ಬೆಂಗಳೂರು: ಸಿಮ್ ಕಾರ್ಡ್ ಅಕ್ರಮ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈ ಆರೋಪಿಗಳು ಗ್ರಾಹಕರಿಂದ ಸಿಮ್ ಕಾರ್ಡ್ ಗಾಗಿ ಪಡೆಯುತ್ತಿದ್ದ ದಾಖಲೆಗಳನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರು. ಗ್ರಾಹಕರು ನೀಡಿದ ಅದೇ ದಾಖಲೆ ಆಧಾರದ ಮೇಲೆ ಬೇರೆಯವರಿಗೆ ಹೆಚ್ಚಿನ ಹಣ ಪಡೆದು ಸಿಮ್ ಕಾರ್ಡ್ ನೀಡುತ್ತಿದ್ದರು. ಯಾರದೋ ಹೆಸರಲ್ಲಿ ಮತ್ಯಾರಿಗೋ ಸಿಮ್ ಕಾರ್ಡ್ ನೀಡುತ್ತಿದ್ದರು.
ಸಂಪಂಗಿರಾಮನಗರದ ಸಂತೋಷ್(24) ಹಾಗೂ ಸತೀಶ್(34) ಬಂಧಿತರು. ಆರೋಪಿಗಳಿಂದ ರು.1.41 ಲಕ್ಷ ನಗದು, ವಿವಿಧ ಕಂಪೆನಿಗಳ ಸಿಮ್ ಕಾರ್ಡ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಇಬ್ಬರು ಆರೋಪಿಗಳು ಕಬ್ಬನ್ ಪೇಟೆಯಲ್ಲಿ ಪವನ್ ಎಂಟರ್ ಪ್ರೈಸೆಸ್ ಮತ್ತು ಮುನೇಶ್ವರ ಎಂಟರ್ ಪ್ರೈಸಸ್ ಶಾಪ್ ಇಟ್ಟುಕೊಂಡಿದ್ದು, ಐಟಿಯಾ ಮತ್ತು ರಿಲಯನ್ಸ್ ಕಂಪೆನಿಯ ಸಿಮ್ ಕಾರ್ಡ್ ಗಳ ಸಗಟು ವಿತರಕರಾಗಿದ್ದರು.