
ಕಲಬುರ್ಗಿ: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ ವಸತಿ ನಿಲಯದಲ್ಲಿ ಕೇರಳ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದಿದೆ ಎನ್ನಲಾಗುತ್ತಿದ್ದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಮೂವರು ವಿದ್ಯಾರ್ಥಿನಿಯರ ಪೈಕಿ ಓರ್ವ ವಿದ್ಯಾರ್ಥಿಗೆ ಶುಕ್ರವಾರ ಜಾಮೀನು ಮಂಜೂರಾಗಿದೆ.
ಕೃಷ್ಣಪ್ರಿಯಾ ಎಂಬ ವಿದ್ಯಾರ್ಥಿನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಇನ್ನಿಬ್ಬರು ವಿದ್ಯಾರ್ಥಿನಿಯರಾದ ಅಥಿರಾ ಮತ್ತು ಲಕ್ಷ್ಮೀ ಎಂಬುವವರಿಗೆ ಜಾಮೀನು ನಿರಾಕರಿಸಿ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಿದೆ.
ಎಫ್ಐಆರ್ ನಲ್ಲಿ ಲಕ್ಷ್ಮಿ ಮತ್ತು ಅಥಿರಾ ಇಬ್ಬರೂ ಸಂತ್ರಸ್ತ ವಿದ್ಯಾರ್ಥಿನಿಗೆ ಬಲವಂತವಾಗಿ ಟಾಯ್ಲೆಟ್ ಕ್ಲೀನರ್ ನ್ನು ಕುಡಿಸಿದ್ದರು ಎಂದು ಹೇಳಲಾಗಿದೆ. ಇದರ ಅರ್ಥ ಲಕ್ಷ್ಮಿ ಹಾಗೂ ಅಥಿರಾ ರ‍್ಯಾಗಿಂಗ್ ನಲ್ಲಿ ನೇರವಾಗಿ ಭಾಗಿಯಾಗಿರುವುದು ತಿಳಿದುಬಂದಿದೆ. ಇನ್ನು ಕೃಷ್ಣ ಪ್ರಿಯಾ ಅಶ್ವಥಿಗೆ ಡ್ಯಾನ್ಸ್ ಹಾಗೂ ಕಪ್ಪೆಯಂತೆ ಜಿಗಿಯುವಂತೆ ತಿಳಿಸಿದ್ದಾರೆ. ಆದರೆ, ಬಲವಂತ ಮಾಡಿರುವುದಾಗಿ ಅಶ್ವಥಿ ಹೇಳಿಕೊಂಡಿಲ್ಲ. ಹೀಗಾಗಿ ನ್ಯಾಯಾಲಯ ಕೃಷ್ಣಪ್ರಿಯಾಗೆ ಜಾಮೀನು ಮಂಜೂರು ಮಾಡುತ್ತಿದ್ದು, ಅಥಿರಾ ಹಾಗೂ ಲಕ್ಷ್ಮೀಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸುತ್ತಿದೆ ಎಂದು ನ್ಯಾಯಾಧೀಶೆ ಎಸ್. ಪ್ರೇಮಾವತಿಯವರು ಹೇಳಿದ್ದಾರೆ.
ಕೃಷ್ಣಪ್ರಿಯಾ ಇಬ್ಬರು ಸ್ಥಳೀಯರ ಶ್ಯೂರಿಟಿಯೊಂದಿಗೆ ರು. 10 ಲಕ್ಷ ಬಾಂಡ್ ನ್ನು ನ್ಯಾಯಾಲಯಕ್ಕೆ ನೀಡುವಂತೆ ನ್ಯಾಯಾಲಯ ತಿಳಿಸಿದ್ದು, ಮುಂದಿನ ವಿಚಾರಣೆಯನ್ನು ಜು.22ಕ್ಕೆ ಮುಂದೂಡಿದೆ.
ಕೃಷ್ಣಪ್ರಿಯಾ ಮುಗ್ಧೆ, ಆಕೆಗೆ ಏನು ತಿಳಿದಿಲ್ಲ: ಸಹೋದರಿ
ನನ್ನ ಅಕ್ಕ ಯಾವ ಕಾರಣಕ್ಕೆ ಓದುವುದನ್ನು ನಿಲ್ಲಿಸಬೇಕು? ಆಕೆ ಮಾಡಿದ ತಪ್ಪಾದರೂ ಏನು? ಎಂದು ಕೃಷ್ಣಪ್ರಿಯಾ ಸಹೋದರಿ ಪ್ರಶ್ನಿಸಿದ್ದಾರೆ.
ಕೃಷ್ಣಪ್ರಿಯಾ ಬಂಧನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕೃಷ್ಣಪ್ರಿಯಾ ಮುಗ್ಧೆಯಾಗಿದ್ದು, ಆಕೆಗೆ ಏನು ತಿಳಿದಿಲ್ಲ. ನನ್ನ ಅಕ್ಕ ಅದೇ ಕಾಲೇಜಿನಲ್ಲಿಯೇ ಶಿಕ್ಷಣವನ್ನು ಮುಂದುವರೆಸಲಿದ್ದಾಳೆ. ರ‍್ಯಾಗಿಂಗ್ ನಲ್ಲಿ ನನ್ನ ಅಕ್ಕ ಭಾಗಿಯೇ ಆಗಿಲ್ಲ ಎಂದ ಮೇಲೆ ಅವಮಾನ ಮತ್ತು ಕಿರಿಕಿರಿ ಎಂಬ ಪ್ರಶ್ನೆಗಳು ಉದ್ಭವಿಸುವುದೆಲ್ಲಿಂದ?
ಅಶ್ವಥಿ ಪ್ರಸ್ತುತ ಆಸ್ಪತ್ರೆಯಲ್ಲಿದ್ದು, ಆಕೆಯ ಆರೋಗ್ಯ ಪರಿಸ್ಥಿತಿ ಕಂಡು ಹಲವರಿಗೆ ಅನುಕಂಪ ಬರುತ್ತಿದೆ. ಹೀಗಾಗಿಯೇ ಘಟನೆ ಇಷ್ಟೊಂದು ತೀವ್ರಗೊಂಡಿದೆ. ನ್ಯಾಯಾಲಯ ನಮಗೆ ನ್ಯಾಯ ಒದಗಿಸುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ.
Advertisement