
ಬೆಂಗಳೂರು: ಪ್ರಶ್ನೆಪತ್ರಿಕೆಯ ಫೋಟೋ ಕಾಪಿಯನ್ನು ಹಿಡಿದು ವಿದ್ಯಾರ್ಥಿಗಳು ಮಾಧ್ಯಮ ಹಾಗೂ ನ್ಯಾಯಾಲಯಗಳ ಮೊರೆ ಹೋಗುವುದರ ವಿರುದ್ಧ ಪಿಯು ಇಲಾಖೆ ನಿರ್ಬಂಧ ಹೇರಿದೆ. ಆದರೆ ಈ ನಿರ್ಬಂಧಕ್ಕೆ ವಿದ್ಯಾರ್ಥಿಗಳು ವ್ಯಕ್ತಪಡಿಸುತ್ತಿದ್ದು, ಇದೀಗ ಫೇಸ್ ಬುಕ್ ನಲ್ಲಿ ಪಿಯು ಇಲಾಖೆ ವಿರುದ್ಧ ಛೀಮಾರಿ ಹಾಕುತ್ತಿದೆ.
ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದ್ದಂತೆ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳ ಮೇಲೆ ಒತ್ತಡವನ್ನು ಹೇರಿತ್ತು. ಇದೀಗ ಪ್ರಶ್ನೆಪತ್ರಿಕೆ ಫೋಟೋಕಾಪಿಗಳನ್ನಿಡಿದು ವಿದ್ಯಾರ್ಥಿಗಳು ಮಾಧ್ಯಮಗಳು ಹಾಗೂ ನ್ಯಾಯಾಲಯದ ಮೊರೆ ಹೋಗಬಾರದೆಂದು ನಿರ್ಬಂಧ ಹೇರಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಫೇಸ್ ಬುಕ್ #ಶೇಮ್ ಆನ್ ಯು ಪಿಯು ಬೋರ್ಡ್ ಎಂದೇ ವಿದ್ಯಾರ್ಥಿಗಳು ಪಿಯು ಇಲಾಖೆಗೆ ಛೀಮಾರಿ ಹಾಕುತ್ತಿದ್ದು, ಫೇಸ್ ಬುಕ್ ನಲ್ಲಿ ವಿದ್ಯಾರ್ಥಿಗಳು ಮೌಲ್ಯಮಾಪನದಲ್ಲಾಗಿರುವ ಹಲವು ತಪ್ಪುಗಳನ್ನಿಡು ಉತ್ತರ ಪತ್ರಿಕೆಯ ಪೋಟೋಗಳನ್ನು ಪ್ರದರ್ಶಿಸುತ್ತಿದ್ದಾರೆ.
ವಿದ್ಯಾರ್ಥಿಗಳು ಹಾಕಿರುವ ಉತ್ತರಪತ್ರಿಕೆಗಳಲ್ಲಿ ಮೌಲ್ಯಮಾಪಕರು ಮಾಡಿರುವ ತಪ್ಪುಗಳು ಎದ್ದು ಕಾಣುತ್ತಿದೆ. ಕೆಲವು ಉತ್ತರ ಪತ್ರಿಕೆಯಲ್ಲಿ ಅಂಕಗಳನ್ನು ಎಣಿಸಿರುವುದು, ಕೃಪಾಂಕ ಅಂಕಗಳನ್ನು ಕೊಟ್ಟಿರುವುದು ಹಾಗೂ ತಪ್ಪಾಗಿ ಮೌಲ್ಯಮಾಪನ ಮಾಡಿರುವುದು ಕಂಡು ಬಂದಿದೆ.
ಇನ್ನು ಕೆಲವು ಉತ್ತರ ಪತ್ರಿಕೆಯಲ್ಲಿ ಒಂದೇ ಪ್ರಶ್ನೆಗೆ ಇಬ್ಬರು ವಿದ್ಯಾರ್ಥಿಗಳು ಒಂದೇ ರೀತಿಯಲ್ಲಿ ಉತ್ತರಿಸಿದ್ದು, ಇದರಲ್ಲಿ ಒಂದು ಉತ್ತರ ಪತ್ರಿಕೆಯಲ್ಲಿ ಅಂಕವನ್ನು ನೀಡಲಾಗಿದೆ, ಆದರೆ, ಇದೇ ಪ್ರಶ್ನೆಗೆ ಮತ್ತೊಂದು ಉತ್ತರ ಪತ್ರಿಕೆಯಲ್ಲಿ ತಪ್ಪು ಎಂದು ಪರಿಗಣಿಸಿ ಅಂಕವನ್ನು ಕಡಿತಗೊಳಿಸಿರುವುದು ಕಂಡುಬಂದಿದೆ.
ಮೌಲ್ಯಮಾಪಕರ ಈ ತಪ್ಪು ಮೌಲ್ಯಮಾಪನದಿಂದಾಗಿ 100ಕ್ಕೆ 100 ಅಂಕಗಳನ್ನು ಪಡೆಯಬೇಕಿದ್ದ ವಿದ್ಯಾರ್ಥಿಯೊಬ್ಬ ಇದೀಗ 99 ಅಂಕಗಳನ್ನು ಪಡೆದಿದ್ದಾನೆ.
ಈ ಕುರಿತಂತೆ ಮಾತನಾಡಿರುವ ವಿದ್ಯಾರ್ಥಿ, ಒಂದು ವೇಳೆ ಉತ್ತರಪತ್ರಿಕೆಯನ್ನು ಮರುಮೌಲ್ಯಮಾಪನಕ್ಕೆ ಹಾಕಿದರೂ, 1 ಅಂಕಕ್ಕೆ ಅವರು ಬದಲು ಮಾಡುವುದಿಲ್ಲ. ಮೌಲ್ಯಮಾಪಕರ ತಪ್ಪುಗಳನ್ನು ಅವರು ಪರಿಗಣಿಸುವುದಿಲ್ಲ. ಮೌಲ್ಯಮಾಪಕರು ಮಾಡಿದ ತಪ್ಪಿಗೆ ಇಂದು ಸಿಇಟಿ ರ್ಯಾಂಕ್ ಪಟ್ಟಿಯಲ್ಲಿ ನನ್ನ ಸ್ಥಾನ ಕೆಳ ಹೋಗುವಂತಾಗಿದೆ ಎಂದು ಹೇಳಿಕೊಂಡಿದ್ದಾನೆ.
ಮೌಲ್ಯಮಾಪಕರ ತಪ್ಪುಗಳನ್ನು ಸಮರ್ಥಿಸಿಕೊಂಡಿರುವ ಇಲಾಖೆಯು, 1 ಮತ್ತು 2 ತಪ್ಪುಗಳಿಗಾಗಿ ಮೌಲ್ಯಮಾಪಕರಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ. ಮನುಷ್ಯರಿಂದ ತಪ್ಪುಗಳಾಗುವುದು ಸಾಮಾನ್ಯ. ಅಂತಹ ಕೆಲ ತಪ್ಪುಗಳನ್ನು ಕ್ಷಮಿಸಬೇಕಾಗುತ್ತದೆ ಎಂದು ಹೇಳಿದೆ.
Advertisement