ಹರೀಶ್ ಪ್ರಕರಣ ಹಸಿರಾಗಿರುವಾಗಲೇ ಅಪಘಾತ ಸಂತ್ರಸ್ತನನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿಸಿದರು!

ಅಪಘಾತದಲ್ಲಿ ದೇಹ ತುಂಡಾಗಿ ಸಹಾಯಕ್ಕೆ ಮೊರೆಯಿಡುತ್ತಿದ್ದ ಹರೀಶ್ ಸಾವಿನ ಪ್ರಕರಣ ಇನ್ನೂ ಹಸಿರಾಗಿಯೇ ಇದೆ. ಅಪಘಾತಕ್ಕೀಡಾದ ಕಿಶೋರ್ ನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿಸಲಾಗಿದೆ.
ಆರೋಗ್ಯ ಸಚಿವ ಯುಟಿ ಖಾದರ್
ಆರೋಗ್ಯ ಸಚಿವ ಯುಟಿ ಖಾದರ್

ಬೆಂಗಳೂರು: ಅಪಘಾತದಲ್ಲಿ ದೇಹ ತುಂಡಾಗಿ ಸಹಾಯಕ್ಕೆ ಮೊರೆಯಿಡುತ್ತಿದ್ದ ಹರೀಶ್ ಸಾವಿನ ಪ್ರಕರಣ ಇನ್ನೂ ಹಸಿರಾಗಿಯೇ ಇದೆ.
ಸಾಯುವ ವೇಳೆಯಲ್ಲೂ ತನ್ನ ಅಂಗಾಂಗ ದಾನ ಮಾಡುವಂತೆ ಹರೀಶ್‌ ಮೊರೆಯಿಟ್ಟಿದ್ದಕ್ಕಾಗಿ, ಆತನ ಹೆಸರಿನಲ್ಲೇ ರಾಜ್ಯ ಸರ್ಕಾರ ಅಪಘಾತಕ್ಕೊಳಗಾದವರಿಗೆ ತುರ್ತು ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡದೇ ಇರುವ  ಮನಸ್ಥಿತಿ ಹಾಗೆಯೇ ಮುಂದುವರೆದಿದೆ.
ಅಪಘಾತಕ್ಕೀಡಾದ ಬಾಗಲೂರು ನಿವಾಸಿ ಕಿಶೋರ್ ಎಂಬ ವ್ಯಕ್ತಿಯನ್ನು ಚಿಕಿತ್ಸೆ ಕೊಡಿಸದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿಸಲಾಗಿದೆ. ಅಪಘಾತಕ್ಕೀಡಾದವರಿಗೆ ಸಾರ್ವಜನಿಕರು ಸಹಾಯ ಮಾಡುವುದಿರಲಿ ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಾಗಿ ಚಿಕಿತ್ಸೆ ನೀಡಲೇಬೇಕಾದ ಸರ್ಕಾರಿ ಆಸ್ಪತ್ರೆಯೂ ಕಿಶೋರ್ ಗೆ ಚಿಕಿತ್ಸೆ ನೀಡಲು ನಿರಾಕರಿಸಿದೆ.

ಗಂಭೀರ ಸ್ಥಿತಿಯಲ್ಲಿದ್ದ ಕಿಶೋರ್ ನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ, ಆದರೆ ಎರಡು ಆಸ್ಪತ್ರೆಗಳಲ್ಲಿ ಆತನನ್ನು ದಾಖಲಿಸಿಕೊಳ್ಳಲು ನಿರಾಕರಿಸಲಾಗಿದೆ. ಅಪಘಾತಕ್ಕೀಡಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಿದ ಕಿಶೋರ್ ಸದ್ಯಕ್ಕೆ ನಿಮಾನ್ಸ್ ನಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿಶೋರ್ ಬೈಕ್ ನಲ್ಲಿ ತೆರಳುತ್ತಿರಬೇಕಾದರೆ ಅರೇಹಳ್ಳಿ ಕ್ರಾಸ್ ಬಳಿ ರಾತ್ರಿ 11 :30 ವೇಳೆಗೆ ಅಪಘಾತಕ್ಕೀಡಾಗಿದ್ದ, ಅಪಘಾತದ ಬೆನ್ನಲ್ಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 108 ಆಂಬುಲೆನ್ಸ್ ಜೊತೆಯಲ್ಲೇ ಸ್ಥಳಕ್ಕೆ ಧಾವಿಸಿದ ಮುಖ್ಯ ಪೇದೆ ಹನುಮಂತಪ್ಪ, ಅಪಘಾತಕ್ಕೀಡಾದ ಕಿಶೋರ್ ನನ್ನು ಹತ್ತಿರದಲ್ಲೇ ಇದ್ದ ಮೊದಲು ವೈದೇಹಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರುದಿನ ಬೆಳಿಗ್ಗೆ ಬಂದು ನೋಡಿದರೆ ಅಪಘಾತಕ್ಕೀಡಾದ ಕಿಶೋರ್ ಗೆ ಚಿಕಿತ್ಸೆಯನ್ನೇ ಕೊಟ್ಟಿರಲಿಲ್ಲ!. ಈ ಬಗ್ಗೆ ಅಸ್ಪತ್ರೆಯವರನ್ನು ಪ್ರಶ್ನಿಸಿದ ಪೇದೆ ಖಲೀಮ್ ಉಲ್ಲಾ ಗೆ ಕಿಶೋರ್ ನ ಬಗ್ಗೆ ಮಾಹಿತಿ ಇಲ್ಲದ ಕಾರಣ ಚಿಕಿತ್ಸೆ ನೀಡಲಾಗಿಲ್ಲ ಎಂಬ ಉತ್ತರ ಬಂದಿದೆ. ಅಲ್ಲದೇ ಆಸ್ಪತ್ರೆ ಚಿಕಿತ್ಸೆಗಿಂತಲೂ ಬಿಲ್ಲಿಂಗ್ ಗೇ ಪ್ರಾಮುಖ್ಯತೆ ನೀಡಿತ್ತು ಎಂಬ ಆರೋಪ ಕೇಳಿಬಂದಿದೆ.       
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವೈದೇಹಿ ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ, ಆಸ್ಪತ್ರೆಯಲ್ಲಿ ಕಿಶೋರ್ ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂಬ ಉತ್ತರ ಬಂದಿದೆ. ನಂತರ ಪೇದೆ ಖಲೀಮ್ ಉಲ್ಲಾ ಕಿಶೋರ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೇ ನಿರಾಕರಿಸಲಾಗಿದೆ. ಕೊನೆಯಲ್ಲಿ ಅಪಘಾತ ಸಂತ್ರಸ್ತನನ್ನು ನಿಮಾನ್ಸ್ ಗೆ ದಾಖಲಿಸಲಾಗಿದ್ದು  ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಲು, ಕೈ, ತಲೆಗೆ ಗಂಭೀರವಾದ ಗಾಯಗಳಾಗಿರುವ ಕಿಶೋರ್ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆಸ್ಪತ್ರೆಯ ವೈಫಲ್ಯ ಆರೋಗ್ಯ ಸಚಿವ ಯುಟಿ ಖಾದರ್ ಗಮನಕ್ಕೆ ಬಂದಿದ್ದು, ಚಿಕಿತ್ಸೆ ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com