
ಬೆಂಗಳೂರು: ದಿಟ್ಟ ಹೋರಾಟ ನಡೆಸಿ ಎದುರಾಗುವ ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾದ ಅಧಿಕಾರಿಗಳೇ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.
ಕೆಲ ದಿನಗಳಿಂದ ರಾಜ್ಯದಲ್ಲಾಗುತ್ತಿರುವ ಬೆಳವಣಿಗೆಯನ್ನೇ ಇದಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ, ಐಎಎಸ್ ಅಧಿಕಾರಿ ಡಿ.ಕೆ. ರವಿ, ಮಂಗಳೂರು ಡಿವೈಎಸ್ಪಿ ಗಣಪತಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು.
ಅಧಿಕಾರಿಗಳೇಕೆ ಆತ್ಮಹತ್ಯೆಯಂತಹ ಪ್ರಯತ್ನಗಳಿಗೆ ಕೈಹಾಕುತ್ತಿದ್ದಾರೆ ಎಂಬುದಕ್ಕೆ ಕೆಲ ಮಾನಸಿಕ ರೋಗ ತಜ್ಞರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಪ್ರತೀಯೊಂದು ಆತ್ಮಹತ್ಯೆಯ ಹಿಂದೆ ಒಂದಲ್ಲ ಒಂದು ರೀತಿಯ ವೈಯಕ್ತಿಕ ಕಾರಣಗಳಿರುತ್ತವೆ. ಕೆಲವರು ಯೋಜನೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದರಂತೆ ಡೆತ್ ನೋಟ್ ನ್ನು ಬರೆದು ಸಾವಿಗೆ ಕಾರಣವನ್ನು ತಿಳಿಸಿರುತ್ತಾರೆ. ಇನ್ನು ಕೆಲವರು, ಒತ್ತಡಕ್ಕೆ ಮಣಿದು ಆತ್ಮಹತ್ಯೆಗೆ ಶರಣಾಗುತ್ತಾರೆ. ಮುಂದೆ ಯಾವುದೇ ದಾರಿಯಿಲ್ಲ ಎಂದು ಅನಿಸಿದಾಗ ವ್ಯಕ್ತಿ ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಾನೆ. ಇದು ನಿಜಕ್ಕೂ ಅಪಾಯಕಾರಿಯಾದದ್ದು ಎಂದು ಪೀಪಲ್ ಟ್ರೀ ಆಸ್ಪತ್ರೆಯ ಮಾನಸಿಕ ರೋಗ ಸಲಹೆಗಾರ ಡಾ. ಸತೀಶ್ ರಾಮಯ್ಯ ಅವರು ಹೇಳಿದ್ದಾರೆ.
ಕೇವಲ 4-5 ದಿನಗಳ ಅಂತರದಲ್ಲೇ ಎರಡು ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದೆ. ಅಂಧಾನುಕರಣೆಯ ರೋಗ ಕೂಡ ಇಲ್ಲಿ ಕಾರಣವಾಗಬಹುದು. ಮಾನಸಿಕ ರೋಗದಿಂದ ಬಳಲುತ್ತಿದ್ದವರು ಮತ್ತೊಬ್ಬರನ್ನು ಅನುಕರಣೆ ಮಾಡಲು ಯತ್ನಿಸುತ್ತಾರೆ. ಈ ಹಿಂದಷ್ಟೇ ಕಲ್ಲಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒತ್ತಡದ ಪರಿಸ್ಥಿತಿಯಲ್ಲಿದ್ದಾಗ ಮಾನಸಿಕ ರೋಗದಿಂದ ಬಳಲುತ್ತಿದ್ದರುವರು ಅನುಕರಣೆ ಮಾಡಲು ಯತ್ನಿಸುತ್ತಾರೆ. ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಅಗತ್ಯವಿದೆ. ಅಮೆರಿಕದಲ್ಲಿ ಒಂದು ಆತ್ಮಹತ್ಯೆ ಪ್ರಕರಣ ದಾಖಲಾದರೂ, ಇಲಾಖೆಯ ಸಿಬ್ಬಂದಿಗಳನ್ನು ಕರೆದು ಮಾತುಕತೆ ನಡೆಸುತ್ತಾರೆ. ಇಂತಹದ್ದೇ ಬೆಳವಣಿಗೆ ನಮ್ಮಲ್ಲೂ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.
ಕೆಲಸದಲ್ಲಿ ಉಂಟಾಗುವ ಕಿರಿಕಿರಿ, ಅಸಹಾಯಕತೆ, ಬೇಸರಗಳು ವ್ಯಕ್ತಿಯನ್ನು ಒತ್ತಡದಲ್ಲಿ ಸಿಲುಕುವಂತೆ ಮಾಡುತ್ತದೆ. ಈ ಕಾರಣಗಳಿಂದಲೇ ವ್ಯಕ್ತಿ ಇಂತಹ ಪ್ರಯತ್ನಗಳಿಗೆ ಕೈಹಾಕುತ್ತಾನೆ. ಕುಟುಂಬದ ಬೆಂಬಲ ಹಾಗೂ ಸ್ನೇಹಿತರ ಬೆಂಬಲಗಳು ಇಲ್ಲದಿದ್ದರೆ ವ್ಯಕ್ತಿ ದುರ್ಬಲವಾಗುತ್ತಾನೆ. ಯಾವುದೇ ವ್ಯಕ್ತಿಯಾದರೂ ದಿನಕ್ಕೆ ಒಂದು ಗಂಟೆಯಾದರೂ ಕುಟುಂಬದೊಂದಿಗೆ ಮಾತಕತೆ ನಡೆಸುತ್ತಿರಬೇಕು. ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸುವುದರಿಂದ ಒತ್ತಡ ಕಡಿಮೆಯಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಹಾಗೂ ಮನೋವಿಜ್ಞಾನ ಮಾಜಿ ಪ್ರಾಧ್ಯಾಪಕ ಡಾ.ಎಂ.ಎಸ್ ತಿಮ್ಮಪ್ಪ ಅವರು ಹೇಳಿದ್ದಾರೆ.
ಅಧಿಕಾರಿ ಪ್ರಾಮಾಣಿಕನಾಗಿದ್ದರೆ, ಪ್ರಕರಣಗಳನ್ನು ನಿಭಾಯಿಸುವುದರಲ್ಲಿ ಅವರು ಅತೀ ಸೂಕ್ಷ್ವವಾಗಿರುತ್ತಾರೆ. ಇಂತಹ ಅಧಿಕಾರಿಗಳು ಪ್ರಭಾವ ಶಾಲಿ, ರಾಜಕೀಯದಲ್ಲಿರುವ ಉನ್ನತಾಧಿಕಾರಿಗಳ ಪ್ರಕರಣಗಳನ್ನೂ ನಿಭಾಯಿಸಿರುತ್ತಿರುತ್ತಾರೆ. ಇಂತಹ ಅಧಿಕಾರಿಗಳನ್ನು ಸರ್ಕಾರ ಬೆಂಬಲಿಸಬೇಕೆಂದು ತಿಮ್ಮಪ್ಪ ಅವರು ಹೇಳಿದ್ದಾರೆ.
ಹೆಸರು ಸೂಚಿಸದೆಯೇ ರಾಜ್ಯದ ಬೆಳವಣಿಗೆ ಕುರಿತಂತೆ ಮಾತನಾಡಿರುವ ಹಿರಿಯ ಮನೋತಜ್ಞರೊಬ್ಬರು. ಇಲಾಖೆಯಲ್ಲಿ ಮನೋವೈದ್ಯಶಾಸ್ತ್ರದ ಶಿಬಿರಗಳನ್ನು ಏರ್ಪಡಿಸುವಂತೆ ಈ ಹಿಂದೆಯೇ ಅಧಿಕಾರಿಗಳ ಬಳಿ ಮನವಿ ಮಾಡಿದ್ದೆ. ಆದರೆ, ಅವರು ಸಕ್ಕರೆ ಕಾಯಿಲೆಯ ಶಿಬಿರದೊಂದಿಗೆಯೇ ಈ ಶಿಬಿರವನ್ನು ಆಯೋಜಿಸಿ ಎಂದು ತಿರಸ್ಕಾರ ಭಾವದಿಂದ ಹೇಳಿದರು ಎಂದು ಹೇಳಿಕೊಂಡಿದ್ದಾರೆ.
ಪ್ರತೀ ಬಾರಿಯೂ ಸರ್ಕಾರಿ ಇಲಾಖೆಯ ಅಧಿಕಾರಿಗಳು ಆತ್ಮಹತ್ಯೆಗೆ ಯತ್ನಿಸಿ, ಸಾವನ್ನಪ್ಪುತ್ತಿರುವುದು ಸಾಮಾನ್ಯವಾಗಿ ಹೋಗಿದೆ. ಆತ್ಮಹತ್ಯೆಗೆ ಹಿರಿಯ ಅಧಿಕಾರಿಗಳು, ರಾಜಕೀಯ ಗಣ್ಯರು ಕಾರಣವಾಗಬಹುದು. ಅಥವಾ ಸಾಕಷ್ಟು ಪ್ರಕರಣಗಳು ಕುಟುಂಬದ ಸಮಸ್ಯೆಗಳಿಂದಲೂ ಆಗುತ್ತದೆ. ಅಧಿಕಾರಿಯ ಸಾವಿಗೆ ಹಿರಿಯ ಅಧಿಕಾರಿಗಳು, ರಾಜಕೀಯ ನಾಯಕರೇ ಕಾರಣರೆಂದು ನಾನು ಹೇಳುತ್ತಿಲ್ಲ. ಪೊಲೀಸ್ ಅಧಿಕಾರಿಯಾಗುವುದಕ್ಕೂ ಮುನ್ನ ಅವರು ಒಬ್ಬ ಮನುಷ್ಯರಾಗಿರುತ್ತಾರೆಂಬುದನ್ನು ತಿಳಿಯಬೇಕೆಂದು ನಿಮ್ಹಾನ್ಸ್ ಹಿರಿಯ ಮನೋವಿಜ್ಞಾನಿ ಹೇಳಿಕೊಂಡಿದ್ದಾರೆ.
Advertisement