10 ಭ್ರಷ್ಟ ಆರೋಪಿಗಳ ಪೈಕಿ 7 ಮಂದಿಗೆ ಶಿಕ್ಷೆಯೇ ಆಗುವುದಿಲ್ಲ!

ದಾಖಲಾಗುವ ಶೇ.100 ರಲ್ಲಿ ಶೇ.70 ಪ್ರಕರಣಗಳಲ್ಲಿ ಭ್ರಷ್ಟ ಆರೋಪಿಗಳಿಗೆ ಶಿಕ್ಷೆಯೇ ಆಗುವುದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದಾಖಲಾಗುವ ಶೇ.100 ರಲ್ಲಿ ಶೇ.70 ಪ್ರಕರಣಗಳಲ್ಲಿ ಭ್ರಷ್ಟ ಆರೋಪಿಗಳಿಗೆ ಶಿಕ್ಷೆಯೇ ಆಗುವುದಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

ದೂರುದಾರರು ಹಾಗೂ ಸಾಕ್ಷಿದಾರರ ಹಗೆತನ, ಸಾಕ್ಷ್ಯಾಧಾರಗಳ ಕೊರತೆ, ವಿಚಾರಣೆಯಲ್ಲಿ ವಿಳಂಬ ನೀತಿಯಿಂದಾಗಿ ಸಾಕಷ್ಟು ಪ್ರಕರಣಗಳು ಕೈಬಿಟ್ಟು ಹೋಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ದಾಖಲಾಗುವ ಸಾಕಷ್ಟು ಪ್ರಕರಣಗಳು ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ದಾಖಲಾಗುತ್ತಿದ್ದು, ಇದರಿಂದಾಗಿ ಆರೋಪಿಗಳು ಶಿಕ್ಷೆಯೇ ಇಲ್ಲದೆ ಹೊರನಡೆಯುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ನ್ಯಾಯಾಲಯಕ್ಕೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡುವುದರಲ್ಲಿ ವಿಫಲವಾಗುತ್ತಿರುವುದೂ ಕೂಡ ಆರೋಪಿಗಳು ತಪ್ಪಿಸಿಕೊಳ್ಳಲು ಕಾರಣವಾಗುತ್ತಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಶಿಕ್ಷೆಯಾಗದೆಯೇ ಆರೋಪಿಗಳು ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳಲ್ಲಿ 2014ಕ್ಕೆ ಹೋಲಿಕೆ ಮಾಡಿದರೆ 2015ರಲ್ಲಿ ಶೇ. 5 ರಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.

ಲೋಕಾಯುಕ್ತ ಸಂಖ್ಯಾಶಾಸ್ತ್ರದ ಪ್ರಕಾರ ಶಿಕ್ಷೆಯಾಗದೆ ತಪ್ಪಿಸಿಕೊಂಡಿರುವ ಪ್ರಕರಣಗಳು, 2013 ರಲ್ಲಿ ಶೇ. 31 ರಷ್ಟಿದ್ದರೆ 2014 ರಲ್ಲಿ 29 ಹಾಗೂ 2015 ಶೇ.34 ರಷ್ಟಿದೆ. ಸಾಕ್ಷ್ಯಾಧಾರ ಕೊರತೆ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಖುಲಾಸೆ ಗೊಂಡಿರುವ ಪ್ರಕರಣಗಳು 2013 ಶೇ.36, 2014 ಶೇ.55 ಹಾಗೂ 2015 ಶೇ. 56 ರಷ್ಟಿದೆ ಎಂದು ಹೇಳಲಾಗಿದೆ.  

ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಕಾರ್ಯಾಚರಣೆ ನಡೆಸಿ ನೇರವಾಗಿ ದಾಖಲು ಮಾಡಿಕೊಳ್ಳುವ ಪ್ರಕರಣಗಳನ್ನು ಕೈಬಿಡುವುದು ಅತೀ ವಿರಳ. 2014ಕ್ಕೆ ಹೋಲಿಕೆ ಮಾಡಿದರೆ 2015ರಲ್ಲಿ ವಿಚಾರಣೆ ಕೈಬಿಡುವ ಪ್ರಕರಣಗಳು ಶೇ.10ರಷ್ಟು ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಬಾಕಿ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥ ಪಡಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಬಾಕಿ ಇರುವ ಪ್ರಕರಣಗಳತ್ತ ಮುಖ ಮಾಡಿದ್ದಾರೆ. ಶೀಘ್ರಗತಿಯ ಪ್ರಕರಣಗಳ ಇತ್ಯರ್ಥಕ್ಕಾಗಿ ಮೂರು ಹೊಸ ವಿಶೇಷ ನ್ಯಾಯಾಲಯಗಳನ್ನು ನೇಮಿಸಿಕೊಂಡಿದ್ದು, ಇದರಲ್ಲಿ ಬೆಂಗಳೂರಿನ ಪ್ರಕರಣ ಇತ್ಯರ್ಥಕ್ಕೆ ಒಂದು ನ್ಯಾಯಾಲಯವಿದೆ. ಈ ರೀತಿಯ ಬೆಳವಣಿಗೆ ಪ್ರಸ್ತುತ ವರ್ಷದಲ್ಲಿ ಶಿಕ್ಷೆಯಾಗದೆ ತಪ್ಪಿಸಿಕೊಳ್ಳುವ ಆರೋಪಿಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಒಂದು ವಿಭಾಗ ಅಧಿಕಾರಿಗಳಿಗೆ ಸಹಾಯಕವಾಗಿದ್ದು, ಇಂತಹ ಕಾಯ್ದೆಗಳಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದಾರೆಂದು ಲೋಕಾಯುಕ್ತದ ನ್ಯಾಯಾಂಗ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com