ಬೆಂಗಳೂರು: ಕೇಬಲ್ ವೈರ್ ನಿಂದ ಪತ್ನಿಯ ಕುತ್ತಿಗೆ ಬಿಗಿದು ಹತ್ಯೆ ಮಾಡಿದ ಪತಿ ಪರಾರಿಯಾಗಿರುವ ಘಟನೆ ಟಿ ದಾಸರಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಪೀಣ್ಯಾದ ಟಿ ದಾಸರಹಳ್ಳಿಯ ವಾಸವಿದ್ದ ಪ್ರಿಯಾಂಕ(22) ಹತ್ಯೆಯಾದ ದುರ್ದೈವಿ. ಖಾಸಗಿ ಕಂಪನಿಯಲ್ಲಿ ಕೆಲಸದಲ್ಲಿದ್ದ ಕಲ್ಲೇಶ್ ತನ್ನ ಅಕ್ಕನ ಮಗಳಾದ ಪ್ರಿಯಾಂಕಳನ್ನು ಮದುವೆಯಾಗಿದ್ದನು.
ಪ್ರಿಯಾಂಕಳ ಶೀಲ ಶಂಕಿಸುತ್ತಿದ್ದ ಕೆಲವು ತಿಂಗಳಿನಿಂದ ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದ. ಪ್ರಿಯಾಂಕ ಖಾಸಗಿ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡುತ್ತಿದ್ದಳು.
ನಿನ್ನೆ ಮನೆಯಲ್ಲಿ ಪ್ರಿಯಾಂಕ ಒಬ್ಬಳೇ ಇದ್ದಾಗ ಮನೆಗೆ ಬಂದ ಪತಿ ಕಲ್ಲೇಶ್ ಆಕೆಯ ಕುತ್ತಿಗೆಗೆ ಕೇಬಲ್ ವೈರ್ ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಪೋಷಕರು ಎಂದಿನಂತೆ ಕೆಲಸ ಮುಗಿಸಿ ರಾತ್ರಿ 10.30ಕ್ಕೆ ಮನೆಗೆ ಬಂದಾಗ ಮಗಳು ಕೊಲೆಯಾಗಿರುವುದು ಕಂಡು ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮದ್ಯಾಹ್ನದ ವೇಳೆಗೆ ಅಳಿಯ ಕಲ್ಲೇಶ್ ಮನೆಗೆ ಬಂದು ಹೋಗಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.