ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: 2 ಹಿರಿಯ ಅಧಿಕಾರಿಗಳ ವಿಚಾರಣೆ

ಸಾಕಷ್ಟು ಸಂಚಲನ ಮೂಡಿಸಿರುವ ಮಂಗಳೂರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಇಬ್ಬರು ಹಿರಿಯ ಅಧಿಕಾರಿಗಳನ್ನು ಭಾನುವಾರ...
ಡಿವೈಎಸ್ಪಿ ಗಣಪತಿ
ಡಿವೈಎಸ್ಪಿ ಗಣಪತಿ
Updated on

ಬೆಂಗಳೂರು: ಸಾಕಷ್ಟು ಸಂಚಲನ ಮೂಡಿಸಿರುವ ಮಂಗಳೂರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಇಬ್ಬರು ಹಿರಿಯ ಅಧಿಕಾರಿಗಳನ್ನು ಭಾನುವಾರ ವಿಚಾರಣೆಗೊಳಪಡಿಸಲಿದ್ದಾರೆ.

ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಿನ್ನೆಯಷ್ಟೇ ಖಾಸಗಿ ಮಾಧ್ಯಮದ ಪತ್ರಕರ್ತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಗಣಪತಿಯವರ ಕುಟುಂಬಸ್ಥರೊಂದಿಗೂ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಅಧಿಕಾರಿಯ ತಂದೆ ಕುಶಾಲಪ್ಪ ಅವರು ಬರವಣಿಗೆ ಮೂಲಕ ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ಸಾವಿಗೂ ಮುನ್ನ ಖಾಸಗಿ ಮಾಧ್ಯಮವೊಂದರಲ್ಲಿ ಗಣಪತಿಯವರು ಎಡಿಜಿಪಿ (ಗುಪ್ತಚರ) ಎ.ಎಂ. ಪ್ರಸಾದ್, ಲೋಕಾಯುಕ್ತ ಡಿಐಡಿ ಪ್ರಣಬ್ ಮೊಹಾಂತಿಯವರನ್ನು ಹೆಸರನ್ನು ಪ್ರಸ್ತಾಪ ಮಾಡಿದ್ದರು. ಇದರಂತೆ ಸಿಐಡಿ ಅಧಿಕಾರಿಗಳು ಈ ಇಬ್ಬರು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲು ನಿರ್ಧರಿಸಿದ್ದು, ವಿಚಾರಣೆಗೊಳಪಡಲು ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.

ಐಜಿಪಿ-ಸಿಐಡಿ ಹೇಮಂತ್ ನಿಂಬಲ್ಕರ್ ಅವರು ಪ್ರಕರಣದ ತನಿಖೆಯ ಮುಖ್ಯಸ್ಥನಾಗಿದ್ದು, ಈಗಾಗಲೇ ಪ್ರಕರಣ ಸಂಬಂಧ ಪ್ರಮುಖ ಮಾಹಿತಿಯನ್ನು ಪಡೆದಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದಾರೆಂದು ಹಿರಿಯ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸಾದ್ ಹಾಗೂ ಮೊಹಾಂತಿಯವರ ವಿರುದ್ಧ ಗಣಪತಿಯವರು ಸಾಯುವುದಕ್ಕೂ ಮುನ್ನ ವೀಡಿಯೋ ಮುಖಾಂತರ ಗಂಭೀರ ಆರೋಪಗಳನ್ನು ಮಾಡಿದ್ದು, ಈಗಾಗಲೇ ಗಣಪತಿಯವರ ವರ್ತನೆ ಕುರಿತಂತೆ ಡಿವೈಎಸ್ಪಿ ಹಿರಿಯ ಅಧಿಕಾರಿಗಳ ಬಳಿ ಮಾಹಿತಿ ಪಡೆಯಲಾಗಿದೆ. ಇತ್ತೀಚೆಗಷ್ಟೇ ನಡೆದ ಕೆಲವು ಬೆಳವಣಿಗೆಗಳಿಗೆ ನೊಂದು ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಖಾಸಗಿ ವಾಹನಿಯೊಂದರಲ್ಲಿ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದ ವೇಳೆ, ಮುಂದೆ ನನಗೇನಾದರೂ ಆದರೆ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರೇ ನೇರಹೊಣೆಯಾಗಿರುತ್ತಾರೆಂದು ಹೇಳಿಕೊಂಡಿದ್ದರು. ಆದರೆ, ಅಧಿಕಾರಿಗಳ ಹೆಸರನ್ನು ಯಾವ ಕಾರಣಕ್ಕೆ ತೆಗೆದುಕೊಂಡರು, ಅವರ ವಿರುದ್ಧ ಕಿಡಿಕಾರಲು ಕಾರಣವೇನು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ.

ಅಧಿಕಾರಿ ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಸ್ಥಳದಲ್ಲಿ ಮೂರು ಸುತ್ತಿನ ಗುಂಡು ಹಾರಿಸಿರುವುದು ಕಂಡು ಬಂದಿದೆ. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ಕೆಲವರು ಇದು ಆತ್ಮಹತ್ಯೆಯಲ್ಲ, ಹತ್ಯೆಯಾಗಿರಬಹುದು ಎಂದು ಶಂಕಿಸುತ್ತಿದ್ದಾರೆ. ಮತ್ತೆ ಕೆಲವರು, ಗಣಪತಿಯವರು ಅಧಿಕಾರಿಗಳ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹೇರಿರಬಹುದು ಎಂದು ಹೇಳಲಾಗುತ್ತಿದೆ.

ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲ ದಿನಗಳ ಹಿಂದಷ್ಟೇ ಮತ್ತೊಬ್ಬ ಡಿವೈಎಸ್ಪಿ ಕಲ್ಲಪ್ಪ ಹಂಡೀಭಾಗ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಈ ವರೆಗೂ ಯಾವುದೇ ಬೆಳವಣಿಗೆಗಳು ಕಂಡು ಬಂದಿಲ್ಲ. ಕಲ್ಲಪ್ಪ ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಈ ವರೆಗೂ ಯಾರೊಬ್ಬರನ್ನು ಬಂಧನಕ್ಕೊಳಪಡಿಸಲಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com