ವೈಷ್ಣವ ಧರ್ಮದಂತೆ ಜಯಾಲಲಿತಾ ಅವರ ಮರು ಅಂತ್ಯ ಸಂಸ್ಕಾರ!

ಕಳೆದ ಡಿಸೆಂಬರ್ 5ರಂದು ನಿಧನರಾದ ತಮಿಳುನಾಡು ಸಿಎಂ ಜಯಲಲಿತಾ ಅವರ ಮರು ಅಂತ್ಯ ಸಂಸ್ಕಾರವನ್ನು ಮಂಗಳವಾರ ಅವರ ಸಂಬಂಧಿಕರು ಶ್ರೀರಂಗಪಟ್ಟದಣದಲ್ಲಿ ನೆರವೇರಿಸಿದ್ದಾರೆ.
ಶ್ರೀರಂಗಪಟ್ಟದಣಲ್ಲಿ ನಡೆದ ಜಯಾ ಮರು ಅಂತ್ಯ ಸಂಸ್ಕಾರ
ಶ್ರೀರಂಗಪಟ್ಟದಣಲ್ಲಿ ನಡೆದ ಜಯಾ ಮರು ಅಂತ್ಯ ಸಂಸ್ಕಾರ

ಮೈಸೂರು: ಕಳೆದ ಡಿಸೆಂಬರ್ 5ರಂದು ನಿಧನರಾದ ತಮಿಳುನಾಡು ಸಿಎಂ ಜಯಲಲಿತಾ ಅವರ ಮರು ಅಂತ್ಯ ಸಂಸ್ಕಾರವನ್ನು ಮಂಗಳವಾರ ಅವರ ಸಂಬಂಧಿಕರು ಶ್ರೀರಂಗಪಟ್ಟದಣದಲ್ಲಿ ನೆರವೇರಿಸಿದ್ದಾರೆ.

ಶ್ರೀರಂಗಪಟ್ಟಣ ಪಶ್ಚಿಮವಾಹಿನಿಯಲ್ಲಿರುವ ಲಕ್ಷ್ಮಿನರಸಿಂಹಸ್ವಾಮಿ ಮಂಟಪದಲ್ಲಿ ಜಯಲಲಿತಾ ಸಂಬಂಧಿ (ಜಯಲಲಿತಾ ಅವರ ಮಲ ಸಹೋದರ ವಾಸುದೇವನ್‌ ಅವರ ಚಿಕ್ಕಮ್ಮನ ಮಗ) ವರದರಾಜನ್‌ ಎಂಬುವವರು ಮರು  ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಚೆನ್ನೈನ ಮರೀನಾ ಬೀಚ್ ತಡದಲ್ಲಿ ನಡೆದ ಜಯಾ ಅವರ ಅಂತ್ಯ ಸಂಸ್ಕಾರದಿಂದ ತೃಪ್ತರಾಗದ ಜಯಾ ಸಂಬಂಧಿಕರು ಅವರ ಮೋಕ್ಷ ಪ್ರಾಪ್ತಿಗಾಗಿ ಮತ್ತೆ ಮರು ಅಂತ್ಯ ಸಂಸ್ಕಾರ ನಡೆಸಿದ್ದಾರೆ  ಎಂದು ತಿಳಿದುಬಂದಿದೆ.

ಮೈಸೂರಿನ ವಾದ್ಯಾರ್‌ ವಯ್ಯಾಕರಣಿ ರಾಮಾನುಜನ್‌ ಎಂಬುವರ ಮಾರ್ಗದರ್ಶನದಲ್ಲಿ ಅಂತ್ಯಸಂಸ್ಕಾರದ ಅಂತಿಮ ವಿಧಿ, ವಿಧಾನಗಳನ್ನು ನೆರವೇರಿಸಲಾಗಿದ್ದು, ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಮುನ್ನ ಕಾವೇರಿ ನದಿಯಲ್ಲಿ ಮಿಂದ  ವರದರಾಜನ್‌, ದರ್ಬೆ ಮತ್ತು ಬೆರಣಿ ರಾಶಿಗೆ ಪೂಜೆ ಸಲ್ಲಿಸಿದರು. 68 ವರ್ಷದ ಕೋಮಲವಲ್ಲಿ (ಜಯಲಲಿತಾ) ಹೆಸರಿನಲ್ಲಿ 68 ದರ್ಬೆಗಳನ್ನು ಉಪಯೋಗಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಬಳಿಕ ಕಾವೇರಿ ನದಿಯಲ್ಲಿ ಚಿತಾ  ಭಸ್ಮವನ್ನು ಬಿಟ್ಟು ಜಯಾ ಆವರ ಆತ್ಮಕ್ಕೆ ಶಾಂತಿ ಕೋರಲಾಗಿದೆ.

ಪ್ರಮುಖವಾಗಿ ಅಂತ್ಯಕ್ರಿಯೆ ವಿಧಿ, ವಿಧಾನಗಳು ನಡೆಯುವಾಗ ವೈದಿಕರು ಎಲ್ಲಿಯೂ ಜಯಲಲಿತಾ ಹೆಸರು ಪ್ರಸ್ತಾಪಿಸಲಿಲ್ಲ. ‘ಕೋಮಲವಲ್ಲಿ’ ಎಂಬ ಹೆಸರಿನಲ್ಲೇ ಎಲ್ಲ ಆಚರಣೆಗಳನ್ನು ನಡೆಸಿದರು. ಜಯಲಲಿತಾ ಮೃತಪಟ್ಟು 9  ದಿನಗಳು ಕಳೆದಿದ್ದು. 12ನೇ ದಿನ ‘ತಿಥಿ’ ಮತ್ತು 13ನೇ ದಿನ ಸಾಂಪ್ರದಾಯಿಕ ‘ಶುಭ‘ ಆಚರಣೆ ನಡೆಯಲಿದೆ ಎಂದು ವೈದಿಕರು ತಿಳಿಸಿದರು.

ಇನ್ನು ಈ ಬಗ್ಗೆ ಮಾತನಾಡಿರುವ ಜಯಲಲಿತಾ ಅವರ ಸಹೋದರ ಸಂಬಂಧಿ ರಾಮಾನುಜನ್ ಅವರು, "ವೈಷ್ಣವ ಪದ್ಧತಿಯಂತೆ ಜಯಲಲಿತಾ ಮೃತದೇಹದ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆದಿಲ್ಲ. ಅಗ್ನಿಯಲ್ಲಿ ದಹಿಸುವ ಬದಲು  ಪೆಟ್ಟಿಗೆಯಲ್ಲಿಟ್ಟು ಮಣ್ಣಿನಲ್ಲಿ ಹೂಳಲಾಗಿದೆ. ಹಾಗಾಗಿ ಅವರ ಆತ್ಮಕ್ಕೆ ಮೋಕ್ಷ ಸಿಕ್ಕಿಲ್ಲ. ಜಯಲಲಿತಾ ಮಲ ಸಹೋದರ ವಾಸುದೇವನ್‌ ಅವರ ಆಶಯದಂತೆ ಅವರ ಚಿಕ್ಕಮ್ಮನ ಮಗ ವರದರಾಜನ್‌ ಅಂತ್ಯಕ್ರಿಯೆಯ ವಿಧಿ,  ವಿಧಾನಗಳನ್ನು ನೆರವೇರಿಸಿದ್ದಾರೆ. ಇದೇ ಬುಧವಾರ ಮತ್ತು ಗುರುವಾರ ಏಕದಶಾ ಶ್ರಾದ್ಧ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

ವಾಸುದೇವನ್ ಅವರು ವರದರಾಜನ್ ಅವರ ದೊಡ್ಡಮ್ಮನ ಮಗನಾಗಿದ್ದು, ಅವರು ನೀಡಿದ್ದ ಲಿಖಿತ ಪತ್ರದ ಆಧಾರದ ಮೇಲೆ ಜಯಾ ಅವರ ಅಂತ್ಯಕ್ರಿಯೆಯನ್ನು ವರದರಾಜನ್ ಅವರು ನೆರವೇರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com