ಗಣಪತಿ ಆತ್ಮಹತ್ಯೆ ಪ್ರಕರಣ: 2 ಪೊಲೀಸ್ ಅಧಿಕಾರಿಗಳ ವಿರುದ್ಧ ನಿರ್ಧಾರ ಕೈಗೊಳ್ಳದ ಸರ್ಕಾರ

ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಂಗಳೂರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿರುವ ಇಬ್ಬರು ಪೊಲೀಸ್ ಅಧಿಕಾರಿಗಳ...
ಪ್ರಣಬ್ ಮೊಹಾಂತಿ ಮತ್ತು ಎ.ಎಂ. ಪ್ರಸಾದ್
ಪ್ರಣಬ್ ಮೊಹಾಂತಿ ಮತ್ತು ಎ.ಎಂ. ಪ್ರಸಾದ್

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಂಗಳೂರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಕೇಳಿಬಂದಿರುವ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಈ ವರೆಗೂ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ.

ಡಿವೈಎಸ್ಪಿ ಗಣಪತಿಯವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಚಿವ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿಯವರು ತಮಗೇನಾದರೂ ಆದರೆ, ಇವರೇ ಕಾರಣ ಎಂದು ಹೇಳಿಕೊಂಡಿದ್ದರು.

ಪ್ರಕರಣ ಸಂಬಂಧ ಪ್ರತಿಪಕ್ಷಗಳ ತೀವ್ರ ಒತ್ತಡಕ್ಕೆ ಮಣಿದು ನಿನ್ನೆಯಷ್ಟೇ ಸಚಿವ ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಅಲ್ಲದೆ, ರಾಜ್ಯ ಸರ್ಕಾರ ಕೂಡ ಆರೋಪ ಕೇಳಿಬಂದಿರುವ ಮೂವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶ ಹೊರಡಿಸಿತ್ತು. ಇದರಂತೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ರಜೆ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತಂತೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿಯ ಮೂಲಗಳು, ಪ್ರಕರಣ ಸಂಬಂಧ ಕೆ.ಜೆ.ಜಾರ್ಜ್, ಪ್ರಸಾದ್ ಮತ್ತು ಮೊಹಾಂತಿಯವರ ವಿರುದ್ಧ ಈಗಾಗಲೇ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಇಬ್ಬರು ಪೊಲೀಸ್ ಅಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರೆಯುತ್ತಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಸರ್ಕಾರ ಈವರೆಗೂ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಹೇಳಿದೆ, ಅಲ್ಲದೆ, ಅಧಿಕಾರಿಗಳ ಕಡ್ಡಾಯ ರಜೆಯೊಂದು ವದಂತಿಯಾಗಿದೆ ಎಂದು ಮಾಹಿತಿ ನೀಡಿದೆ.

ಅಧಿಕಾರಿಗಳು ಇದೀಗ ನ್ಯಾಯಾಲಯ ಹಾಗೂ ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆಯೇ ಮುಂದುವರೆಯಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಇಬ್ಬರು ಅಧಿಕಾರಿಗಳು ಈಗಾಗಲೇ ಸರ್ಕಾರಕ್ಕೆ ಸ್ಪಷ್ಟನೆಯನ್ನು ನೀಡಿದ್ದು, ಗಣಪತಿಯವರು ತಮ್ಮ ಅಡಿಯಲ್ಲಿ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕಿರುಕುಳ ಆರೋಪವನ್ನು ತಳ್ಳಿಹಾಕಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com