

ಬೆಂಗಳೂರು: ಜೈಲಿನ ಸರಳುಗಳನ್ನು ಕತ್ತರಿಸಿ 4 ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಉಪಕಾರಾಗೃಹದಲ್ಲಿ ನಡೆದಿದೆ.
ಹನುಮಂತ ಈಶ್ವರಪ್ಪ, ರಮೇಶ ನಾಗೇಂದ್ರ, ದೇವರಾಜ ನಿಂಗಪ್ಪ, ರಂಗಪ್ಪ ತಪ್ಪಿಸಿಕೊಂಡಿದ್ದಾರೆ. ಕೋಣೆಯ ಶೌಚಾಲಯದ ಕಿಟಕಿಯ ಕಂಬಿ ಕತ್ತರಿಸಿ, ತೆಂಗಿನಮರ ಏರಿ ಲುಂಗಿ ಮೂಲಕ ಕೆಳಗೆ ಇಳಿದು ಓಡಿಹೋಗಿದ್ದಾರೆ ಎಂದು ಉಪಕಾರಾಗೃಹ ಅಧಿಕಾರಿ ಜಿ. ಸುರೇಶ ತಿಳಿಸಿದ್ದಾರೆ. ಈ ನಾಲ್ವರು ಆರೋಪಿಗಳು ಪ್ರತ್ಯೇಕ ಕಳ್ಳತನ ಆರೋಪದಡಿ ಬಂಧಿತರಾಗಿದ್ದರು.
ಬೆಳಗಿನ ಜಾವದಲ್ಲಿ ಪರಾರಿಯಾಗಿದ್ದು, ಜೈಲಾಧಿಕಾರಿಗಳು ತಡವಾಗಿ ದೇವದುರ್ಗ ಠಾಣೆಗೆ ದೂರು ನೀಡಿದ್ದಾರೆ.ಪರಾರಿಯಾದ ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಒಂದು ಜೈಲು ಕೋಣೆಯಲ್ಲಿ 5 ಮಂದಿಯನ್ನು ಇಡಲಾಗಿತ್ತು.
ಅದರಲ್ಲಿ ನಾಲ್ಕು ವಿಚಾರಣಾಧೀನ ಕೈದಿಗಳು ಪರಾರಿಯಾಗಿದ್ದಾರೆ. ರೇಪ್ ಕೇಸ್ ನಲ್ಲಿ ಬಂಧಿತರಾಗಿರುವ ಸಹ ಕೈದಿಗಳು ಪರಾರಿಯಾಗದೇ ಅಲ್ಲಿಯೇ ಉಳಿದಿದ್ದಾರೆ.
ಬೆಳಗ್ಗೆ ಶ್ರಮಾಧಾನ ಕೆಲಸಕ್ಕೆ ಕೈದಿಗಳು ಹಾಜರಾಗದಿದ್ದಾಗ ಜೈಲು ಕಂಬಿ ಮುರಿದು ಪರಾರಿಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಜೈಲು ವಾರ್ಡನ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್ ಪಿ ಪಾಟೀಲ್, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.