ಸಿದ್ದರಾಮಯ್ಯ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗೆ ಅಮಾನತು ಶಿಕ್ಷೆ

ಅಧಿಕಾರಿಗಳ ಸರಣಿ ಆತ್ಮಹತ್ಯೆಯಿಂದಾಗಿ ಸಾಕಷ್ಟು ವಿರೋಧಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಅಧಿಕಾರಿಯೊಬ್ಬರ ವಿರುದ್ಧ ತೆಗೆದುಕೊಂಡಿರುವುದು ಕ್ರಮ ಸಾಕಷ್ಟ...
ಪೊಲೀಸ್ ಇನ್ಸ್ ಪೆಕ್ಟರ್ ಜಿ.ಎನ್ ಮೋಹನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
ಪೊಲೀಸ್ ಇನ್ಸ್ ಪೆಕ್ಟರ್ ಜಿ.ಎನ್ ಮೋಹನ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಮೈಸೂರು: ಅಧಿಕಾರಿಗಳ ಸರಣಿ ಆತ್ಮಹತ್ಯೆಯಿಂದಾಗಿ ಸಾಕಷ್ಟು ವಿರೋಧಕ್ಕೆ ಗುರಿಯಾಗಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಅಧಿಕಾರಿಯೊಬ್ಬರ ವಿರುದ್ಧ ತೆಗೆದುಕೊಂಡಿರುವುದು ಕ್ರಮ ಸಾಕಷ್ಟು ವಿರೋಧಕ್ಕೆ ಎಡೆಮಾಡಿಕೊಟ್ಟಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಜಿ.ಎನ್ ಮೋಹನ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಾನತು ಶಿಕ್ಷೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಮೋಹನ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ಅಧಿಕಾರಿ ಇದೀಗ ಅಮಾನತು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಮೂರು ವರ್ಷದ ಹಿಂದೆ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ನಜರ್ ಬಾದ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಿ.ಎನ್. ಮೋಹನ್ ಅವರ ವಿರುದ್ಧ ಸಿದ್ದರಾಮಯ್ಯ ಅವರು ದ್ವೇಷ ಸಾಧಿಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಅಧಿಕಾರಿಯ ವಿರುದ್ಧ ದ್ವೇಷ ಬೆಳೆಸಿಕೊಂಡು ಬಂದಿದ್ದ ಸಿದ್ದರಾಮಯ್ಯ ಅವರು, ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲು ಮಾಡಿದ ಕೆಲಸ ಮೋಹನ್ ಅವರನ್ನು ಅಮಾನತು ಮಾಡಿರುವುದು. ಸತತ ಒಂದೂವರೆ ವರ್ಷಗಳ ಕಾಲ ಮೋಹನ್ ಅವರು ಅಮಾನತು ಶಿಕ್ಷೆ ಅನುಭವಿಸಿದ್ದಾರೆ.

ಶಿಕ್ಷೆ ಅನುಭವಿಸಿದ ಮತ್ತೆ ಸೇವೆಗೆ ಬಂದರೂ ಅಧಿಕಾರಿಯ ವಿರುದ್ಧ ಸಿದ್ದರಾಮಯ್ಯ ಅವರ ದ್ವೇಷ ಕಡಿಮೆಯಾಗಿಲ್ಲ. ಮೋಹನ್ ಅವರು ಈಗಲೂ ಬಡ್ತಿ ಪಡೆಯದೆಯೇ ಕಾರವಾರದಲ್ಲಿ ಕಣ್ಣಿಗೆ ಕಾಣದ ನಾನ್ ಅಕ್ಸಿಕ್ಯೂಟಿವ್ ಹುದ್ದೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

ಏನಿದು ಪ್ರಕರಣ...?
ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಹಾಗೂ ಡಾ.ಹೆಚ್.ಸಿ ಮಹದೇವಪ್ಪ ಅವರ ಪುತ್ರ ಅಕ್ರಮವಾಗಿ ಹಣ ಹಂಚಿಕೆ ಮಾಡುತ್ತಿದ್ದರು. ಅಲ್ಲದೆ, ನನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ಹೇಳಿ ವರುಣಾ ಕ್ಷೇತದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದಲಿಂಗ ಸ್ವಾಮಿ ಎಂಬುವವರು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರಂತೆ ದೂರು ಸ್ವೀಕರಿಸಿದ್ದ ಮೋಹನ್ ಅವರು, ಎಫ್ಐಆರ್ ದಾಖಲಿಸಿಕೊಳ್ಳುವುದಕ್ಕೂ ಮುನ್ನ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದರು. ಯಾವುದೇ ರೀತಿಯ ವಿಚಾರಣೆಯನ್ನು ನಡೆಸಿರಲಿಲ್ಲ. ಆದರೆ, ದೂರು ದಾಖಲಿಸಿಕೊಂಡಿದ್ದೇ ಮೋಹನ್ ಅವರ ಪಾಲಿಗೆ ಮುಳುವಾಗಿ ಹೋಗಿದೆ.

2013ರಲ್ಲಿ ವಿಧಾನಸಭಾ ಫಲಿತಾಂಶ ಪ್ರಕಟಗೊಂಡ ನಂತರ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಿದ್ದರು. ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಅವರು ಮೋಹನ್ ಅವರ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಮೈಸೂರಿಗೆ ಬಂದಿದ್ದ ಸಿದ್ದರಾಮಯ್ಯ ಅವರು ಮೋಹನ್ ಅವರನ್ನು ನೋಡಿದ್ದಾರೆ. ಈ ವೇಳೆ ಮೋಹನ್ ಅವರನ್ನು ಅಮಾನತು ಮಾಡುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ,

ಪ್ರಕರಣಗಳನ್ನು ತನಿಖೆ ನಡೆಸುವುದರಲ್ಲಿ ಮೋಹನ್ ಅವರು ವಿಳಂಬ ನೀತಿ ಅನುಸರಿಸುತ್ತಿದ್ದು, ಹೆಚ್ಚು ಪ್ರಕರಣಗಳ ವಿಚಾರಣೆಯನ್ನು ಬಾಕಿ ಇಟ್ಟುಕೊಂಡಿದ್ದಾರೆಂಬ ಕಾರಣ ನೀಡಿ ಮೋಹನ್ ಅವರನ್ನು ಅಮಾನತು ಮಾಡಲಾಗಿದೆ. ಇದೀಗ ಮೋಹನ್ ಅವರ ಅಮಾನತು ಪ್ರಕರಣ ಬೆಳಕಿಗೆ ಬಂದಿದ್ದು, ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

ಮೋಹನ್ ಅವರಿಗೆ ಬೆಂಬಲ ಸೂಚಿಸಿರುವ ಗೆಜ್ಜೆಲಗ್ಗೆರೆ ಗ್ರಾಮದ ನೂರಾರು ಜನರು ಬೆಂಗಳೂರು-ಮೈಸೂರು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು, ಯಾವುದೇ ತನಿಖೆಯಾದರೂ 9 ತಿಂಗಳೊಳಗಾಗಿ ಪೂರ್ಣಗೊಳಿಸಬೇಕೆಂದು ನಿಯಮವಿದೆ. ಆದರೆ, ಈ ನಿಯಮವನ್ನು ಮೋಹನ್ ಅವರು ಮುರಿದಿರುವುದರಿಂದ ಅವರಿಗೆ ಒಂದೂವರೆ ವರ್ಷಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿತ್ತು. ಶಿಕ್ಷೆ ನಂತರ ಅವರಿಗೆ 2014ರ ಆಗಸ್ಟ್ ತಿಂಗಳಿನಲ್ಲಿ ಕಾರವಾರದಲ್ಲಿ ನಾನ್ ಎಕ್ಸಿಕ್ಯೂಟಿವ್ ಪೊಲೀಸ್ ಹುದ್ದೆಯನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ. ಮೋಹನ್ ಅವರು 1994ರಲ್ಲಿ ಡಿವೈಎಸ್ಪಿ ಗಣಪತಿಯವರ ಬ್ಯಾಚ್'ಮೇಟ್ ಆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com