಅಭಿಪ್ರಾಯ. ''ಮೂರ್ತಿಗಳನ್ನು ನಗರದ ಕೆರೆಗಳಲ್ಲಿ ವಿಸರ್ಜನೆ ಮಾಡಿದ ನಂತರ ಬಿಬಿಎಂಪಿ ಸ್ವಚ್ಛಗೊಳಿಸಬೇಕು. ಅದನ್ನು ಮಾಡಿದರೆ ಸಮಸ್ಯೆ ಬರುವುದಿಲ್ಲ. ಆದರೆ ಪಾಲಿಕೆ ಆ ಕೆಲಸ ಮಾಡುವುದಿಲ್ಲ ಎನ್ನುತ್ತಾರೆ ಮೂರ್ತಿ ಮಾರಾಟ ಅಂಗಡಿ ಮಾಲಿಕ ಅರುಣ್ ಎನ್. 
ರಸೆಲ್ ಮಾರ್ಕೆಟ್ ನ ಮತ್ತೊಬ್ಬ ವ್ಯಾಪಾರಿ ಜಗದೀಶ್ ಚೆಟ್ಟಿಯಾರ್ ಈ ವರ್ಷ ಕೊಂಚ ನಿರಾಳರಾಗಿದ್ದಾರೆ. ಹಳೆ ಮೂರ್ತಿಗಳನ್ನು ಮಾರಾಟ ಮಾಡಲು ಬಿಬಿಎಂಪಿ ಬಿಟ್ಟಿದೆ. ಇನ್ನೂ ಸಂಪೂರ್ಣ ನಿಷೇಧ ಹೇರಿಲ್ಲ. ಅವರು ಮುಂಬೈಯಿಂದ ಮೂರ್ತಿಗಳನ್ನು ತರಿಸಿದ್ದಾರೆ.
ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ನಗರದ ಅನೇಕ ರಸ್ತೆಗಳಲ್ಲಿ ಗಣೇಶನ ವಿಗ್ರಹಗಳು ತುಂಬಿದ್ದು ಕೆಲವು ಸೆಂಟಿ ಮೀಟರ್ ಗಳಿಂದ 20 ಅಡಿ ಎತ್ತರದವರೆಗಿನ ಮೂರ್ತಿಗಳು ಬಂದಿವೆ. ಕೆಲವು ಸಾವಿರದಿಂದ 50 ಲಕ್ಷದವರೆಗಿನ ಮೂರ್ತಿಗಳು ಸಿಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com