ಧಾರವಾಡ ಟಾಟಾ ಮೊಟಾರ್ಸ್ ಸಂಸ್ಥೆಯ ಲಾಕ್ ಔಟ್ ತೆರವು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 2500 ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಗೆ ಧಾರವಾಡದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆ ಮಣಿದಿದ್ದು, ಸಂಸ್ಥೆಯ ಲಾಕ್ ಔಟ್ ಅನ್ನು ತೆರವುಗೊಳಿಸಿದೆ.
ಟಾಟಾ ಮೊಟಾರ್ಸ್ ಸಂಸ್ಥೆ (ಸಂಗ್ರಹಚಿತ್ರ)
ಟಾಟಾ ಮೊಟಾರ್ಸ್ ಸಂಸ್ಥೆ (ಸಂಗ್ರಹಚಿತ್ರ)

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 2, 500 ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಗೆ ಧಾರವಾಡದಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆ ಮಣಿದಿದ್ದು, ಸಂಸ್ಥೆಯ ಲಾಕ್ ಔಟ್ ಅನ್ನು ತೆರವುಗೊಳಿಸಿದೆ.

ನಿನ್ನೆ ಕಾರ್ಮಿಕರೊಂದಿಗೆ ಸಂಸ್ಥೆ ನಿರ್ವಹಣಾಧಿಕಾರಿಗಳು ನಡೆಸಿದ ಚರ್ಚೆ ಫಲಪ್ರದವಾಗಿದ್ದು, ಫೆಬ್ರವರಿ 1ರಿಂದ ಹೇರಲಾಗಿದ್ದ ಲಾಕ್ ಔಟ್ ಅನ್ನು ತೆರವುಗೊಳಿಸಲಾಗಿದೆ ಎಂದು ಸಂಸ್ಥೆ  ಅಧಿಕಾರಿಗಳು ತಿಳಿಸಿದ್ದಾರೆ. ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಸಂಸ್ಥೆಯ ಕಾರ್ಮಿಕರು ಕಳೆದ ಜನವರಿ 31ರಂದು ನಿರಶನ ಆರಂಭಿಸಿದ್ದರು. ಸಂಸ್ಥೆಯಲ್ಲಿ ಉತ್ಪಾದನೆಯಿಲ್ಲದೆ ಮತ್ತು ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒಪ್ಪದ ಟಾಟಾ ಸಂಸ್ಥೆ ಕಳೆದ ಫೆಬ್ರವರಿ 1ರಂದು ಸಂಸ್ಥೆಗೆ ಬೀಗ ಜಡಿದಿತ್ತು.

ಆದರೆ ಆ ಬಳಿಕ ಕಾರ್ಮಿಕ ಮುಖಂಡರೊಂದಿಗೆ ನಡೆದ ಮಾತುಕತೆಯಿಂದಾಗಿ ಮತ್ತು ಸಂಸ್ಥೆಯ ಗೌರವಕ್ಕೆ ಚ್ಯುತಿ ಬರಬಾರದು ಎನ್ನುವ ದೃಷ್ಟಿಯಿಂದ ಕಾರ್ಮಿಕರ ಬೇಡಿಕೆ ಈಡೇರಿಸಿ ಲಾಕ್  ಔಟ್ ತೆರವುಗೊಳಿಸಲು ಸಂಸ್ಥೆ ನಿರ್ಧರಿಸಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಟಾಟಾ ಸಂಸ್ಥೆ, ಸಂಸ್ಥೆಯ ಗೌರವಕ್ಕೆ ಧಕ್ಕೆ ಬರಬಾರದು ಎಂದು ಮತ್ತು ಸಂಸ್ಥೆಯನ್ನು ನಂಬಿ  ಹೂಡಿಕೆ ಮಾಡಿರುವ ಷೇರುದಾರರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕಾಗಿ ಲಾಕ್ ಔಟ್ ತೆರವಿಗೆ ಮುಂದಾಗಿದ್ದೇವೆ ಎಂದು ತಿಳಿಸಲಾಗಿದೆ.

ಇನ್ನು ಸಂಸ್ಥೆಯ ನಿರ್ಧಾರವನ್ನು ಪ್ರತಿಭಟನಾ ನಿರತರ ಸ್ವಾಗತಿಸಿದ್ದು, ಕಾರ್ಮಿಕರ ಶ್ರಮದ ಫಲವನ್ನು ಕಾರ್ಮಿಕರಿಗೇ ನೀಡಲು ಸಂಸ್ಥೆ ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಕಾರ್ಮಿಕ  ಸಂಘದ ನಾಯಕ ಅಭಿಷೇಕ್ ದೇಸಾಯಿ ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಟಾಟಾ ಮೋಟಾರ್ಸ್ ಸಂಸ್ಥೆಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ  ನಾಯಕ ಜಗದೀಶ್ ಶೆಟ್ಟರ್ ಅವರು ಸಚಿವ ಆರ್ ವಿ ದೇಶಪಾಂಡೆ ಅವರೊಂದಿಗೆ ಚರ್ಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com