2018 ವಿಧಾನಸಭೆ ಚುನಾವಣೆ ತಯಾರಿ; ಸಿದ್ದು ಸಂಪುಟಕ್ಕೆ ಮೇಜರ್ ಸರ್ಜರಿ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಿದ್ದು, ಮುಂಬರುವ 2018ರ ವಿಧಾನ ಸಭಾ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ಇದೀಗ ಮಂತ್ರಿ ಮಂಡಲ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆಯುತ್ತಿದ್ದು, ಮುಂಬರುವ 2018ರ ವಿಧಾನ ಸಭಾ ಚುನಾವಣೆಗೆ ತಯಾರಿ ನಡೆಸುವ ಸಲುವಾಗಿ ಇದೀಗ ಮಂತ್ರಿ ಮಂಡಲ ಪುನಾರಚನೆಗೆ ಕೈ ಹಾಕಿದ್ದಾರೆ.

ಸರ್ಕಾರದಲ್ಲಿ ಉನ್ನತ ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಸೇರ್ಪಡೆಗೊಳಿಸಿಕೊಳ್ಳಲು ಈಗಾಗಲೇ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದು, ಇಂದು ಮಂತ್ರಿ ಮಂಡಲದೊಂದಿಗೆ ಸಭೆ ನಡೆಸುತ್ತಿದ್ದಾರೆ. ಹೊಸ ಸಂಪುಟಕ್ಕೆ ಸಿದ್ದರಾಮಯ್ಯ ಅವರು ಕಾಮರಾಜ್ ಸೂತ್ರ ಅನುಸರಿಸಲು ತೀರ್ಮಾನಿಸಿದ್ದಾರೆಂದು ಹೇಳಲಾಗುತ್ತಿದೆ. ಕಾಮರಾಜ್ ಸೂತ್ರ ಅನುಸರಿಸಿದ್ದೇ ಆದರೆ, ಎಲ್ಲಾ ಸಚಿವರು ರಾಜಿನಾಮೆ ಸಲ್ಲಿಸಬೇಕಾಗುತ್ತದೆ. ಸಚಿವರ ರಾಜೀನಾಮೆ ಪತ್ರದ ನಂತರ ಮತ್ತೆ ಸಂಪುಟ ಪುನಾರಚನೆ ಮಾಡಲಾಗುತ್ತದೆ.

ಇನ್ನು ಕಾಮರಾಜ್ ಸೂತ್ರದ ಕುರಿತಂತೆ ನಿನ್ನೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಈ ರೀತಿಯ ಯಾವುದೇ ಯೋಜನೆಯ ಬಗ್ಗೆ ಚಿಂತನೆ ನಡೆಸಲಾಗಿಲ್ಲ. ಯಾವುದೇ ಕಾಮರಾಜ್ ಯೋಜನೆ ಅಥವಾ ಅಣ್ಣಾ ದೊರೈ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಸಚಿವರೊಂದಿಗಿನ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಕುರಿತಂತೆ ಕಾಂಗ್ರೆಸ್ ಹೈ ಕಮಾಂಡ್ ಜೊತೆ ಮಾತುಕತೆ ನಡೆಸಲು ಇದೇ ಶನಿವಾರದಂದು ದೆಹಲಿಗೆ ತೆರಳಿಲಿದ್ದಾರೆಂದು ಹೇಳಲಾಗುತ್ತಿದ್ದು, ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಹಸಿರು ನಿಶಾನೆ ತೋರಿದ ಬಳಿಕ ಸಂಪುಟ ಪುನಾರಚನೆ ಮಾಡಲಿದ್ದಾರೆಂದು ಹೇಳಲಾಗುತ್ತಿದೆ.

ಸಂಪುಟದಲ್ಲಿ 10-12ಸಚಿವರನ್ನು ತೆಗೆದುಹಾಕಲು ಪಕ್ಷ ತೀರ್ಮಾನಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಭಾವಶಾಲಿ ಹೊಸ ಸಚಿವರನ್ನು ಸೇರ್ಪಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್
ಸಂಪುಟ ಪುನಾರಚನೆ ಕುರಿತಂತೆ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆಪಿಸಿಸಿ ಮುಖ್ಯಸ್ಥ ಹುದ್ದೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನೇಮಕ ಮಾಡುವ ವಿಚಾರದ ಕುರಿತಂತೆಯೂ ಚರ್ಚೆ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ. ಇದೇ ಸಾಲಿನಲ್ಲಿ ಇದೀಗ ಐಟಿ-ಬಿಟಿ ಸಚಿವ ಎಸ್.ಆರ್ ಪಾಟೀಲ್ ಮತ್ತು ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆಯವರ ಹೆಸರು ಕೂಡ ಕೇಳಿಬರುತ್ತಿದೆ.

ಸಂಪುಟದಿಂದ ಕೈಬಿಡುವ ಸಾಧ್ಯತೆಯುಳ್ಳ ಸಚಿವರು...
ಬಾಬುರಾವ್, ಚಿಂಚನ್ಸೂರು, ಶಿವರಾಜ್ ತಂಗಡಗಿ, ಪಿ.ಟಿ. ಪರಮೇಶ್ವರ್ ನಾಯಕ್, ಅಭಯಾಚಂದ್ರ ಜೈನ್, ಎಂ.ಹೆಚ್. ಅಂಬರೀಶ್, ಶಾಮನೂರು ಶಿವಶಂಕರಪ್ಪ, ಕಿಮ್ಮನೆ ರತ್ನಾಕರ್, ಹೆಚ್. ಆಂಜನೇಯ, ಕ್ವಾಮರುಲ್ ಇಸ್ಲಾಂ

ಹೊಸ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯುಳ್ಳವರು...
ಕಾಗೋಡು ತಿಮ್ಮಪ್ಪ, ರಮೇಶ್ ಕುಮಾರ್, ಎಂ.ಕೃಷ್ಣಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಪ್ರಮೋದ್ ಮಧ್ವರಾಜ್, ಮಲಕಾ ರೆಡ್ಡಿ, ಕೆ.ಬಿ. ಕೋಳಿವಾಡ್, ಎನ್.ಎ. ಹರೀಶ್. ಬಸವರಾಜಯ್ಯ ರೆಡ್ಡಿ, ಹೆಚ್.ವೈ. ಮೇಟಿ, ಪ್ರಿಯಾಂಕ್ ಖರ್ಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com