ನೌಕರಿ ಕೊಡ್ತೀವಿ ಅಂತಾ ಹೇಳಿದ್ವಾ: ವಿದ್ಯಾರ್ಥಿಗಳಿಗೆ ಕೃಷ್ಣ ಭೈರೇಗೌಡ ಆವಾಜ್

ನಿಮಗೆ ಕೃಷಿ ವಿವಿ ಸೇರು ಎಂದು ಯಾರಾದ್ರು ಫೋರ್ಸ್ ಮಾಡಿದ್ರಾ? ನಾವು ಕೆಲಸ ಕೊಡುತ್ತೇವೆ ಎಂದು ನಿಮ್ಮನ್ನು ಅಡ್ಮಿಷನ್ ಮಾಡಿಕೊಳ್ಳುವಾಗ ಭರವಸೆ ...
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ

ಬೆಂಗಳೂರು: ನಿಮಗೆ ಕೃಷಿ ವಿವಿ ಸೇರು ಎಂದು ಯಾರಾದ್ರು ಫೋರ್ಸ್ ಮಾಡಿದ್ರಾ?  ನಾವು ಕೆಲಸ ಕೊಡುತ್ತೇವೆ ಎಂದು ನಿಮ್ಮನ್ನು ಅಡ್ಮಿಷನ್ ಮಾಡಿಕೊಳ್ಳುವಾಗ ಭರವಸೆ ನೀಡಿದ್ವಾ?  ಉದ್ಯೋಗ ಕೊಡಲೇಬೇಕೆಂದು ಎಲ್ಲೂ ಹೇಳಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ವಿದ್ಯಾರ್ಥಿಗಳಿಗೆ ಆವಾಜ್ ಹಾಕಿ ಬೆವರಿಳಿಸಿದ್ದಾರೆ.

ಕಳೆದ ಏಳೆಂಟು ವರ್ಷಗಳಿಂದ ಕೃಷಿ ಇಲಾಖೆಗೆ ನೇಮಕಾತಿ ಆಗದ ಹಿನ್ನೆಲೆಯಲ್ಲಿ ವಿವಿ  ಪದವಿ ವಿದ್ಯಾರ್ಥಿಗಳು ಕೃಷಿ ಸಚಿವ ಕೃಷ್ಣ ಭೈರೇಗೌಡರನ್ನು ಭೇಟಿಯಾಗಿ ನೇಮಕಾತಿ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಸಚಿವರು ನೀಡಿದ ಉತ್ತರ ಉಡಾಫೆಯದ್ದಾಗಿತ್ತು. ಕೃಷಿ ಸಚಿವರ ಬೇಜವಾಬ್ದಾರಿ ಮಾತಿನ ವಿಡಿಯೋ ಇದೀಗ ವಾಟ್ಸಪ್ ಗಳಲ್ಲು ಹರಿದಾಡುತ್ತಿದೆ.

ಅಲ್ಲ ಸಾರ್, ಈಗಾಗಲೇ ಕೆಲಸ ಇಲ್ಲದೇ ನಮ್ಮಂತೋರು ನೂರಾರು ಜನ ಸಾಯ್ತಾ ಇದ್ದಾರೆ. ಅವರಿಗೆ ಕೆಲಸ ಕೊಡದೇ ಈಗ ಖಾಸಗಿ ಸೀಟುಗಳನ್ನೂ ಮತ್ತಷ್ಟು ಹೆಚ್ಚಳ ಮಾಡಿದ್ರೆ ನಾವೆಲ್ಲಿಗೆ ಹೋಗಬೇಕು, ಅವರೆಲ್ಲಿಗೆ ಹೋಗಬೇಕು’ ಅಂತ ವಿದ್ಯಾರ್ಥಿಗಳು ಸಮಸ್ಯೆ ಬಗ್ಗೆ ನಿವೇದನೆ ಮಾಡಿಕೊಂಡರೆ, ‘ಕೃಷಿ ವಿವಿ ಸೀಟುಗಳನ್ನು ಬರೀ ವಿದ್ಯಾರ್ಥಿಗಳು ಮಾತ್ರ ಕೇಳಲ್ಲ, ಮಾರ್ಕೆಟ್ ನಲ್ಲಿ ಬೇಕಾದಷ್ಟು ಜನ ಕೇಳ್ತಾರೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಸೀಟುಗಳನ್ನು ಹೆಚ್ಚಳ ಮಾಡ್ತೇವೆ. ನಿಮ್ನನ್ನ ಕೇಳಿ ಸೀಟು ಹೆಚ್ಚಳ ಮಾಡೋಕಾಗಲ್ಲ’ ಅಂತಾನೂ ಧಿಮಾಕಿನ ಉತ್ತರ ನೀಡಿದ್ದಾರೆ.

ನಾವೇನ್ ನಿಮಗೆ ಕೆಲಸ ಕೊಡ್ತೀವೆಂದು ಹೇಳಿದ್ವಾ? ಉದ್ಯೋಗ ಕೊಡಲೇಬೇಕೆಂದು ಎಲ್ಲೂ ಹೇಳಿಲ್ಲ. ಕೃಷಿ ವಿವಿ ಸೀಟುಗಳನ್ನು ಕೇವಲ ವಿದ್ಯಾರ್ಥಿಗಳು ಮಾತ್ರ ಕೇಳಲ್ಲ. ಮಾರ್ಕೆಟ್ ನಲ್ಲಿ ಬೇಕಾದಷ್ಟು ಜನ ಸೀಟು ಕೇಳ್ತಾರೆ. ಹಾಗಾಗಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಸೀಟುಗಳನ್ನು ಹೆಚ್ಚಳ ಮಾಡುತ್ತೇವೆ ಎಂಬುದು ಸಚಿವರ ಸಮಜಾಯಿಷಿ.

ಎಂಟತ್ತು ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಮತ್ತು ಹೊಸದಾಗಿ ಸೃಷ್ಠಿಯಾಗುತ್ತಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಹಣಕಾಸು ಇಲಾಖೆಯ ಅನುಮೋದನೆ ಕಾಯುತ್ತಿದೆ. ಇದನ್ನರಿತ ಕೃಷಿ ವಿವಿ ಪದವೀಧರರು ಈ ಹುದ್ದೆಗಳಿಗೆ ತಮ್ಮನ್ನು ಪರಿಗಣಿಸುವಂತೆ ದುಂಬಾಲು ಬಿದ್ದಾಗ ಸಚಿವರು ಕೊಟ್ಟ ಉತ್ತರ ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com