
ಬೆಂಗಳೂರು: ಶಾಲೆ ಬಿಟ್ಟ ಮಕ್ಕಳನ್ನು ಪತ್ತೆಹಚ್ಚಲು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಅಳೆಯಲು ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿವರೆಗಿನ 45 ಲಕ್ಷ ಮಕ್ಕಳಿಗಾಗಿ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಿಂದ 'ಸ್ಟೂಡೆಂಟ್ ಟ್ರಾಕಿಂಗ್ ಸಿಸ್ಟಮ್' ಎಂಬ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಸಿದ್ಧವಿದ್ದು, ಮುಂದಿನ ತಿಂಗಳಿನಿಂದ 'ಸ್ಟೂಡೆಂಟ್ ಟ್ರಾಕಿಂಗ್ ಸಿಸ್ಟಮ್' ಕಾರ್ಯನಿರ್ವಹಸಲಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು, ಮೊದಲ ಹಂತದಲ್ಲಿ 45 ಲಕ್ಷ ಮಕ್ಕಳಿಗಾಗಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು. ಪ್ರತೀಯೊಬ್ಬ ವಿದ್ಯಾರ್ಥಿಗೂ ಒಂದು ವಿವಿಧ ರೀತಿಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಮೂಲಕ ವಿದ್ಯಾರ್ಥಿ ಎಷ್ಟನೇ ತರಗತಿಯನ್ನು ಯಾವ ಹಂತದಲ್ಲಿ ಬಿಟ್ಟಿದ್ದಾನೆಂದು ಪತ್ತೆಹಚ್ಚಬಹುದು.
ಅರ್ಧಕ್ಕೆ ಶಾಲೆ ಬಿಟ್ಟ ಮಕ್ಕಳ ಪೋಷಕರನ್ನು ಹುಡುಕಿ ಅವರ ಮನವೊಲಿಕೆ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿ ಅಳೆಯಲು ಇದು ಸಹಕಾರಿಯಾಗುತ್ತದೆ. ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಂಡರೆ ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನು ಕಡಿಮೆ ಮಾಡಿ, ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳ ಭವಿಷ್ಯ ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದ್ದು, ರಾಜ್ಯದಲ್ಲಿರುವ ಶಾಲೆಗಳ ಬೇಡಿಕೆ ಬಗ್ಗೆ ಸಮೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಸಮೀಕ್ಷೆ ನಂತರ ಶಾಲೆಗಳ ಅವಶ್ಯಕ ಕುರಿತ ಬೇಡಿಕೆಗಳನ್ನು ತಿಳಿದು ಶಾಲೆಗಳನ್ನು ನಿರ್ಮಿಸಿ ಸಿಬ್ಬಂದಿಗಳನ್ನು ವರ್ಗಾಯಿಸಲಾಗುತ್ತದೆ. ಸರ್ಕಾರಿ ಶಾಲೆಗಳ ಮೇಲಿನ ಜನರ ವಿಶ್ವಾಸವನ್ನು ಮರುಗಳಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದ್ದಾರೆ.
Advertisement