ಸರ್ಕಾರದ ಸಾಧನೆ ಬಗ್ಗೆ ಹೊಗಳುತ್ತಿದ್ದ ದೇಶಪಾಂಡೆಗೆ ರಾಜನಾಥ್ ಸಿಂಗ್ ತಿರುಗೇಟು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಕುರಿತು ಹಾಡಿ ಹೊಗಳುತ್ತಿದ್ದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರಿಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು...
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವ ಸಾಧನೆ ಕುರಿತು ಹಾಡಿ ಹೊಗಳುತ್ತಿದ್ದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರಿಗೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ತಿರುಗೇಟು ನೀಡಿದ್ದಾರೆ.

ಬ್ಯಾಂಕ್ವೆಟ್ ಸಂಭಾಗಣದಲ್ಲಿ ನಿನ್ನೆ ಪಾಲಿಮಾರ್ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಕೇಂದ್ರದ ಅಡಿಗಲ್ಲು ಕಾರ್ಯಕ್ರಮ ಉದ್ಘಾಟಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬಂದಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರುಹಾಜರಾಗಿದ್ದರು. 1 ಗಂಟೆಯ ನಂತರ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಕಾರ್ಯಕ್ರಮದ ಆರಂಭವಾದ ನಂತರ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಆರ್.ವಿ.ದೇಶಪಾಂಡೆಯವರು ಮಾತನಾಡಲು ಆರಂಭಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಸಾಧನೆ ಕುರಿತಂತೆ ಹಾಡಿ ಹೊಗಳಲು ಆರಂಭಿಸಿದ್ದರು.

ಕೇಂದ್ರ ಸಾರ್ಟ್ ಅಪ್ ಪಾಲಿಸಿ ಜಾರಿಗೆ ತರುವುದಕ್ಕೂ 15 ದಿನಗಳಿಗೂ ಮುನ್ನವೇ ನಾವು ರಾಜ್ಯದಲ್ಲಿ ಜಾರಿಗೆ ತಂದಿದ್ದೆವು. ಕೇಂದ್ರ ಸರ್ಕಾರ ಜಾರಿಗೆ ತರುವ ಹೊಸ ನೀತಿಗಳನ್ನು ನಾವು ಮೊದಲೇ ತಂದಿರುತ್ತೇವೆ. ಇದು ಸಾಕಷ್ಟು ವಿಚಾರಗಳಲ್ಲಿ ಆಗಿದೆ. ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಕೂಡ ಕರ್ನಾಟಕದಲ್ಲಿ ಮೊದಲು ಜಾರಿಗೆ ಬಂದಿತ್ತು ಎಂದು ಹೇಳಿದರು.

ನಂತರ ಮಾತನಾಡಲು ಆರಂಭಿಸಿದ ರಾಜನಾಥ ಸಿಂಗ್ ಅವರು, ಯಾರು ಏನನ್ನು ಮಾಡಿದರು, ಯಾರು ಮೊದಲು ಜಾರಿಗೆ ತಂದರು ಎಂಬು ನನಗೆ ಬೇಕಿಲ್ಲ. ನೀವು ಮೊದಲು ಜಾರಿಗೆ ತಂದಿದ್ದೇ ಆದರೆ, ಇದು ನಿಜಕ್ಕೂ ಉತ್ತಮವಾದದ್ದು. ನಿಮಗೆ ಶುಭಾಶಯ ಹೇಳಲು ಇಚ್ಛಿಸುತ್ತೇನೆ. ಬೆಂಗಳೂರಿನ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.

ಸರ್ಕಾರ ರಚಿಸುವ ಸಲುವಾಗಿಯೇ ನಾವು ರಾಜಕೀಯ ಮಾಡುತ್ತಿಲ್ಲ. ಸರ್ಕಾರ ನಡೆಸುವ ಸಲುವಾಗಿಯೂ ನಾವು ರಾಜಕೀಯ ಮಾಡುತ್ತಿಲ್ಲ. ದೇಶ ಕಟ್ಟಲು ನಾವು ರಾಜಕೀಯ ಮಾಡುತ್ತಿದ್ದೇವೆಂದು ಹೇಳುವ ಮುಖಾಂತರ ತಿರುಗೇಟು ನೀಡಿದರು.

ನಂತರ ಮಾತನಾಡಿ ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರು, ರಸಗೊಬ್ಬರ ಕಾರ್ಖಾನೆ ಸ್ಥಾಪನೆ ಕುರಿತ ನಿರ್ಧಾರಗಳು ಇನ್ನು ಒಂದು ತಿಂಗಳಲ್ಲಿ ಅಂತಿಮವಾಗಲಿದೆ. ಕಾರ್ಖಾನೆ ಸ್ಥಾಪನೆಗೆ ರಾಜ್ಯ ಸರ್ಕಾರ ಭೂಮಿ ನೀಡಲು ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ದಾರವಾಡ, ದಾವಣಗೆರೆ ಮತ್ತು ಸಿಂಧನೂರುಗಳಂತಹ ಮೂರು ಪ್ರದೇಶಗಳನ್ನು ಸೂಚಿಸಿದೆ. ಸ್ಥಳ ಪರೀಕ್ಷೆ ಮತ್ತು ತಾಂತ್ರಿಕ ಕಾರ್ಯಸಾಧ್ಯತೆಗಳ ಪರಿಶೀಲನೆಗಾಗಿ ದೆಹಲಿಯಿಂದ ತಿಂಗಳ ಒಳಗೆ ಉನ್ನತ ಮಟ್ಟದ ತಂಡವನ್ನು ಕಳುಹಿಸಲಾಗುತ್ತದೆ. ಭೂಮಿ ಆಯ್ಕೆ ಕುರಿತಂತೆ ತಿಂಗಳೊಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com