ನಗರದ ಸ್ವಚ್ಛತಾ ನಾಯಕಿಯರಿವರು

ಆಗಿನ್ನೂ ಸೂರ್ಯ ಮೂಡಿರುವುದಿಲ್ಲ. ನಮ್ಮಲ್ಲಿ ಹೆಚ್ಚಿನ ಮಂದಿ ಮಳೆ, ಚಳಿ ಎಂದು ಮನೆಯೊಳಗೆ ರಗ್ಗು ಹೊದ್ದುಕೊಂಡು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಆಗಿನ್ನೂ ಸೂರ್ಯ ಮೂಡಿರುವುದಿಲ್ಲ. ನಮ್ಮಲ್ಲಿ ಹೆಚ್ಚಿನ ಮಂದಿ ಮಳೆ, ಚಳಿ ಎಂದು ಮನೆಯೊಳಗೆ ರಗ್ಗು ಹೊದ್ದುಕೊಂಡು ಮಲಗಿರುತ್ತಾರೆ. ಆದರೆ ಈ ಮಹಿಳೆಯರಿಗೆ ಮಾತ್ರ ಚಳಿ, ಮಳೆ, ಗಾಳಿಯ ಪರಿವೆಯೇ ಇಲ್ಲ. ನಾವು ಹಾಸಿಗೆಯಿಂದ ಏಳುವ ಮೊದಲೇ ನಮ್ಮ ಮನೆ ಮುಂದಿನ ರಸ್ತೆ ಗುಡಿಸಿ ಕಸ ತೆಗೆದು ಸ್ವಚ್ಛಗೊಳಿಸಿರುತ್ತಾರೆ.

ಇವರೇ ಮಹಾನಗರಗಳಲ್ಲಿರುವ ಪೌರ ಕಾರ್ಮಿಕರು. ಪೌರಕಾರ್ಮಿಕರಲ್ಲಿ ಹೆಚ್ಚಿನವರು ಮಹಿಳೆಯರು. ಅವರನ್ನು ಸ್ವಚ್ಛ ಭಾರತದ ರಾಯಭಾರಿಗಳೆಂದೇ ನಾವು ಕರೆಯಬಹುದು. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಂಗಳೂರಿನ ಕೆಲವು ಮಹಿಳಾ ಪೌರಕಾರ್ಮಿಕರನ್ನು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಮಾತನಾಡಿಸಿದಾಗ:

ರಾಜಮ್ಮ ಎಂಬ 45 ವರ್ಷದ ಮಹಿಳೆಗೆ ಶಿಕ್ಷಣವಿಲ್ಲ. ಆಕೆಯ ಪಕ್ಕದ ಮನೆಯ ಪೌರಕಾರ್ಮಿಕ ಕಾಂಟ್ರಾಕ್ಟರ್ ವಯಸ್ಸಾದಾಗ ಕೆಲಸವನ್ನು ಮುಂದುವರಿಸಲಾಗದೆ ರಾಜಮ್ಮ ಆ ಕೆಲಸವನ್ನು ತೆಗೆದುಕೊಂಡರು. '' 17 ವರ್ಷಗಳ ಹಿಂದೆ ನನ್ನ ನೆರೆಮನೆಯಾಕೆ ತಿಂಗಳಿಗೆ 500 ರೂಪಾಯಿಗೆ ಕಾಂಟ್ರಾಕ್ಟ್ ತೆಗೆದುಕೋ ಎಂದಾಗ ಬಹಳ ಖುಷಿಯಾಯಿತು. ಇಲ್ಲಿಯವರೆಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಬೆಳಗ್ಗೆ 6 ಗಂಟೆಗೆ ಮನೆ ಬಿಡುತ್ತೇನೆ. ಜಯಮಹಲ್ ಎಕ್ಟ್ಸೆನ್ಷನ್ ವಾರ್ಡ್ ನ ಒಂದೂವರೆ ಕಿಲೋ ಮೀಟರ್ ವರೆಗೆ ರಸ್ತೆಯನ್ನು ಗುಡಿಸುತ್ತೇನೆ. ಅದರ ಕೆಲಸ ಬೆಳಿಗ್ಗೆ 10.30ರವರೆಗೆ ಆಗುತ್ತದೆ, ನಂತರ ಮನೆಗೆ ಬಂದು ತಿಂಡಿ ತಿಂದು ನಂತರ ಮನೆಮನೆಗೆ ಹೋಗಿ ಕಸ ಸಂಗ್ರಹಿಸುತ್ತೇನೆ. ಮನೆಗೆ ಮರಳುವಾಗ ಮಧ್ಯಾಹ್ನವಾಗುತ್ತದೆ. ಮಳೆಗಾಲದಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದ್ದುಕೊಂಡು ಕೆಲಸ ಮಾಡುತ್ತೇನೆ. ನನಗೆ ವಾರದ ರಜೆ ಇಲ್ಲ. ಆದರೆ ಭಾನುವಾರ ಮತ್ತು ಬುಧವಾರ ಬೆಳಗ್ಗೆ 10.30ರವರೆಗೆ ಮಾತ್ರ ಕೆಲಸ ಮಾಡುತ್ತೇನೆ. ಈಗ ನನ್ನ ಸಂಬಳ ತಿಂಗಳಿಗೆ 6 ಸಾವಿರ ರೂಪಾಯಿ ಎನ್ನುತ್ತಾರೆ ರಾಜಮ್ಮ.

ಕಮಲಾ ಎಂಬಾಕೆಯದ್ದೂ ಇದೇ ಕಥೆ. ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿರುವ ಅವರಿಗೂ ತಿಂಗಳಿಗೆ 6 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ನಾನು ವಾರದಲ್ಲಿ ಒಂದು ದಿನ ಅರ್ಧ ದಿನ ರಜೆ ತೆಗೆದುಕೊಳ್ಳುತ್ತೇನೆ. ಹೆಚ್ಚು ರಜೆ ಹಾಕಿದರೆ 200 ರೂಪಾಯಿ ಸಂಬಳದಲ್ಲಿ ಕಡಿತಗೊಳಿಸುತ್ತಾರೆ. ಕಮಲಾಗೆ ಪಾಲಿಕೆಯ ಯೂನಿಫಾರಂ ಇಲ್ಲ. ಕಂದುಬಣ್ಣದ ಮೇಲ್ಬಟ್ಟೆ ನೀಡಲಾಗಿದ್ದು ಅದನ್ನು ವರ್ಷಪೂರ್ತಿ ತೊಡಬೇಕು. ಭಾನುವಾರ ಮಧ್ಯಾಹ್ನ ನಂತರ ರಜೆಯಲ್ಲಿ  ಅದನ್ನು ತೊಳೆದು ಹಾಕಿಕೊಳ್ಳುತ್ತೇನೆ'' ಎಂಬ ಕಮಲಾ ಕ್ವೀನ್ಸ್ ರಸ್ತೆ ಪಕ್ಕ ರಾಜೀವ್ ಗಾಂಧಿ ಕಾಲೊನಿಯಲ್ಲಿ ಸಣ್ಣ ಮನೆಯೊಂದರಲ್ಲಿ ಗಂಡ ಮಗನೊಂದಿಗೆ ವಾಸಿಸುತ್ತಿದ್ದಾರೆ.

ಆರೋಗ್ಯ ಸಮಸ್ಯೆ: ಪೌರ ಕಾರ್ಮಿಕರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಈ ಮಹಿಳೆಯರಿಗೆ ಗ್ಲೌಸ್ ನೀಡುವುದಿಲ್ಲ. ಕಸ ಕಡ್ಡಿ, ಕೊಳಕುಗಳನ್ನು ತಮ್ಮ ಬರಿಗೈಯಿಂದ ತೆಗೆಯಬೇಕು. ಪೌರಕಾರ್ಮಿಕರಿಗೆ ತಿಂಗಳಿಗೆ ಪಿಎಫ್, ಇಎಸ್ ಐ ಸೇರಿ 6 ಸಾವಿರದ 691 ರೂಪಾಯಿ ನೀಡಬೇಕು ಎಂದಿದೆ. ಆದರೆ ಕಾಂಟ್ರಾಕ್ಟರ್ ಗಳು ಇಎಸ್ ಐ ಹಣ ಕೊಡುವುದಿಲ್ಲ. ಹೆಣ್ಣುಮಕ್ಕಳಿಗೆ ತಾಯ್ತನ ರಜೆಯಿಲ್ಲ ಅಥವಾ ಇತರ ಯಾವುದೇ ಸೌಲಭ್ಯಗಳಿಲ್ಲ. ಯೂನಿಫಾರ್ಮ್ ನೀಡುವುದಿಲ್ಲ. ಎರಡು ವರ್ಷಗಳಿಗೊಮ್ಮೆ ಕಂದುಬಣ್ಣದ ಮೇಲ್ಬಟ್ಟೆ ಕೊಡುತ್ತಾರೆ. ಕೆಲವರು ಸಮಯಕ್ಕೆ ಸರಿಯಾಗಿ ಸಂಬಳ ಕೊಡುವುದಿಲ್ಲ. ಕೆಲವೊಮ್ಮೆ 2-3 ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮಹಿಳೆಯರಿಗೆ ವಾರಕ್ಕೊಂದು ರಜೆ ನೀಡಬೇಕು'' ಎಂದು ಒತ್ತಾಯಿಸುತ್ತಾರೆ ಬಾಲನ್.

ಹರ್ಯಾಣದ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರೆಲ್ಲರೂ ಖಾಯಂ ನೌಕರರು. ಅವರ ಆರಂಭದ ಸಂಬಳವೇ 14 ಸಾವಿರ ರೂಪಾಯಿ. ಅವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದು, ಅವರಿಗೆ ಎಲ್ಲಾ ಸೌಲಭ್ಯ ನೀಡಲಾಗುತ್ತದೆ. ನಮ್ಮ ಬೆಂಗಳೂರಿನಲ್ಲಿಯೂ ಅಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸುತ್ತಾರೆ ಬಾಲನ್.

ಬಿಬಿಎಂಪಿಯಲ್ಲಿ 21 ಸಾವಿರದ 887 ಪೌರ ಕಾರ್ಮಿಕರಿದ್ದುಸ ಅವರಲ್ಲಿ 18 ಸಾವಿರದ 709 ಕಾಂಟ್ರಾಕ್ಟ್ ಮತ್ತು 3 ಸಾವಿರದ 178 ಮಂದಿ ಖಾಯಂ ನೌಕರರು. ಅವರಲ್ಲಿ ಶೇಕಡಾ 95ರಷ್ಟು ಮಂದಿ ಮಹಿಳೆಯರು. ಆದರೆ ವಾಸ್ತವವಾಗಿ 12 ಸಾವಿರಕ್ಕೂ ಹೆಚ್ಚು ಗುತ್ತಿಗೆ ಪೌರಕಾರ್ಮಿಕರಿದ್ದು, ಅವರಲ್ಲಿ ಶೇಕಡಾ 95ರಷ್ಟು ಮಂದಿ ಮಹಿಳೆಯರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com